ಕಡೂರು ಬಳಿಯ ಮಲ್ಲೇಶ್ವರದ ಬಳಿ ಒಂದು ತಾಣ. ಇಲ್ಲಿ ಸುತ್ತಲೂ ತೆಂಗು, ಕಂಗು, ಬಾಳೆ ಮುಂತಾದ ಹಸಿರುಟ್ಟ ಭೂತಾಯಿಯ ನಡುವೆ ಒಂದು ಅತ್ಯಂತ ಅಪರೂಪದ, ವಿಶಿಷ್ಟ ದೇಗುಲವಿದೆ. ತಿರುಪತಿಯ ಗೋವಿಂದನ ಪ್ರತಿರೂಪವಾಗಿ ಇಲ್ಲಿ ನೆಲೆಸಿರುವ ಸ್ವಾಮಿ ಕನಕರಾಯ. ಈ ಕನಕರಾಯಸ್ವಾಮಿ ಇಲ್ಲಿರುವ ವಿಚಾರವೇ ಬಹಳಷ್ಟು ಜನಕ್ಕೆ ತಿಳಿಯದು.ಈ ದೇಗುಲದ ಬಗ್ಗೆ ಈ ಮಾಹಿತಿ.
ದಾಸಶ್ರೇಷ್ಟ ಕನಕದಾಸರು ತಮ್ಮ ಬಾಡ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಉಡುಪಿಗೆ ಹೊರಡುತ್ತಾರೆ ಮಾರ್ಗಮಧ್ಯೆ ರಾತ್ರಿಯಾದ ಸಮಯ ಕಡೂರು ಬಳಿಯ ಕಲ್ಲುಗುಡ್ಡದಂತಹ ತಾಣದಲ್ಲಿ ಕನಕದಾಸರು ತಂಗುತ್ತಾರೆ. ಪೂಜೆ ಮಾಡಲು ಆರಾಧ್ಯದೈವ ಆದಿಕೇಶವ ಇಲ್ಲವಲ್ಲ?! ಕನಕರು ಯೋಚಿಸಲಿಲ್ಲ. ತಮ್ಮ ಆದಿ ಕೇಶವನನ್ನು ಭಕ್ತಿಯಿಂದ ಕರೆದರು. ಅವರ ಭಕ್ತಿಗೆ ಮೆಚ್ಚಿದ ಆದಿಕೇಶವ ಅಲ್ಲೊಂದು ಬಂಡೆಯಲ್ಲಿ ತಿರುಪತಿ ಶ್ರೀನಿವಾಸನ ರೂಪದಲ್ಲಿ ಒಡಮೂಡಿದ. ಕನಕರು ಮನದಣಿಯೆ ಪೂಜಿಸಿ ನೈವೇದ್ಯವಿತ್ತರು. ನಂತರ ಉಡುಪಿಯೆಡೆ ಪ್ರಯಾಣ ಬೆಳೆಸಿದರು.ಶ್ತೀನಿವಾಸ ಅಲ್ಲೆ ನೆಲೆನಿಂತ. ಕನಕರ ಕರೆಗೆ ಓಗೊಟ್ಟು ಬಂದ ಶ್ರೀನಿವಾಸ ಕನಕರಾಯ ಎಂದು ಹೆಸರಾದ.!
ಈ ಕಥೆ ನಿಜವೇ ಆಗಿರಬಹುದಾದ ಸಾಧ್ಯತೆಗಳೇ ಹೆಚ್ಚಿದೆ.ಏಕೆಂದರೆ ಕನಕರ ಜೀವಿತ ಕಾಲಕ್ಕೂ ಈ ದೇವಸ್ಥಾನ ನಿರ್ಮಾಣ ಶೈಲಿಗೂ ತಾಳೆಯಾಗುತ್ತದೆ. ಬಹುಮುಖ್ಯವಾಗಿ ಕನಕರು ಯಮನ ಅಂಶದವರು. ಭಗವಾನ್ ವ್ಯಾಸರಾಜರ ಪ್ರೀತಿಯ ಶಿಷ್ಯರು. ವ್ಯಾಸರಾಜರು ಕಟ್ಟಿಸುತ್ತಿದ್ದ ಕೆರೆಯ ತೂಬಿಗೆ ಅಡ್ಡಲಾಗಿದ್ಸ ಬಂಡೆಯೊಂದನ್ನು ಕೋಣ ಮಂತ್ರ ಜಪಿಸಿ ಕೋಣವನ್ನು ಕರೆಸಿ ಅದರ ಕೋಡಿನಿಂದ ಆ ಬಂಡೆಯನ್ನು ತೆಗೆಸಿಹಾಕಿದರು.
ಅಂತಹ ಕನಕದಾಸರು ಮೂಲತಃ ಕುರುಬ ಜನಾಂಗದವರು. ಕನಕರು ಕುಲ ಕುಲ ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ ಎಂದರು.ಅದಿರಲಿ. ಈ ಕುರುಬ ಜನಾಂಗ ಅಥವಾ ಹಾಲುಮತಸ್ಥ ಜನಾಂಗದವರು ಕಡೂರಿನಲ್ಲಿ ಹೆಚ್ಚಿದ್ದಾರೆ.ಮೂಲತಃ ಕೃಷಿ ಪ್ರಧಾನ ಉದ್ಯೋಗ. ಈ ಕನಕರಾಯ ದೇವಸ್ಥಾನಕ್ಕೆ ಮೂಲ ಭಕ್ತರು ಕಡೂರಿನ ಹಾಲುಮತಸ್ಥರು ಪ್ರಥಮರು ಎಂಬುದೇ ವಿಶೇಷ.
ಈ ದೇವಸ್ಥಾನದ ಸುತ್ತ ಮುತ್ತಲಿರುವ ಹೊಲಗಳ ಮಾಲೀಕರುಗಳು, ಯುವಕರು ಸೇರಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಸುಂದರ ದೇವಸ್ಥಾನ ತಲೆಯೆತ್ತಿದೆ.
ಕನಕರಾಯ ನಂತೂ ಮಂದಸ್ಮಿತ ನೋಟದಿಂದ ಬಹು ಮುದ್ದಾಗಿ ಕಾಣುತ್ತಾನೆ.ತಿರುಪತಿಯ ಗೋವಿಂದ ನಂತೆಯೇ ವಿಗ್ರಹ ರಚನೆಯಾಗಿದೆ. ಎದೆಯ ಮೇಲೆ ಲಕ್ಷ್ಮಿಯರಲ್ಲದೆ ಶಂಕ ಚಕ್ರ ಹಿಡಿದು ವರದ ಹಸ್ತ ತೋರಿಸುತ್ತಿರುವ ಮನಮೋಹಕ ವಿಗ್ರಹವಿದು. ಬಂಡೆಯ ಮೇಲೆ ಮೂಡಿರುವ ಅದ್ಭುತ ಶಿಲ್ಪವಿದು.
ಕಡೂರಿನ ಶ್ರೀ ಮಧುಸೂಧನಾಚಾರ್ಯರ ಮಾರ್ಗದರ್ಶನ ಈ ಕಾರ್ಯದಲ್ಲಿ ಹೆಚ್ಚಿನದು.ರಮೇಶಾಚಾರ್ಯರ ಪೂಜೆ ನಿತ್ಯ ಗೋವಿಂದನಿಗೆ ಸಲ್ಲುತ್ತದೆ. ಶೀಘ್ರದಲ್ಲೆ ಗೋವಿಂದನ ನೂತನ ದೇವಸ್ಥಾನ ಲೋಕಾರ್ಪಣೆಯಾಗಲಿದೆ.
ಕಡೂರಿನಿಂದ ಕೆಲವೇ ನಿಮಿಷಗಳ ಹಾದಿಯಲ್ಲಿ ಕನಕರಾಯನ ಗುಡ್ಡವಿದೆ. ಕನಕದಾಸರು ಬಂದು ಇದ್ದ ಪುಣ್ಯ ನೆಲ ನನ್ನ ಕಡೂರು. 

