
ಕೆ.ಆರ್.ಮಹೇಶ ಒಡೆಯರ್.ಚಿಂತಕ
ಕೆಲದಿನಗಳ ಹಿಂದಷ್ಟೆ ವಿಧಾನ ಸಭೆ ವಿಶೇಷ ಅಧಿವೇಶನ ಮುಗಿದು ಹಲವಾರು ಅನಪೇಕ್ಷಿತ ಘಟನೆಗಳಿಗೆ ಸಾಕ್ಷಿಯಾಯಿತು.ಇದೀಗ ಬಜೆಟ್ ಅಧಿವೇಶನ ಅರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಸಭೆ ಅಧಿವೇಶನ ನಡೆಯುವ ಸಮಯದಲ್ಲಿ ಕೆಲ ಬದಲಾವಣೆಗಳಾದರೆ ಒಳಿತೆಂಬ ಚಿಂತನೆ ಮೂಡಿದಾಗ……
ವಿಧಾನಮಂಡಲದ ಅಧಿವೇಶನ ಎಂದರೆ ರಾಜ್ಯದ ಸಮಗ್ರತೆಯ ಮಿಲನವಾಗುವ, ಚರ್ಚೆಯಾಗುವ ತಾಣ. ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳ ವಾಕ್ಸಮರದ ಸ್ಥಳವೂ ಹೌದು. ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಅನುಭವಗಳನ್ನು ಒರೆಗೆ ಹಚ್ಚುವ ಸ್ಥಳವೂ ಹೌದು. ಸದನ ನಡೆಸುವವರ ಪ್ರೌಢಿಮೆ,ಪ್ರಬುದ್ಧತೆಯನ್ನು ಸಾಕ್ಷೀಕರಿಸುವ ಸಮಯವೂ ಹೌದು.
ವಿಧಾನಸಭಾಧ್ಯಕ್ಷ ಸ್ಥಾನವೆಂದರೆ ವಿಧಾನಸಭೆಯ ಪೂರ್ಣ ಆಗುಹೋಗುಗಳ ಜವಾಬ್ದಾರಿ ಹೊತ್ತ ಸ್ಥಾನ. ಆ ಸ್ಥಾನಕ್ಕೆ ಆಯ್ಕೆಯಾದವರು ತಮ್ಮ ಜವಾಬ್ದಾರಿ ಅರಿತು ಸಾಂವಿಧಾನಿಕವಾಗಿ ಕಪ್ಪು ಚುಕ್ಕಿ ಬಾರದಂತೆ ನಿರ್ವಹಣೆ ಮಾಡಬೇಕೆಂಬ ನಿರೀಕ್ಷೆ ಸಹಜ. ಈವರೆಗೆ ವಿಧಾನ ಸಭಾಧ್ಯಕ್ಷರಾದವರಲ್ಲಿ ಬಹಳಷ್ಟು ಜನರ ಕಾರ್ಯನಿರ್ವಹಣೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
ಆದರೆ ಇತ್ತೀಚಿನ ದಿನಮಾನಗಳಲ್ಲಿ ನಡೆಯುವ ವಿಧಾನಸಭೆ ಅಧಿವೇಶನಗಳಲ್ಲಿ ಸಭಾಧ್ಯಕ್ಷ ಸ್ಥಾನದಲ್ಕಿರುವವರು
ತಮ್ಮ ಸ್ಥಾನದ ಮಹತ್ವವನ್ನು ಅರಿತಿಲ್ಲವೋ ಅಥವಾ ಅರಿತಿಲ್ಲದಂತೆ ನಾಟಕವಾಡುತ್ತಿದ್ದಾರೋ ಅಥವಾ ತಾವಿದ್ದ ಪಕ್ಷಕ್ಕೆ ನಿಷ್ಠರಾಗಿ ತಮ್ಮ ಸ್ಥಾನದ ಗೌರವಕ್ಕೆ ಚ್ಯುತಿ ಬರುವಂತೆ ವರ್ತಿಸುತ್ತಿದ್ದಾರೋ ಎಂಬುದು ತಿಳಿಯದಾಗಿದೆ. ಕೆಲವೇ ದಿನಗಳ ಹಿಂದೆ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ನಡೆದ ಪ್ರಹಸನಗಳನ್ನು ಗಮನಿಸಿದರೆ ಪ್ರಾಜ್ಞರಿಗೆ ಒಂದಿಷ್ಟು ಕಸಿವಿಸಿಯಾಗುತ್ತದೆ. ಅತ್ಯಂತ ಗೌರವಯುತವಾದ ಸ್ಥಾನದಲ್ಲಿ ಕುಳಿತ ಸಭಾಧ್ಯಕ್ಷರು ತಮ್ಮ ಕಾರ್ಯ ನಿರ್ವಹಣೆ ಯಲ್ಲಿ ಸೂಕ್ತ ನಡೆ ಅನುಸರಿಸಲಿಲ್ಲ ಎಂಬ ಮನೋಭಾವನೆ ಮೂಡಿದ್ದಂತೂ ಸಹಜ.
ವಿಶೇಷ ಅಧಿವೇಶನ ಆರಂಭದಲ್ಲೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವುದಿಲ್ಲ ಎಂಬ ಸುದ್ದಿ ಪ್ರಚಾರವಾಗಿ ಬಹಳಷ್ಟು ಚರ್ಚೆಗಳಾದವು. ಅಧಿವೇಶನಕ್ಕೆ ರಾಜ್ಯಪಾಲರು ಆಗಮಿಸಿದ ಸಂದರ್ಭದಲ್ಲೆ ನಾಟಕೀಯ ಬೆಳವಣಿಗೆಗಳು ನಡೆದವು. ರಾಜ್ಯಪಾಲರ ನಿರ್ಗಮನದ ಬೆನ್ನಲ್ಲೆ ಪರ ವಿರೋಧದ ಮಾತುಗಳು ಪುಂಖಾನುಪುಂಖವಾಗಿ ಹರಿದಾಡಿದವು.ಅಧಿವೇಶನ ಉದ್ದೇಶಿಸಿ ಮಾತನಾಡದೆ ರಾಜ್ಯಪಾಲರು ಉದ್ದೇಶಪೂರ್ವಕವಾಗಿ ತಪ್ಪು ನಡೆ ಅನುಸರಿಸುತ್ತಿದ್ದಾರೆ. ಅವರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆಡಳಿತ ಪಕ್ಷದವರು ಬೊಬ್ಬೆ ಹೊಡೆದರೆ ರಾಜ್ಯಪಾಲರ ನಡೆ ಸರಿಯಿದೆ. ಅವರನ್ನು ಅವಮಾನಿಸಲಾಗುತ್ತಿದೆ ಎಂದು ವಿರೋಧ ಪಕ್ಷದವರು ಪ್ರತಿಪಾದಿಸಿದರು. ಒಟ್ಟಾರೆ ರಾಜ್ಯಪಾಲರ ಭಾಷಣದ ಘಟ್ಟವೇ ತೀವ್ರ ಚರ್ಚೆಗೆ ಒಳಗಾಯಿತು.
ಇಲ್ಲಿ ಗಮನಿಸಲೇಬೇಕಾದ ವಿಚಾರವೆಂದರೆ ರಾಜ್ಯಪಾಲರು ರಾಜ್ಯದ ಪ್ರಥಮ ಪ್ರಜೆ. ಸರ್ಕಾರದ ಯಾವುದೇ ಆದೇಶವಿದ್ದರೂ ಅದನ್ನು ರಾಜ್ಯಪಾಲರ ಹೆಸರಲ್ಲೆ ಹೊರಡಿಸಲಾಗುತ್ತದೆ. ಇಡೀ ರಾಜ್ಯದ ಆಡಳಿತವೆಲ್ಲವನ್ನೂ ಸರ್ಕಾರ ಮಾಡುತ್ತದೆಯಾದರೂ ಅದೆಲ್ಲವೂ ರಾಜ್ಯಪಾಲರ ಹೆಸರಲ್ಲೆ ನಡೆಯುತ್ತದೆ. ಜಂಟಿ ಅಧಿವೇಶನದಲ್ಲಿ ಮಾತನಾಡುವಾಗಲೂ ರಾಜ್ಯಪಾಲರು ನಮ್ಮ ಸರ್ಕಾರ ಎಂದೇ ಹೇಳುತ್ತಾರೆ. ಒಟ್ಟಾರೆ ಇದರರ್ಥ ಸರ್ಕಾರದ ಎಲ್ಲ ಕಾರ್ಯಗಳೂ ರಾಜ್ಯಪಾಲರ ಅಂಕಿತ ಪಡೆದೇ ಅನುಮೋದನೆಗೊಳ್ಳಬೇಕು ಎಂಬುದಾಗಿದೆ.
ಮನ್ರೇಗಾ ಯೋಜನೆಯನ್ನು ವಿಬಿಜಿ ರಾಮ್ ಜಿ ಎಂದು ಬದಲಾಯಿಸಿದ ಕೇಂದ್ರ ಸರ್ಕಾರದ ನಡೆಯನ್ನು ರಾಜ್ಯ ಸರ್ಕಾರ ವಿರೋಧಿಸಿದೆ. ಇದೇ ಅಂಶವೂ ರಾಜ್ಯ ಸರ್ಕಾರ ಸಿದ್ದಪಡಿಸಿದ ಭಾಷಣದಲ್ಲಿ ಅಡಕವಾಗಿತ್ತು. ಇದನ್ನು ಓದಲು ರಾಜ್ಯಪಾಲರು ಸಿದ್ದರಿರಲಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಲೇ ಬೇಕು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಲಾಗಿದೆ. ಒಂದಿಷ್ಟು ಬದಲಾವಣೆಯನ್ನು ಮಾಡಲಾಗಿದೆ. ಇದೇ ರಾಜ್ಯ ಸರ್ಕಾರದ ಅಥವಾ ಕಾಂಗ್ರೆಸ್ಸಿನ ವಿರೋಧಕ್ಕೆ ಕಾರಣ. ಅದೇನೇ ಇದ್ದರೂ ಚರ್ಚೆ ಮಾಡಲು ಅವಕಾಶವಿದೆ.ಸ್ವಾತಂತ್ರ್ಯವಿದೆ. ಅದನ್ನು ಬಿಟ್ಟು ಆ ಯೋಜನೆಗೆ ವಿರೋಧವನ್ನು ರಾಜ್ಯಪಾಲರ ಬಳಿ ಹೇಳಿಸಲು ಹೊರಟದ್ದು ರಾಜ್ಯಸರ್ಕಾರದ ತಪ್ಪು ನಡೆ ಎಂದೇ ಹೇಳಬಹುದು. ಸಹಜವಾಗಿಯೇ ಕೇಂದ್ರ ಸರ್ಕಾರದ ಯೋಜನೆಗಳನ್ನು ತಪ್ಪೆಂದು ಹೇಳಲು ರಾಜ್ಯಪಾಲರು ನಿರಾಕರಿಸಿದ್ದಾರೆ.ಆದರೆ ಅದನ್ನೇ ಬಹುದೊಡ್ಡ ತಪ್ಪು ಎಂಬಂತೆ ಆಡಳಿತ ಪಕ್ಷ ಪ್ರತಿಪಾದಿಸಿ ರಾಜ್ಯಪಾಲರಿಗೆ ಅಗೌರವ ತೋರುವಂತೆ ವರ್ತಿಸಿದ್ದು ಅಕ್ಷಮ್ಯ. ವಿರೋಧ ಪಕ್ಷದವರು ಮತ್ತಷ್ಟು ಸಮರ್ಥವಾಗಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸುವಲ್ಲಿ ಚಿಂತಿಸಬಹುದಿತ್ತು. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಆಡಳಿತ ಪಕ್ಷದ ಸದಸ್ಯರನ್ನು ಎಲ್ಲೆ ಮೀರಂದಂತೆ ನಿಯಂತ್ರಿಸಲು ತಮ್ಮ ಅಧಿಕಾರವನ್ನು ಉಪಯೋಗಿಸಿಕೊಳ್ಳಬಹುದಿತ್ತು. ಆದರೆ ಇದನ್ಯಾವುದನ್ನೂ ಮಾಡಲೇ ಇಲ್ಲ ಎಂಬುದು ಅವರ ಕಾರ್ಯವೈಖರಿ ಬಗ್ಗೆ ಬೇಸರ ಮೂಡಿಸವಂತೆ ಮಾಡಿದೆ.
ನಾಲ್ಕು ಬಾರಿ ಶಾಸಕರಾಗಿರುವ ಯು.ಟಿ.ಖಾದರ್ ಅವರು ಯುವ ಸಮೂಹಕ್ಕೆ ಆದರ್ಶವಾಗುಳಿಯುವಂತೆ ತಮ್ಮ ಸ್ಥಾನ ನಿರ್ವಹಣೆ ಮಾಡಲು ಮುಂದಾಗಬಹುದಿತ್ತು. ಅವರ ಮೇಲೆ ಬಹಳ ನಿರೀಕ್ಷಣೆ ಇತ್ತು.ಈಗಲೂ ಇದೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸ್ಥಾನದ ನಿರ್ವಹಣೆ ಮಾಡಲು ಯಾವುದೇ ಅಡ್ಡಿಯಿರಲಿಲ್ಲ.
ಇದರ ನಂತರ ಅಧಿವೇಶನದಲ್ಲಿ ನಡೆದ ಹಲವಾರು ಘಟನೆಗಳು ವಿಧಾನ ಸಭಾಧ್ಯಕ್ಷರ ಕಾರ್ಯನಿರ್ವಹಣೆಯ ಬಗ್ಗೆ ಸಾರ್ವಜನಿಕವಾಗಿಯೇ ಚರ್ಚೆ ಆರಂಭವಾಗುವಂತೆ ಮಾಡಿತು. ವಿಧಾನ ಸಭಾಧ್ಯಕ್ಷರು ಪಕ್ಷ ಬೇಧ ಮರೆತು ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು. ರಾಜ್ಯದ ಪೂರ್ಣ ಜವಾಬ್ದಾರಿ ರಾಜ್ಯಪಾಲರದ್ದು ಹೇಗೋ ಹಾಗೆ ವಿಧಾನ ಸಭೆಯ ಪೂರ್ಣ ಜವಾಬ್ದಾರಿ ವಿಧಾನ ಸಭಾಧ್ಯಕ್ಷರದ್ದು. ಯಾವುದೇ ಪೂರ್ವಾಗ್ರಹವಿಲ್ಕದೆ,ತಾರತಮ್ಯವಿಲ್ಲದೆ ಸಭೆಯನ್ನು ನಡೆಸಬೇಕಾದ ಜವಾಬ್ದಾರಿ ಅವರದ್ದು. ಯಾವುದೇ ಪಕ್ಷದ ಸದಸ್ಯರಾಗಲಿ ಅವರು ತಪ್ಪು ನಡೆ ಅನುಸರಿಸಿದರೆ, ಅಸಂವಿಧಾನಿಕ ಪದ ಬಳಕೆ ಮಾಡಿದರೆ ಅದನ್ನು ಅಲ್ಲೆ ತಿದ್ದುವ,ಎಚ್ಚರಿಕೆ ನೀಡುವ, ಅಗತ್ಯ ಬಿದ್ದರೆ ತೀವ್ರ ಕ್ರಮ ಕೈಗೊಳ್ಳುವ ಅಧಿಕಾರ ಅವರಿಗಿದೆ.ಕೆಲವೊಮ್ಮೆ ಆಡಳಿತ ಪಕ್ಷದ ಸದಸ್ಯರಿಗೂ ಕಟುವಾಗಿಯೇ ಹೇಳುವಂತಹ ಪರಿಸ್ಥಿತಿ ಬಂದರೂ ಅದನ್ನು ಹೇಳಬೇಕಾದ ಧ್ರಾಷ್ಟ್ಯ ಅವರಿಗಿರಬೇಕು. ಹಲವಾರು ಬಾರಿ ಒಂದಿಷ್ಟು ಅತಿರೇಖದ ಘಟನೆಗಳು ನಡೆದಿವೆ. ಆಗ ಸಭಾಧ್ಯಕ್ಷರುಗಳು ತಮ್ಮ ಜವಾಬ್ದಾರಿಯನ್ನು ಸಾಂವಿಧಾನಿಕವಾಗಿಯೇ ನಿರ್ವಹಿಸಿದ್ದಾರೆ. ಈ ಹಿಂದೆ ವಿಧಾನ ಸಭಾಧ್ಯಕ್ಷರಾಗಿದ್ದ ವೈಕುಂಠ ಬಾಳಿಗಾ, ನಾಗರತ್ನಮ್ಮ,ಬಣಕಾರ್, ಬಿ.ಎಲ್.ಶಂಕರ್, ಕಾಗೋಡು ತಿಮ್ಮಪ್ಪ, ಎಸ್.ಎಂ.ಕೃಷ್ಣ, ರಮೇಶ್ ಕುಮಾರ್,ಕೆ.ಆರ್.ಪೇಟೆ ಕೃಷ್ಣ,ಕೆ.ಜಿ.ಬೋಪಯ್ಯ ಮುಂತಾದವರು ತಾವು ವಿಧಾನ ಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ತಮ್ಮ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿದ್ದು ಎಲ್ಲರ ಮನದಲ್ಲಿ ಹಸಿರಾಗಿದೆ. ಬಹಳಷ್ಟು ಸಂದರ್ಭದಲ್ಲಿ ಕಿರಿಯ ಸದಸ್ಯರಿಗೆ ಕಿವಿಹಿಂಡಿ ಮಾರ್ಗದರ್ಶನ ನೀಡಿದ ಅನೇಕ ಉದಾಹರಣೆಗಳು ಇಂದಿಗೂ ದಾಖಲೆಯಾಗಿ ಉಳಿದಿವೆ.ಸಾಂವಿಧಾನಿಕ ಬಿಕ್ಕಟ್ಟಿನ ಸಂದರ್ಭಗಳಲ್ಲೂ ಬಹಳ ಸಮರ್ಥವಾಗಿ ಯಾವುದೇ ತಾರತಮ್ಯ ಭಾವನೆ ತೋರದೆ ಸಭಾಧ್ಯಕ್ಷ ಪೀಠಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದ ಪರಿ ಆ ಸ್ಥಾನಕ್ಕೆ ಬರುವ ಎಲ್ಲರಿಗೂ ಅನುಕರಣೀಯವಾಗಿಯೇ ಉಳಿದಿದೆ ಎಂಬುದು ಸುಳ್ಳಲ್ಲ.
ಈ ಹಿಂದೆ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಬಿಜೆಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ, ಗೊತ್ತುವಳಿಯನ್ನು ಮತಕ್ಕೆ ಹಾಕಿದಾಗ ಸಭಾಧ್ಯಕ್ಷ ಪೀಠದಲ್ಲಿದ್ದ ರಮೇಶ್ ಕುಮಾರ್ ಅವರು ತೋರಿದ ಸ್ಥಿತಪ್ರಜ್ಞ ನಿರ್ವಹಣೆ, ಎರಡೂವರೆ ದಿನಗಳ ಕಾಲ ಮಾತನಾಡಲು ಬಯಸಿದ ಪ್ರತೀ ಸದಸ್ಯರಿಗೂ ಸಮಯ ನೀಡಿ ತಾಳ್ಮೆಯಿಂದ ಕೇಳಿದ್ದು, ಕಡೆಗೆ ಗೊತ್ತುವಳಿಯನ್ನು ಮತಕ್ಕೆ ಹಾಕಿ ಫಲಿತಾಂಶ ಘೋಷಣೆ ಮಾಡಿದ್ದು, ನಂತರ ಅವರು ಸಭಾಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಪೂರ್ಣ ಮಾಡಿದ ರೀತಿ ಇಲ್ಲಿ ಉಲ್ಲೇಖನೀಯ.
ಇನ್ನು ವಿಧಾನ ಸಭೆಯಲ್ಲಿ ಸಭ್ಯತೆಯ ಎಲ್ಲೆ ಮೀರದಂತೆ ಮಾತನಾಡಿ ಸದನದ ಗೌರವವನ್ನು ಕಾಪಾಡುವುದು ಪ್ರತೀ ಸದಸ್ಯನ ಕರ್ತವ್ಯ.
ಆದರೆ ವಿಶೇಷ ಅಧಿವೇಶನದಲ್ಲಿ ಶಾಸಕ ಕೆ.ಎನ್.ಶಿವಲಿಂಗೇಗೌಡರು ಮಾತನಾಡುವ ಸಂದರ್ಭದಲ್ಲಿ ಅವರು ಆಡಿದ ಮಾತುಗಳು, ತೋರಿದ ಹಾವಭಾವ ಖಂಡಿತ ವಿಧಾನಸಭೆಯಲ್ಲಿ ಒಂದು ಕಪ್ಪು ಚುಕ್ಕಿಯಾಗಿಯೇ ಉಳಿಯುವುದರಲ್ಲಿ ಸಂಶಯವಿಲ್ಲ. ಗಮನಾರ್ಹ ಅಂಶವೆಂದರೆ ಶಿವಲಿಂಗೇಗೌಡರ ಮಾತುಗಳನ್ನು ನಗುತ್ತಲೇ ಕೇಳುತ್ತಿದ್ದ ಸಭಾಧ್ಯಕ್ಷರ ನಡೆ ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕವಾಗಿಯೇ ಮೂಡಿತು. ಒಂದು ನಿಗಮದ ಅಧ್ಯಕ್ಷರೂ ಆಗ ಶಿವಲಿಂಗೇಗೌಡರು ವಿರೋಧ ಪಕ್ಷದ ಶಾಸಕರನ್ನು ನಾಲಾಯಕ್…ಅಪಾಪೋಲಿಗಳು…ನಿಮ್ಮ ಜನ್ಮಕ್ಕಿಷ್ಟು ಬೆಂಕಿ ಹಾಕ…ಎಂದು ಬೀದಿ ಜಗಳದಂತೆ ಸಂಬೋಧಿಸಿದ್ದು ನಿಜಕ್ಕೂ ಅತ್ಯಂತ ಖಂಡನೀಯ.ಏಕೆಂದರೆ ರಾಜ್ಯದ ಜನತೆ ಆರಿಸಿ ಕಳಿಸಿರುವುದು ಜಗಳ ಕಾಯುವುದಕ್ಕಲ್ಲ. ಬದಲಾಗಿ ರಚನಾತ್ಮಕವಾಗಿ ಚಿಂತನೆ ನಡೆಸಿ ಅಭಿವೃದ್ಧಿ ಪರ ಯೋಚನೆ ನಡೆಸಬೇಕೆಂದು. ಹೀಗೆ ರಂಪ ಮಾಡುವುದಕ್ಕಲ್ಲ ಎಂಬ ಅರಿವು ಶಾಸಕರಿಗಿರಬೇಕು. ಆದರೆ ಶಿಲಿಂಗೇಗೌಡರಿಗೆ ಆ ಅರಿವು ಇದ್ದಂತಿರಲಿಲ್ಲ. ವಿರೋಧ ಪಕ್ಷದ ಶಾಸಕರ ಹೆಂಡತಿ ವಿಚಾರವನ್ನೂ ಸಹ ಪ್ರಸ್ತಾಪಿಸಿದ್ದು ನಾಲ್ಕು ಬಾರಿ ಶಾಸಕರಾದವರಿಗೆ ಶೋಭೆ ತರುವ ವಿಚಾರವಲ್ಲ. ಚೋದ್ಯವೆಂದರೆ ಇವೆಲ್ಲ ಮಾತುಗಳನ್ನು ನಗುತ್ತಾ ಎಂಜಾಯ್ ಮಾಡುತ್ತಿದ್ದ ಸಭಾಧ್ಯಕ್ಷರ ನಡೆಯೂ ಚರ್ಚಾರ್ಹ. ಅವರು ತಮ್ಮ ಸ್ಥಾನದ ಘನತೆಯನ್ನು ಅರಿತು ಎಚ್ಚರಿಕೆ ಕೊಡಬಹುದಿತ್ತು. ಆದರೆ ತಮ್ಮನ್ನು ಸಭಾಧ್ಯಕ್ಷರನ್ನಾಗಿ ಮಾಡಿದ ಪಕ್ಷಕ್ಕೆ ಕೃತಜ್ಞತೆ ತೋರಿಸಲು ತಮ್ಮ ಬಾಯಿಗೆ ಬೀಗ ಹಾಕೊಕೊಂಡರೇ ಎಂಬ ಅನುಮಾನ ಅಥವಾ ಅನಿಸಿಕೆ ಸಾರ್ವಜನಿಕರಲ್ಲಿ ಮೂಡಿದ್ದು ಸಹಜವೇ ಆಗಿತ್ತು.
ಈ ಕ್ಷಣ ಸಭಾಧ್ಯಕ್ಷರಿಗೆ ಇಂತಹ ಸಂದರ್ಭಗಳಲ್ಲಿ ಹಿಙದಿನ ಸಭಾಧ್ಯಕ್ಷರುಗಳು ಅನುಸರಿಸಿದ ನಡೆ ಆದರ್ಶವಾಗಬೇಕಿತ್ತು. ಅದೂ ಬೇಡ…..ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜಹೊರಟ್ಟಿ ಅವರು ಸದಸ್ಯ ಸಿ.ಟಿರವಿಯವರ ವಿಚಾರದಲ್ಲಿ ತಳೆದ ದಿಟ್ಟ ನಿರ್ಧಾರ ವಿಧಾನಸಭಾಧ್ಯಕ್ಷರಿಗೆ ಸ್ಪೂರ್ತಿಯಾಗಬೇಕಿತ್ತು. ಹೊರಟ್ಟಿಯರಿಗಿರುವಷ್ಟು ಅನುಭವ ಇವರಿಗಿರಲಿಲ್ಲವಾದರೂ ಅದನ್ನು ಮೇಲ್ಪಂಕ್ತಿಯಾಗಿ ಅನುಸರಿಸಿದ್ದರೆ ಇವರ ಕಾರ್ಯವೈಖರಿ ಶಾಶ್ವತವಾಗಿ ನೆನಪಲ್ಲುಳಿಯುತ್ತಿತ್ತು. ಆದರೆ ಆ ಕಾರ್ಯ ಮಾಡುವ ಮನಸ್ಸು ಯಾಕೆ ವಿಧಾನಸಭಾಧ್ಯಕ್ಷರಿಗೆ ಬರಲಿಲ್ಲ ಎಂಬುದೇ ಉತ್ತರವಿಲ್ಲದ ಪ್ರಶ್ನೆಯಾಗಿದೆ.
ಸೈದ್ದಾಂತಿಕ ರಾಜಕಾರಣ ಹಾಸುಹೊಕ್ಕಾಗಿದ್ದ ವಿಧಾನ ಸಭೆಯಲ್ಲಿ ಈಗ ಸಮಯಸಾಧಕ ಹಾಗೂ ವೈಯುಕ್ತಿಕ ಪ್ರತಿಷ್ಠೆ ಅತಿಕ್ರಮಿಸಿದೆ. ಇಡೀ ರಾಜ್ಯದ ಪ್ರತಿನಿಧಿಗಳಾಗಿ ವಿಧಾನ ಸಭೆ ಪ್ರವೇಶಿಸಿದವರು ತಮ್ಮ ಮಾತಿನ ಮೇಲೆ ನಿಯಂತ್ರಣವಿಡುವುದನ್ನೆ ಮರೆತಿರುವುದು ವಿಷಾಧನೀಯ. ಬಸವಣ್ಣನವರ ” ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಎಂಬುದನ್ನು ನೆನಪಿಸಿಕೊಳ್ಳಬೇಕು. ಇದಿರು ಹಳಿಯಲುಬೇಡ…ತನ್ನ ಬಣ್ಣಿಸಬೇಡ… ಎಂಬ ಸಾಲುಗಳಿಗೆ ಪೂರ್ಣ ವಿರುದ್ದವಾಗಿಯೇ ನಡೆಯುವವರನ್ನು ಏನೆನ್ನಬೇಕೆಂಬುದೇ ತಿಳಿಯದ ವಿಚಾರ.
ಒಟ್ಟಾರೆಯಾಗಿ ವಿಧಾನಸಭೆ ಎನ್ನುವುದು ರಾಜ್ಯದ ಸಮಗ್ರತೆಯನ್ನು ಪ್ರತಿನಿಧಿಸುವ ಸ್ಥಳ.ಅಲ್ಲಿ ಯಾವುದೇ ರೀತಿಯ ಅಪಚಾರ ಅಥವಾ ಅಗೌರವದ ಕಾರ್ಯಗಳಾಗಬಾರದು. ಅಲ್ಲಿರುವ ಸದಸ್ಯರು ವೈಯುಕ್ತಿಕ ಮನೋಭಾವನೆ ಬಿಟ್ಟು ಕೇವಲ ಕ್ಷೇತ್ರಗಳ ಅಥವಾ ಜ್ವಲಂತ ಸಮಸ್ಯೆಗಳ ಕುರಿತು ರಚನಾತ್ಮಕವಾಗಿ ಚರ್ಚಿಸಬೇಕು. ಟೀಕೆಗಳೂ ಅಷ್ಟೆ.. ಸಭ್ಯತೆಯ ಎಲ್ಲೆ ಮೀರದಂತಿರಬೇಕು. ಬಹುಮುಖ್ಯವಾಗಿ ಸದನ ನಡೆಸುವ ಜವಾಬ್ದಾರಿ ಹೊತ್ತವರು ತಮ್ಮ ಜವಾಬ್ದಾರಿಯನ್ನು ಮೊದಲು ಅರಿತು ಸದನ ನಡೆಸಬೇಕು…
ಆಗ ಮಾತ್ರ ಇಡೀ ದೇಶದ ಎಲ್ಲಾ ರಾಜ್ಯಗಳಿಗೆ ಮಾದರಿಯಾಗಿದ್ದ ರಾಜ್ಯ ವಿಧಾನಸಭೆಗೆ ಗೌರವ ಉಳಿದೀತು…ಪ್ರಸಕ್ತ ಅಧಿವೇಶನದಲ್ಲಾದರೂ ಅಂತಹ ಪ್ರಬುದ್ಧ ನಡೆಯನ್ನು ನಿರೀಕ್ಷಿಸೋಣ…
