ಶ್ರೀರಂಗಪಟ್ಟಣದ ಬ್ರಾಹ್ಮಣನೊಬ್ಬನ ಕನಸಲ್ಲಿ ತೇಜಸ್ವಿ ಯತಿಗಳೊಬ್ಬರು ಕಾಣಿಸಿಕೊಂಡು ” ನಾವಿಲ್ಲೆ ಹತ್ತಿರದ ಕಾವೇರಿ ನದಿ ದಂಡೆಯಲ್ಲಿದ್ದೇವೆ.ನಮ್ಮನ್ನು ನಂಜನಗೂಡಿಗೆ ತಲುಪಿಸಿ ಎಂದು ಹೇಳಿದರು.
ಅಲ್ಲಿಯ ಒಬ್ಬ ಅಗಸನಿಗೆ ಒಂದು ಕನಸು. “ದಿನಾ ನಿನ್ನ ಹೊಡೆತ ತಿಂದು ಸಾಕಾಗಿದೆ. ನಿನ್ನಲ್ಲಿಗೆ ಬರುವ ಬ್ರಾಹ್ಮಣನಿಗೆ ನಮ್ಮನ್ನು ತಲುಪಿಸು” ಎಂದು ಯತಿಗಳೊಬ್ಬರು ಹೇಳಿದಂತಾಯ್ತು.
ಆಗ ಮಹಿಶೂರು(ಮೈಸೂರು) ಸಂಸ್ಥಾನದ ಅಧಿಪತಿಗಳಾಗಿದ್ದವರು. ಶ್ರೀಮನ್ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು. ಅವರಿಗೊಂದು ಕನಸು. ನಮ್ಮನ್ನು ನಂಜನಗೂಡಿಗೆ ತಲುಪಿಸಿ ಎಂದು ಯತಿವರ್ಯರೊಬ್ಬರು ಹೇಳಿದಂತೆ!
ಆ ಬ್ರಾಹ್ಮಣನಿಗೆ ಇದೇನೆಂದು ಅರ್ಥವಾಗಲಿಲ್ಲ. ಸುಮ್ಮನೆ ಕಾವೇರಿ ನದಿಗುಂಟ ನಡೆದು ಹೋಗುತ್ತಿದ್ದ. ಅಲ್ಲೊಬ್ಬ ಅಗಸ ಬ್ರಾಹ್ಮಣನಿಗೊಂದು ಸಣ್ಣ ಕಲ್ಲು ತೋರಿಸಿದ. ಅದರಲ್ಲೊಂದು ವೃದ್ಧರೊಬ್ಬರ ರೇಖಾಚಿತ್ರವಿತ್ತು. ಆಗಿದ್ದಿಷ್ಟೆ. ಅಗಸ ಬಟ್ಟೆ ಒಗೆಯಲು ಹೋದಾಗ ಆ ಕಲ್ಲಿನ ಮೇಲೆ ಒಗೆಯಲು ಸಾಧ್ಯವಾಗಲಿಲ್ಲ. ಆ ಕಲ್ಲಿನಿಂದ ಓಂ ಕಾರ ನಾದ ಹೊಮ್ಮುತ್ತಿತ್ತು. ನೋಡಿದರೆ ಕಲ್ಲಿನಲ್ಲಿ ಒಂದು ರೇಖಾಚಿತ್ರವಿತ್ತು. ಅದು ಕನಸಲ್ಲಿ ಕಂಡ ಯತಿಗಳಂತೆ ಇತ್ತು.
ಆಗ ಬ್ರಾಹ್ಮಣನಿಗೆ ಕನಸಲ್ಲಿ ಹೇಳಿದ್ದು ಇದೇ ಇರಬಹುದೆಂದು ಅರ್ಥೈಸಿ ಆ ಕಲ್ಲನ್ನು ತಲೆ ಮೇಲೆ ಹೊತ್ತು ಮೈಸೂರಿನ ಕಡೆಗೆ ನಡೆಯಲಾರಂಭಿಸಿದ.
ಮೈಸೂರು ಹತ್ತಿರ ಬಂದರೆ ಅಲ್ಲೊಂದು ಅಚ್ಚರಿ. ಮುಮ್ಮಡಿಯವರು ರಾಜಮರ್ಯಾದೆಯೊಂದಿಗೆ ನಿಂತಿದ್ದಾರೆ. ಬ್ರಾಹ್ಮಣನ ಶಿರದ ಮೇಲಿನ ಕಲ್ಲಿನಲ್ಲಿ ದ್ದ ರೇಖಾ ಚಿತ್ರದಲ್ಲಿ ಕನಸಲ್ಲಿ ಕಂಡ ಯತಿವರ್ಯರಂತೆಯೇ ಇದ್ದ ರೇಖಾಚಿತ್ರಕ್ಕೆ ಭಕ್ತಿಪೂರ್ವಕ ನಮಸ್ಕರಿಸಿ ಸಕಲ ರಾಜಮರ್ಯಾದೆಗಳೊಂದಿಗೆ ನಂಜನಗೂಡಿಗೆ ಕಳುಹಿಸಿದರು.
ಆ ಕಲ್ಲಿನಲ್ಲಿದ್ದ ರೇಖಾ ಚಿತ್ರ ಯಾರದ್ದು?
————-
ಕಲಿಯುಗ ಕಲ್ಪತರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳು ಸ್ವಯಂ ವ್ಯಕ್ತರಾದ ಚಿತ್ರವದು !
————–
ಎಲ್ಲಿಯ ಮಂತ್ರಾಲಯ ? ಎಲ್ಲಿಯ ನಂಜನಗೂಡು ? ಅಲ್ಲವೆ?
ಆಗಿದ್ದೇನು ಗೊತ್ತೆ ?
ಮಂತ್ರಾಲಯದ ರಾಘವೇಂದ್ರ ಮಠದ ಮಠಾಧಿಪತಿಯಾದಗಿದ್ದವರು ಶ್ರೀ ಸುಜ್ಞಾನೇಂದ್ರ ತೀರ್ಥರು…ಮಹಾ ತಪಸ್ವಿಗಳು ಮತ್ತು ಅಪರೋಕ್ಷ ಜ್ಞಾನಿಗಳು ಸುಜ್ಞಾನೇಂದ್ರರು. ಅವರಿದ್ದುದು ನಮ್ಮ ಕರುನಾಡಿನ ನಂಜನಗೂಡಿನಲ್ಲಿ. ಅಲ್ಲಿ ದಿವಾನ್ ಪೂರ್ಣಯ್ಯನವರು ಕೊಟ್ಟ ದೊಡ್ಡ ಮಠ…ಪ್ರಶಾಂತ ಪರಿಸರದಲ್ಲಿ ರಾಯರ ಮಠ….ಅಲ್ಲಿಯೇ ಇದ್ದ ಸುಜ್ಞಾನೇಂದ್ರರು ಮಂತ್ರಾಲಯಕ್ಕೆ ಹೋದಾಗಲೆಲ್ಲ ಕೇಳುತ್ತಿದ್ದುದು ಒಂದೆ. ರಾಯರ ಜೊತೆಯಲ್ಲಿಯೇ ತಾವೂ ಬೃಂದಾವನಸ್ಥರಾಗಬೇಕೆಂದು.
ಒಮ್ಮೆ ರಾಯರು ಅವರ ಕನಸಲ್ಲಿ ಬಂದು ” ತಮ್ಮಾಸೆ ನೆರವೇರುತ್ತದೆ.ಆದರೆ ಅದು ಇಲ್ಲಲ್ಲ. ನೀವಿರುವ ನಂಜನಗೂಡಿನಲ್ಲೆ. ಇಂತಹ ದಿನ ನಿಮಗಾಗಿ ನಾವೇ ಅಲ್ಲಿಗೆ ಬರುತ್ತೇವೆ” ಎಂದು ಹೇಳಿದರು. ಸುಜ್ಞಾನೇಂದ್ರರು ನಂಜನಗೂಡಿಗೆ ಬಂದು ರಾಯರು ಸೂಚಿಸಿದ ದಿನದಂದು ಮಠದ ಮುಂದೆ ಕಾಯುತ್ತ ನಿಲ್ಲುತ್ತಾರೆ.
ಆ ದಿನದ ಹಿಂದಿನ ದಿನದಂದೆ ಅಗಸ,ಬ್ರಾಹ್ಮಣ ಮತ್ತು ಮುಮ್ಮಡಿಯವರಿಗೆ ಕನಸಾಗಿದ್ದು!
ಸುಜ್ಞಾನೇಂದ್ರರಿಗೆ ಮಾತು ಕೊಟ್ಟಂತೆ ರಾಯರು ನಮ್ಮ ಕರುನಾಡಿನ ನಂಜನಗೂಡಿಗೆ ಸ್ವಯಂ ವ್ಯಕ್ತರಾಗಿ ಬಂದದ್ದು!
ಹೀಗೆ ನಂಜನಗೂಡಿಗೆ ಬಂದ ರಾಯರನ್ನು ಸುಜ್ಞಾನೇಂದ್ರರು ಸಕಲ ಗೌರವದಿಂದ ಮುಖ್ಯಪ್ರಾಣನ ಮುಂದೆ ಪ್ರತಿಷ್ಟಾಪಿಸುತ್ತಾರೆ. ದೇಶದಾದ್ಯಂತ ರಾಯರ ಮೃತ್ತಿಕಾಬೃಂದಾವನಗಳಿದ್ದರೂ ವಿಗ್ರಹ ರೂಪದಲ್ಲಿರುವುದು ನಂಜನಗೂಡಿನಲ್ಲಿ ಮಾತ್ರ!
ರಾಯರ ಬಳಿಯೇ ಬೃಂದಾವನಸ್ಥರಾಗಬೇಕೆಂಬ ಸುಜ್ಞಾನೇಂದ್ರರ ಅಭಿಲಾಷೆಯನ್ನುಈಡೇರಿಸಿದರು.
ಕರೆದಲ್ಲಿಗೆ ಬರುವ ರಾಯರು ಎಂಬ ನಾಣ್ಣುಡಿ ಬಳಕೆಗೆ ಬಂದ ದ್ದೂ ಹೀಗೆಯೇ.
ಅಂದು ರೇಖಾರೂಪದಲ್ಲಿದ್ದ ರಾಯರು ಈಗ ಸಂಪೂರ್ಣ ವ್ಯಕ್ತ ರೂಪದಲ್ಲಿದ್ದಾರೆ. ನಂಜನಗೂಡಿಗೆ ಹೋದವರು ರಾಯರ ದರ್ಶನ ಮಾಡಬಹುದು.
(ಈ ಬಗ್ಗೆ ರಾಜಾ ಎಸ್.ಗುರುರಾಜಾಚಾರ್ಯರ ಕಲಿಯುಗ ಕಲ್ಪತರು ಪುಸ್ತಕದಲ್ಲಿ ವಿವರಗಳಿವೆ)


