Spread the love
ನಾನು ಜೀವನದಲ್ಲಿ ಕಂಡ ಅವಧೂತರು ಪ್ರಮುಖವಾಗಿ ನಾಲ್ವರು…ಮೊತ್ತಮೊದಲು ಸಖರಾಯಪಟ್ಟಣದ ಅವಧೂತರು,,,, ಬೆಲಗೂರಿನ ಬಿಂದು ಭಟ್ಟರು…. ಹೊಸದುರ್ಗದ ಶ್ರೀಕಾಂತ ಗುರೂಜಿ….ಅರಸೀಕೆರೆಯ ಸತೀಶ್ ಶರ್ಮ ಗುರೂಜಿ….
ಈಗ ನಾನು ಹೇಳಹೊರಟಿರುವುದು ಬೆಲಗೂರಿನ ಬೆಳಕಾಗಿದ್ದ, ನಮ್ಮೆಲ್ಲರಿಗೂ ಆರಾಧ್ಯ ದೈವವೇ ಆಗಿದ್ದ ನಡೆದಾಡುವ ಹನುಮನೆಂದೇ ಹೆಸರಾಗಿದ್ದ ಬಿಂದು ಮಾಧವ ಶರ್ಮ ಸ್ವಾಮೀಜಿಯವರ ದಿವ್ಯ ಸನ್ನಿಧಿಯಲ್ಲಿ ಕಳೆದ ನೆನಪುಗಳ ಬಗ್ಗೆ…
ಬೆಲಗೂರು ನನ್ನ ಊರು ಮಚ್ಚೇರಿಯಿಂದ 32 ಕಿ‌.ಮೀ.ದೂರದಲ್ಲಿದೆ. ಅಲ್ಲಿದೆ ವೀರಪ್ರತಾಪ ಆಂಜನೇಯನ ಸನ್ನಿಧಿ. ಭಗವಾನ್ ವ್ಯಾಸ ರಾಜರ ಪ್ರತಿಷ್ಟೆ. ವ್ಯಾಸ ರಾಜರ ವಿಗ್ರಹ ಹನುಮನ ಕಾಲುಗಳ ಮಧ್ಯೆಯಿರುವುದು ಇಲ್ಲಿನ ವಿಶೇಷ..
ಇಲ್ಲಿದ್ದರು ಬಿಂದು ಮಾಧವ ಶರ್ಮರು. ಬಿಂದಣ್ಣ, ಬಿಂದು ಭಟ್ಟರು….ಸ್ವಾಮೀಜಿ…..ಅಪ್ಪ….ಗುರುಗಳೇ….ಹೀಗೆ ಭಕ್ತರು ಅವರವರ ಭಾವಕ್ಕೆ ತೋಚಿದಂತೆ ಕರೆಯುತ್ತಿದ್ದರು.
ಬಿಂದು ಭಟ್ಟರು ಸನ್ಯಾಸಿಯಲ್ಲ. ಅವರು ಹನುಮನ ಸಾಕ್ಷಾತ್ಕಾರ ವಾದ ಜೀವ. ಆಜನ್ಮ ಬ್ರಹ್ನಚಾರಿ. ಬೆಲಗೂರು ಹನುಮನ ಪಾದ ಸೇವಕ… ಅಲ್ಲಿಗೆ ಹೋಗುತ್ತಿದ್ದವರಿಗೆ ಬಿಂದು ಅವಧೂತರು ಏನಾದರೂ ಹೇಳಿ ಆಶೀರ್ವದಿಸಿದರೆ ಆ ಕೆಲಸ ಆದಂತೆಯೇ  !
ಇದು ಬೆಲಗೂರಿಗೆ ಬರುವವರ ದಿವ್ಯ ನಂಬಿಕೆ…ಅದು ನಿಜವೂ ಹೌದು….
35 ವರ್ಷಗಳ ಹಿಂದೆ ಬೆಲಗೂರು ಗ್ರಾಮಕ್ಕೆ ಹೋದಾಗ ತಲೆಗೆ ಕೆಂಪನೆಯ ಪೇಟ ಸುತ್ತಿಕೊಂಡು ಅವಂತಿಗೆರೇಲಿ ಎಂಬ ದ್ವಿಚಕ್ರ ವಾಹನದಲ್ಲಿ ಬಹು ಉತ್ಸಾ ಹದಿಂದ ಓಡಾಡುತ್ತಿದ್ದ ವ್ಯಕ್ತಿ ಯವರನ್ನು ಕಂಡಾಗ ಅವರೇ ಬೆಲಗೂರು ಅವಧೂತರು ಎಂಬುದು ನನಗೆ ತಿಳಿದಿರಲಿಲ್ಲ ಆದರೆ ನಂತರದಲ್ಲಿ ಆಂಜನೇಯನ ದೇವಸ್ಥಾನಕ್ಕೆ ಹೋದಾಗ ದಿವ್ಯ ತೇಜಸ್ಸುಳ್ಳ ವ್ಯಕ್ತಿಯೊಬ್ಬರನ್ನು ಕಂಡೆ. ಬಂದವರೆಲ್ಲ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತಿದ್ದನ್ನು ಕಂಡಾಗ ನಾನು ಸಹ ಭಕ್ತಿಯಿಂದ ತಲೆಬಾಗಿದೆ. ಆನಂತರ ಪ್ರತಿಬಾರಿಯೂ ಬೆಲಗೂರಿಗೆ ಹೋದಾಗ ಅವರಿಗೆ ನಮಸ್ಕರಿಸುತ್ತಿದ್ದೆ. ಕಂಚಿನ ಕಂಠದಲ್ಲಿ ಅವರು ಜೈ ಶ್ರೀ ರಾಮ್ ಎಂದು ಹೇಳಿ ಕುಂಕುಮ ಇಟ್ಟಾಗ ಮನಸ್ಸಿಗೆ ಏನೋ ಒಂದು ರೀತಿ ಅಲೌಕಿಕ ಅನುಭವ ಆಗುತ್ತಿದುದು ಸುಳ್ಳಲ್ಲ.
ಹೀಗೆಯೇ ಮುಂದುವರೆಯುತ್ತಿದ್ದಂತೆ ತಿಳಿದುಬಂದದ್ದು ಆ ವ್ಯಕ್ತಿ ಬೆಲಗೂರು ಗ್ರಾಮವನ್ನು ಬೆಳಗುತ್ತಿರುವ, ನಡೆದಾಡುವ ಹನುಮ ಎಂದೆ ಹೆಸರಾಗಿರುವ, ಅವಧೂತ ಸದ್ಗುರು ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿ ಎಂದು! ಅವರ ಪ್ರೀತಿಯನ್ನು ಪಡೆದಿದ್ದ ನಾನೂ ಧನ್ಯನೇ…
ಬಿಂದು ಮಾಧವ ಶರ್ಮ ಅವರ ಬಗ್ಗೆ ಹೇಳುವಂತಹದ್ದೇನೂ ಇಲ್ಲ.ಇಡೀ ಭಾರತದಲ್ಲಿ ಅವರ ಭಕ್ತರಿದ್ದಾರೆ. ಅವರು ಮಾಡಿದ ಸಮಾಜಮುಖಿ ಕಾರ್ಯಗಳು, ನೊಂದವರ ಸಮಸ್ಯೆಗಳನ್ನು ಬಗೆಹರಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರ ಜೀವನ ನ್ಯಾಯಮಾರ್ಗದಲ್ಲಿ ಮುನ್ನಡೆಯುವಂತೆ ಮಾಡಿದ ಮಹಾನ್ ಸಾಧಕ ನಮ್ಮ ಅವಧೂತರು.
ಕಮಲ್ಲಿಗೆ ಬಂದ ಭಕ್ತರ ಸಮಸ್ಯೆಗಳನ್ನು ಕುಳಿತು ಸಾವಧಾನದಿಂದ ಆಲಿಸಿ, ಆ ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತಿದ್ದ ಗುರುಗಳು ಮಾತೃ ಪ್ರೇಮದಿಂದ ಎಲ್ಲರನ್ನು ಮಾತನಾಡಿಸುತ್ತಿದ್ದರು. ಅವರು ಒಮ್ಮೆ ಮೈದಡವಿ ಜೈ ಶ್ರೀ ರಾಮ್ ಎಂದು ಹೇಳಿ ಹಣೆಗೆ ಕುಂಕುಮ ಇಟ್ಟು ಮಂತ್ರಾಕ್ಷತೆ ಕೊಟ್ಟು ಕಳುಹಿಸಿದರೆ ಭಕ್ತರಿಗೆ ಆನೆ ಬಲದ ಆತ್ಮವಿಶ್ವಾಸ ಮೂಡುತಿತ್ತು. ಗುರುಗಳು ಹೇಳಿದಂತೆ ಮಾಡಿದರೆ ಸಮಸ್ಯೆ ಪರಿಹಾರವು ಶತಸಿದ್ಧ. ಇದು ಸಾವಿರಾರು ಭಕ್ತರ ಸ್ವಂತ ಅನುಭವ. ಅನ್ಯಾಯಮಾರ್ಗದಲ್ಲಿ ನಡೆದು ಸಮಸ್ಯೆಗೆ ಸಿಲುಕಿ ಗುರುಗಳ ಬಳಿ ಬಂದರೆ ಅವರು ಮಾಡಿದ ತಪ್ಪನ್ನು ನೇರವಾಗಿ ಅವರಿಗೆ ಹೇಳಿ,ಅವರ ಮನಸ್ಸನ್ನು ಪರಿವರ್ತಿಸಿ ಸನ್ಮಾರ್ಗ ತೋರಿಸಿದ ಸದ್ಗುರು ಬಿಂದುಮಾಧವರು. ಅವರ ಸಾಧನೆಗೆ ಮಿತಿಯಿಲ್ಲ. ಅದನ್ನು ಮತ್ತೆ ಮತ್ತೆ ಹೇಳುವ ಅವಶ್ಯಕತೆಯೂ ಇಲ್ಲ…..
ಅಂತಹ ಮಾತೃಪ್ರೇಮದ ಸದ್ಗುರುಗಳೊಡನೆ ನನ್ನ ಒಂದೆರಡು ಅನುಭವ…..
ಆಗಾಗ ಗುರುಗಳ ದರ್ಶನಕ್ಕೆ ಹೋಗುತ್ತಿದ್ದ ನನಗೆ ಒಮ್ಮೆ  ಬೆಂಗಳೂರಿನ ಮತ್ತೋರ್ವ ಸಾಧಕರಾದ ಶ್ರೀ ತಿರು( ಈಗ ಯತಿರಾಜ ಮಠದ ಜೀಯರ್ ಸ್ವಾಮಿಗಳು) ಬೆಲಗೂರಿಗೆ ಬರುವವರಿದ್ದರು. ಅದಾಗಲೇ ನಾನು ಬೆಲಗೂರಿನಲ್ಲಿದ್ದೆ.ಸದ್ಗುರುಗಳು ಅಲ್ಲೆಲ್ಲೋ ಇದ್ದರು. ಅವರಿಗೆ ಶ್ರೀ ತಿರು ಅವರು ಬರುವ ವಿಚಾರ ತಿಳಿಸಲು ಅಲ್ಲಿಗೇ ಹೀದೆ. ನನ್ನನ್ನು ನೋಡಿದ ಕೂಡಲೇ ಗುರುಗಳು…. ನಿಮ್ಮ ತಿರುಸ್ವಾಮೀಜಿ ಬಂದಿದ್ದಾರೆ ಎಂದು ಹೇಳಿ ಪಕ್ಕದಲ್ಲಿದ್ದ ಒಬ್ಬರಿಗೆ ಒಂದು ಲೋಟ ಹಾಲು ತರಲು ಹೇಳಿದರು. ಕೂಡಲೇ ನಾನು ಸ್ವಾಮಿ ನಾನು ಹಾಲು ಕುಡಿಯುವುದಿಲ್ಲ. ಕಾಫಿಯಾದರೆ ಆದೀತು ಎಂದೆ. ಆ ಪುಣ್ಯಾತ್ಮ ಒಂದು ದೊಡ್ಡ ಲೋಟದಲ್ಲಿ ಹಾಲು ತಂದ. ಗುರುಗಳು ಕುಡಿಯೋ ಎಂದರೂ ನಾನು ಬೇಡ ಎಂದು ಹಟ ಮಾಡಿದೆ.ಕೂಡಲೇ ಗುರುಗಳು ಆ ಲೋಟದಲ್ಲಿ ಸ್ವಲ್ಪ ಕುಡಿದು ನನಗೆ ಕೊಟ್ಟು ಕುಡಿ ಎಂದರು.ಮಂತ್ರಮುಗ್ಧನಾಗಿ ಕುಡಿದೆ- ಅದು ನೋಡಲು ಹಾಲು! ರುಚಿ ಮಾತ್ರ ಅದ್ಭುತ ಪರಿಮಳದ ಕಾಫಿಯದು! ನನಗೇನೂ ಅಚ್ಚರಿಯಾಗಲಿಲ್ಲ. ಇಂತಹ ಘಟನೆಗಳು ನೂರಾರು ನಡೆದಿದೆ ಅಲ್ಲಿ!
ಮತ್ತೊಮ್ಮೆ  ಸದ್ಗುರುಗಳ ಬಳಿ ಪದೇ ಪದೇ ಮನೆಗೆ ಬನ್ನಿ ಎಂದು ಕಾಡುತ್ತಿದ್ದ ನನಗೆ ಗುರುಗಳು” ನಾನು ಮನಸ್ಸಿಗೆ ಬರಬೇಕೋ ಅಥವಾ ಮನೆಗೋ ಎಂದರು.ನಾನು ಮನಸ್ಸಿಗೆ ಗುರುವೆ ಎಂದೆ. ಯಾವಾಗಲೋ ಬಂದಾಯ್ತಲ್ಲ ಎಂದರು. ಇಲ್ಲ ಗುರುವೆ ಬರಲೇ ಬೇಕು ಎಂದು ಹಠ ಹಿಡಿದೆ. ಗುರುಗಳು ಇಂತಹ ದಿನ ಬರುತ್ತೇನೆ ಎಂದರು.
ಅಂದು ನಾನು ಹೂವು ಹಣ್ಣು ಎಲ್ಕ ತಂದಿಟ್ಟು,ಅಮ್ಮನ ಬಳಿ ಸಿಹಿ ಎಲ್ಕ ಮಾಡಿಸಿ ಕಾಯುತ್ತಿದ್ದೆ. ಗುರುಗಳು ಕನಿಷ್ಟ 20 ಜನದ ಬಳಿಯಾದರೂ ಬಾಲು ಎಷ್ಟು ಅರೇಂಜ್ ಮೆಂಟ್ ಮಾಡಿದ್ದ ಎಂದು ಹೇಳಬೇಕು ಎಂಬ ಬಯಕೆ ನನ್ನದಾಗಿತ್ತು.
ಗುರುಗಳು ಸಂಜೆಯಾದರೂ ಬರಲೇಯಿಲ್ಲ.
ಕೆಲದಿನಗಳ ನಂತರ ಬೆಲಗೂರಿಗೆ ಹೀದಾಗ ಗುರುಗಳಿಗೆ ನಮಸ್ಕರಿಸಿ ಸ್ವಲ್ಪ ಬಿಗುವಾಗಿ ಕುಳಿತಿದ್ದೆ. ಕೆಲಸಮಯ ನೋಡಿದ ಗುರುಗಳು ಏನು ಕೇಡಿಗೆ ಹಂಗೆ ಕೂತಿದ್ದೀಯಾ? ಬಾಯಿಲ್ಲಿ ಎಂದರು( ಗುರುಗಳ ಗ್ರಾಮ್ಯ ಭಾಷೆಯ ಚೆಂದವೇ ಚೆಂದ). ಆಗ ನಾನೆಂದೆ ಅವತ್ತು ಬರ್ತೀನಂತ ಹೇಳಿ ಬರಲಿಲ್ಲ ನೀವು ಎಂದೆ. ಗುರುಗಳು
ಏ…ನಾನು ಬಂದೆ…ನೀನೇ ಓಡಿಸಿದೆಯಲ್ಲಾ… ಎನ್ನುವುದೇ?
ಬೆದರಿದ ನಾನು ಗಾಭರಿಯಿಂದ ನಾನು ನಿಮ್ಮನ್ನು ಓಡಿಸುವುದಬಹುಬೇಸರವಾಗಿ
 ಗುರುಗಳಂದರು…” ನಿನ್ನ ಮನೆ ಗೇಟಿನೊಳಗೆ ಒಂದು ಕಪ್ಪು ಹಸು ಬಂತಲ್ಲಾ….ನೀನು ಅದನ್ನು ಓಡಿಸಲಿಲ್ಲವೆ? ನಾನೇ ಬಂದದ್ದು” ಎಂದರು!
ಪ್ರಾಣಿಗಳಲ್ಲೂ ಮಾತೃಪ್ರೇಮ ತೋರಿದ ಮಮತಾಮಯಿ ಗುರು ಅವರು.
ಇನ್ನೊಂದು ವಿಚಾರ- ನನಗೆ ಹತ್ತು ಸಾವಿರ ರೂಪಾಯಿಗಳ ತುರ್ತು ಅಗತ್ಯವಿತ್ತು. ಎಲ್ಲಿಯೂ ಹಣ ಸಿಗಲಿಲ್ಲ. ಬಹುಬೇಸರವಾಗಿ ಮಿತ್ರ ಗುರುರಾಜ ಹಾಲ್ಮಠ್ ಅವರೊಂದಿಗೆ  ಬೆಲಗೂರಿಗೆ ಹೋದೆ. ಆಗಲೇ ಸಂಜೆ 7 ಗಂಟೆಯಾಗಿತ್ತು. ಗುರುಗಳಿಗೆ ನಮಸ್ಕರಿಸಿ ಕುಳಿತೆ. ಕೂಡಲೇ ಗುರುಗಳು ಎಂದಿನಂತೆ ಹಣೆಗೆ ಕುಂಕುಮವಿಟ್ಟು, ಮಂತ್ರಾಕ್ಷತೆ ನೀಡಿದರು. ಇದ್ದಕ್ಕಿದ್ದಂತೆ ಒಂದು ಕವರ್ ತೆಗೆದು ನನಗೆ ಕೊಟ್ಟು ಬೇಗ ಒಳಗಿಟ್ಟುಕೋ- ಕಾಗೆಗಳು ನೋಡಿದರೆ ಕಿತ್ಕೊಂಡು ಹೋಗ್ತವೆ ಎಂದರು. ನಾನೂ ಹಿಂದೆ ಮುಂದೆ ನೋಡದೆ ಜೇಬಿನಲ್ಲಿಟ್ಟುಕೊಂಡೆ. ನಂತರ ಗುರುಗಳು ಹೊರಡು ಎಂದರು.ತೀರ ಬೆಲಗೂರು ಬಿಡುವ ಹೊತ್ತಿಗೆ ಗುರುಗಳು ಕೊಟ್ಟ ಕವರ್ ನೆನಪಾಯ್ತು. ತೆಗೆದೆ- ಒಳಗಿದೆ ಹತ್ತು ಸಾವಿರ ರೂಪಾಯಿ!
ಕೂಡಲೇ ವಾಪಸ್ಸು ಹೋದೆ.ಗುರುಗಳು ನನ್ನ ನೋಡಿದ ಕೂಡಲೇ ಕವರ್ ತೋರಿಸಿದೆ. ” ನಾಳೆ ಬೇಕಲ್ಲೋ ನಿಂಗೆ- ನಂಗೊತ್ತು ಹೋಗು… ಎಂದು ನಕ್ಕರು.ಮರುಗಳಿಗೆಯೇ ನಿನಗೆ ಹೇಳೋವ್ರು ಕೇಳೋವ್ರಿಲ್ಲ…. ಇಷ್ಟೊತ್ತಿನ ಮೇಲೆ ಓಡಾಡಬೇಡ ಅಂತ ಹೇಳಿಲ್ವಾ…. ಯಾರೋ ಇವನ್ನ ಆಚೆ ಕಳ್ಸು…ಎಂದು ಘರ್ಜಿಸಿದರು. ಅವರಿಗೆ ನಮಸ್ಕರಿಸಿ ನಾನು ಪರಾರಿ!
ನನ್ನ ಅಗತ್ಯ ಸದ್ಗುರು ವಿಗಲ್ಲದೆ ಯಾರಿಗೆ ತಿಳಿದೀತು?
ಇಂತಹ ಹಲವಾರು ಅನುಭವಗಳಿವೆ. ನನ್ನ ಜೀವನದ ಧೈರ್ಯವೇ ಆಗಿದ್ದ ಬೆಲಗೂರು ಅವಧೂತ ಸದ್ಗುರುಗಳು ಇಹಲೋಕ ತ್ಯಜಿಸಿದಾಗ ಶೂನ್ಯ ಭಾವ ಕಾಡಿತು.
ಕೂಡಲೇ ಬೆಲಗೂರಿಗೆ ಸ್ನೇಹಿತ ಪ್ರಸಾದಿಯೊಡನೆ ಹೋದೆ. ಬೆಳಗುತ್ತಿದ್ದ ಊರು ಕಳಾಹೀನವಾಗಿತ್ತು. ಸ್ವಾಮಿಗಳ ಭೌತಿಕ ಕಾಯವನ್ನು ಅವರ ತೋಟದಲ್ಲೆ ಅಗ್ನಿಗರ್ಪಿಸಲಾಯಿತು.  ಅಂದಿಗೂ ಇಂದಿಗೂ ಬೆಲಗೂರು ಅವಧೂತರು ನನ್ನ ಪಾಲಿಗೆ ಮಾತೃಸ್ವರೂಪಿ.
ಅತೀತ ಲೋಕದ ಮಹಾಯಾತ್ರಿಕ!
ಈಗಲೂ ಬೆಲಗೂರಿನಲ್ಲಿ ಬಿಂದುಮಾಧವ ಶರ್ಮ ಗುರುಗಳು ವಿಜಯಮಾರುತಿ ಸ್ವಾಮೀಜಿಯವರಲ್ಲಿ ಅಂತರ್ಗತರಾಗಿ ನನ್ನಂತಹವನನ್ನೂ ಹರಸುತ್ತಿದ್ದಾರೆ….
—ಕೈಲಾಸಂ ಬಾಲುಮಚ್ಚೇರಿ
(ಬೆಲಗೂರು ಸ್ವಾಮಿಗಳ ಬಗ್ಗೆ ಲೋಕೇಶ ಅಗಸನಕಟ್ಟೆ ಅವರು ಬರೆದಿರುವ ೧) ಅತೀತ ಲೋಕದ ಮಹಾಯಾತ್ರಿಕ.೨) ಅಂಬರಕ್ಕೆ ಹಾರಿದ ಗರುಡ. ೩)ನಾನು ದೇವರೂ ಅಲ್ಲ.ದೇವಮಾನವನೂ ಅಲ್ಲ ಈ ಮೂರೂ ಪುಸ್ತಕಗಳನ್ನು ಓದಿ)

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!