ಕಡೂರು: ತಾಲ್ಲೂಕು ಕೇಂದ್ರದಿಂದ ಸುಮಾರು 8 ಕಿಮೀ ದೂರದಲ್ಲಿರುವ ಬ್ರಹ್ಮಸಮುದ್ರ ಗ್ರಾಮದಲ್ಲಿರುವ ಹೊಯ್ಸಳ ನಿರ್ಮಿತ ವೀರನಾರಾಯಣ ದೇವಸ್ಥಾನ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿದ್ದರೂ ಜನಸಂಪರ್ಕದಿಂದ ದೂರವಾಗಿ ಹೊರಜಗತ್ತಿಗೆ ಅಜ್ಞಾತವಾಗಿಯೇ ಉಳಿದಿದೆ.
1172 ರಲ್ಲಿ ಹೊಯ್ಸಳ ದೊರೆ ನರಸಿಂಹ ದೇವನ ಶ್ರೀಕರಣಾಧಿಕಾರಿ ಆಚಿಮಯ್ಯ ಈ ದೇವಸ್ಥಾನದ ನಿರ್ಮಾತೃ. ಇಲ್ಲಿನ ಶಾಸನವೊಂದು ಈ ಗ್ರಾಮವನ್ನು ಶ್ರೀಮದನಾದಿಯಗ್ರಹಾರ ಎಂದು ಬಣ್ಣಿಸಿದೆ.ಮತ್ತೊಂದು ಶಾಸನದಲ್ಲಿ ಲಕ್ಷ್ಮೀನಾರಾಯಣಪುರ ಎಂದು ಉಲ್ಲೇಖವಾಗಿದೆ.
ಅದೇ ಕಾಲದ ಮತ್ತೊಬ್ಬ ಶ್ರೀಕರಣಾಧಿಕಾರಿಯಾಗಿದ್ದ
ನಾಕಿಮಯ್ಯನು ಇಲ್ಲಿ ನಾಕೇಶ್ವರ ದೇವಾಲಯವನ್ನು ಕಟ್ಟಿಸಿ ದೇವರ ಅಂಗಭೋಗ, ನೈವೇದ್ಯ, ಪೂಜಕರಿಗೆ, ವಿಪ್ರರಿಗೆ ಅಗ್ರಾಸನ ನಡೆಸಲೆಂದು ದಾನ ನೀಡಿದ್ದಾನೆ. ಈ ದಾನವನ್ನು ‘ನೈಷ್ಠಿಕಸ್ಥಾನ’ವೆಂದು ತಿಳಿಸಿ ಶಂಖಮಠಕ್ಕೆ ಸೇರಿದ ಶ್ರೀಮತ್ ತ್ರಿಲೋಚನಾಚಾರ್ಯರಿಗೆ ನೀಡಲಾಗಿದೆ. ಬ್ರಹ್ಮ ಸಮುದ್ರವು ಶೈವ, ವೈಷ್ಣವ ಜನರೆಲ್ಲ ಒಟ್ಟಾಗಿ ನೆಲೆಸಿದ್ದ ಭಾವೈಕ್ಯತೆಯ ತಾಣವಾಗಿತ್ತು.
ವೀರನಾರಾಯಣ ಸ್ವಾಮಿ ದೇವಸ್ಥಾನದೊಳಗೆ .3 ಅತ್ಯಂತ ಸುಂದರ ಭುವನೇಶ್ವರಿಗಳಿವೆ. ಪ್ರಧಾನ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ಕೆತ್ತನೆ ಮನೋಜ್ಞವಾಗಿದೆ. ಪ್ರಧಾನ ದೇವತೆ ವೀರನಾರಾಯಣಸ್ವಾಮಿ. ಮೂರೂವರೆ ಅಡಿ ಎತ್ತರದ ಗರುಡಪೀಠದ ಮೇಲೆ ನಿಂತಿರುವ ವೀರನಾರಾಯಣನ ವಿಗ್ರಹ ಮನಮೋಹಕವಾಗಿದೆ. ಪ್ರಭಾವಳಿಯಲ್ಲಿ ದಶಾವತಾರದ ವರ್ಣನೆಯಿದೆ ಗರ್ಭಗೃಹದ ಬಾಗಿಲ ಮೇಲಿರುವ ಮಕರ ತೋರಣದ ಮಧ್ಯಭಾಗದಲ್ಲಿ ಲಕ್ಷ್ಮೀನಾರಾಯಣಸ್ವಾಮಿ ವಿಗ್ರಹ ಹೊಯ್ಸಳ ಶಿಲ್ಪಕಲಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ. ಒಳಭಾಗದಲ್ಲಿ ಸಾಣೆಹಿಡಿದಿರುವ ಕಂಬಗಳು ಸುಂದರವಾಗಿವೆ.
ದೇವಸ್ಥಾನದೊಳಗೆ ಸುಮಾರು 3 ಅಡಿ ಎತ್ತರದ ಯೋಗಾನರಸಿಂಹ ವಿಗ್ರಹ ಮತ್ತು ವೇಣುಗೋಪಾಲ ಹಾಗೂ ಗಣಪತಿಯ ವಿಗ್ರಹವಿದೆ. ಬಹುಶಃ ಈ ವಿಗ್ರಹಗಳು ಬೇರೆ ದೇವಸ್ಥಾನದಲ್ಲಿದ್ದು, ಇಲ್ಲಿಗೆ ತಂದಿರಬಹುದೆಂಬ ಊಹೆಯಿದೆ.
ಅದ್ಭುತ ಶಿಲ್ಪಕಲೆ ಮತ್ತು ವಾಸ್ತು ವೈಭವಕ್ಕೆ ಉದಾಹರಣೆಯಾದ ಈ ದೇವಸ್ಥಾನ ಇತಿಹಾಸಕ್ತರಿಗೆ,ಅಧ್ಯಯನ ನಿರತರಿಗೆ ಬಹುದೊಡ್ಡ ಆಸ್ತಿ. ದೇವಸ್ಥಾನ ಸುಸ್ಥಿತಿಯಲ್ಲಿದ್ದರೂ ಅದರ ನಿರ್ವಹಣೆ ಶೂನ್ಯ. ಪುರಾತತ್ವ ಇಲಾಖೆ ಸಂರಕ್ಷಿತ ಸ್ಮಾರಕವೆಂಬ ಫಲಕವನ್ನೂ ಹಾಕಿಲ್ಲ.ಅವರಿಗಿತ್ತ ತಲೆ ಹಾಕಲು ಪುರುಸೊತ್ತಿಲ್ಲ. ಗ್ರಾಮಸ್ಥರೇ ಪೂಜೆ ಮುಂತಾದ ಖರ್ಚನ್ನು ನಿಭಾಯಿಸುತ್ತಾರೆ.
ಈ ಸುಂದರ ಐತಿಹಾಸಿಕ ಮಹತ್ವದ ದೇವಸ್ಥಾನವನ್ನು ಹೊರಜಗತ್ತಿಗೆ ಪರಿಚಯಿಸುವ ಕಾರ್ಯವಾಗಬೇಕು. ಮಜರಾಯಿ ಇಲಾಖೆ ಇದರತ್ತ ಗಮನ ಹರಿಸಬೇಕು….


