
ಸಕಲಕಲಾ ವಲ್ಲಭ ಎನಿಸಿದ್ದ ಬಹುಭಾಷಾ ನಟ ಕಮಲ ಹಾಸನ್ ತಮಿಳಿನಿಂದ ಕನ್ನಡ ಬಂದದ್ದು ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ಸಹಜವಾಗಿಯೇ ಇದು ಕನ್ನಡಿಗರನ್ನು ಕೆರಳಿಸಿದೆ. ಕಮಲಹಾಸನ್ ರಂಥಹ ನಟನಿಂದ,ಅದರಲ್ಲೂ ಕನ್ನಡ ನಾಡಿನಿಂದ ಉಪಕೃತನಾದ ನಟನಿಂದ ಇಂತಹ ಮಾತನ್ನು ಕನ್ನಡಿಗರು ನಿರೀಕ್ಷಿಸಿರಲಿಲ್ಲ.
ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಿಗೆ ಅದರದ್ದೇ ಆದ ಇತಿಹಾಸವಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಹೇಳಿದ್ದನ್ನೆ ಬರೆಯುವ ಬರೆದದ್ದನ್ನೆ ಹೇಳುವ ಜಗತ್ತಿನ ಏಕೈಕ ಭಾಷೆ ಕನ್ನಡ ಮಾತ್ರ. ಕಲೆ,ಸಾಹಿತ್ಯ,ಸಂಸ್ಕೃತಿ,ಇತಿಹಾಸ ಎಲ್ಲದರಲ್ಲೂ ಕನ್ನಡ ಭಾಷೆ ಶ್ರೀಮಂತವೆ. ಅದರಲ್ಲೂ ಭಾಷಾಭಿಮಾನದ ವಿಚಾರದಲ್ಲಿ ಕನ್ನಡಿಗರು ಯಾವಾಗಲೂ ಮೇಲೆ. ಭಾಷೆ ವಿಚಾರದಲ್ಲಿ ಕನ್ನಡಿಗರೆಂದೂ ರಾಜಿಯಾಗುವುದಿಲ್ಲ. ಕಪ್ಪೆ ಅರಭಟ್ಟ ” ಕನ್ನಡಿಗರ್ ಅತ್ಯುಗ್ರರ್,ಸುಭಟರ್ಗಳ್, ಸಾದುಂಗೆ ಸಾಧು…ಮಾಧುರ್ಯಂಗೆ ಮಾಧುರ್ಯನ್…ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್… ಎಂದಿದ್ದಾನೆ. ಕನ್ನಡಕ್ಕೆ ಬಾಧೆ ಕೊಟ್ಟರೆ ಅವರಿಗೆ ದುಸ್ವಪ್ನವಾಗುತ್ತಾರೆಂಬ ಎಚ್ಚರಿಕೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ನೀಡಿದ್ದಾನೆ.
ಕನ್ನಡ ಚಿತ್ರಗಳಲ್ಲಿ ಕಮಲ ಹಾಸನ್ ನಟಿಸಿರುವ ಎಲ್ಲ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಕನ್ನಡಿಗರ ಅಭಿಮಾನವೂ ಕಮಲ್ ಹಾಸನ್ ಅವರಿಗೆ ಬಹುದೊಡ್ಡ ಮಟ್ಟದಲ್ಲಿ ದೊರೆತಿದೆ. ಅಂತಹ ಕಮಲ ಹಾಸನ್ ಅವರ ಒಂದೆ ಮಾತು ಕನ್ನಡಿಗರ ಪಾಲಿಗೆ ಬಾದಿಪ್ಪ ಕಲಿಯನ್ನಾಗಿಸಿದೆ.
ಹಾಗಾದರೆ ಕಮಲಹಾಸನ್ ಮಾತಿನಲ್ಲಿ ಸತ್ವವಿದೆಯೇ?
ವಿಮರ್ಶೆ ಮಾಡಿ ನೋಡಿದರೆ ನಟನ ಮಾತು ಕೇವಲ ನಟನೆಯೆಂದೇ ತೋರುತ್ತದೆ. ಬಾಯಿ ಚಟಕ್ಕೆ ಮಾತಾಡುವವರ ಸಾಲಿಗೆ ಸಕಲಕಲಾವಲ್ಲಭನ ಸೇರ್ಪಡೆ ಎಂಬುದೇ ಈ ಪ್ರಹಸನದ ಫಲಶೃತಿ!
ಹೌದು ಕನ್ನಡ ಭಾಷಾ ವಿದ್ವಾಂಸ ಡಿ.ಎಲ್.ನರಸಿಂಹಾಚಾರ್ ಅವರ ” ಇಸಿಲ” ಎಂಬ ಪದಕ್ಕೆ ಕೋಟೆ ಬಾಗಿಲು ಎಂದು ಅರ್ಥೈಸಿದ ಕೂಡಲೇ ಕನ್ನಡ ಭಾಷೆಯ ಇತಿಹಾಸ ಎರಡು ಸಾವಿರ ವರ್ಷ ಹಿಂದಕ್ಕೆ ಹೋಯಿತು. ಎಂತೆಂಥಹ ಮಹಾಕಾವ್ಯಗಳು ಕನ್ನಡ ದಲ್ಲಿವೆ…ಎಂತೆಂತಹ ಕಲೆಗಳಿವೆ… ಕನ್ನಡದ ಜಾನಪದ ಸಂಸ್ಕೃತಿಗೆ ಎಲ್ಲೆಯೇ ಇಲ್ಲ…ಮೂರ್ನಾಲ್ಕು ಸಾವಿರ ವರ್ಷಗಳ ಇತಿಹಾಸವಿರುವ ಸ್ಥಳಗಳು ಕನ್ನಡನಾಡಿನಲ್ಲಿವೆ. ಆ ಸ್ಥಳಗಳಲ್ಲಿ ಮಾತೃಭಾಷೆ ಕನ್ನಡವೇ ಆಗಿರುತ್ತದೆ ಅಲ್ಲವೆ? ಆಗಿರಲೇಬೇಕು.
ಕೆಲ ವಿದ್ವಾಂಸರು ಮಿಟಚಿ, ಚೆನ್ ಎಂಬ ಪದಗಳನ್ನು ಮಿಡಚೆ, ಚಂದ್ರ ಎಂದು ಅರ್ಥೈಸಿ ವೇದಕಾಲಕ್ಕೆ ಕನ್ನಡ ಭಾಷೆಯನ್ನು ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ಇದು ಒಂದಿಷ್ಟು ಉತ್ಪ್ರೇಕ್ಷೆಯೆನಿಸಿದರೂ ಪ್ರಯತ್ನ ತಪ್ಪಲ್ಲ. ಅದಿರಲಿ….ಪದ್ಮಪುರಾಣದಲ್ಲಿ ಬಹಳಷ್ಟು ಕಡೆ ಕರ್ನಾಟಕ, ಕರ್ಣಾಟಕ ಎಂಬ ಪದಗಳಿವೆ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳಲ್ಲಿ ಕರ್ನಾಟಕ ಎಂಬ ಪದಗಳನ್ನು ಉಪಯೋಗಿಸಲಾಗಿದೆ. ಇಂದಿಗೂ ರಾಮಾಯಣ ಮಹಾಭಾರತ ಎರಡೂ ಕಾವ್ಯಗಳ ನಿಖರ ಕಾಲ ಯಾವುದೆಂಬ ಬಗ್ಗೆ ನಿರ್ಧಾರವಾಗಿಲ್ಲವಾದರೂ ನಾಲ್ಕು ಸಾವಿರ ವರ್ಷಗಳ ಹಿಂದಿನದ್ದೆಂಬ ಅಭಿಪ್ರಾಯ ವಿದ್ವಾಂಸರುಗಳಿಂದ ವ್ಯಕ್ತವಾಗಿದೆ. ಅಂದರೆ ಆ ಕರ್ನಾಟಕದ ಭಾಷೆ ಕನ್ನಡವೇ ಆಗಿರಯತ್ತದೆಯೇ ವಿನಃ ತಮಿಳು ಅಲ್ಲವೆಂಬುದು ನಿಸ್ಸಂಶಯ.
ಇನ್ನು ತಮಿಳು ಭಾಷೆಯ ಅತೀ ಹಳೆಯ ಕಾವ್ಯ, ಸಂಗಂ ಯುಗಕ್ಕೆ ಸೇರಿದ ಶಿಲಪ್ಪದಿಕಾರಂ ಕಾವ್ಯದಲ್ಲಿ ಕರ್ನಾಟಕದ ಪ್ರದೇಶಗಳನ್ನು ಕರುನಾಡಿಗರ್ ಎಂದು ಉಲ್ಲೇಖಿಸಲಾಗಿದೆ. ಅಂದರೆ ಅದರ ಅರ್ಥ ತಮಿಳು ಭಾಷೆಗಿಂತಲೂ ಕರುನಾಡು ಇತ್ತು. ಅಲ್ಲಿಯ ಭಾಷೆ ಕನ್ನಡವೇ ಆಗಿತ್ತು ಎಂಬುದನ್ನು ತಮಿಳು ಕಾವ್ಯವೇ ಶ್ರುತಪಡಿಸಿದಂತಾಗಲಿಲ್ಲವೆ?
ಹಾಲರಾಜನೆಂಬ ಕವಿ ಕ್ರಿ.ಶ. 150 ರಲ್ಲಿ ಪ್ರಾಕೃತ ಭಾಷೆಯಲ್ಲಿ ಬರೆದಿರುವ ‘ಗಾಥಾಸಪ್ತಶತಿ‘ ಎಂಬ ಮಹಾ ಕಾವ್ಯದಲ್ಲಿ ಬರುವ ‘ತೀರ್’, ‘ತುಪ್ಪ’, ‘ಪೆಟ್ಟು’, ‘ಪೊಟ್ಟು’ ಮುಂತಾದ ಪದಗಳು ಕನ್ನಡ ಪದಗಳಲ್ಲವೆ? ಐದನೆಯ ಶತಮಾನದಷ್ಟು ಹಿಂದಿನ ಅನೇಕ ಕನ್ನಡ ಶಾಸನಗಳು ನಮಗೆ ದೊರೆತಿವೆ. ಸಹಜವಾಗಿಯೇ ಆಡುಮಾತಿನ ಕನ್ನಡವು ಆ ಕಾಲಕ್ಕಿಂತ ಹಿಂದೆಯೇ ಇತ್ತೆಂಬುದು ನಿರ್ವಿವಾದದ ಸಂಗತಿ.
ಗಂಗೇಚ ಯಮುನೇ ಚೈವ ಶ್ಲೋಕದಲ್ಲಿ ಕಾವೇರಿಯೂ ಬರಯತ್ತಾಳೆ. ಕಾವೇರಿ ಕರ್ನಾಟಕದಿಂದಲೇ ತಮಿಳುನಾಡಿಗೆ ಹರಿಯುತ್ತಾಳೆ. ಅಂದರೆ ಅದರರ್ಥ ತಮಿಳಿಗಿಂತ ಮೊದಲು ಕನ್ನಡ ಎಂದು!
ಇನ್ನು ನಮ್ಮ ಹುಯಿಲಗೋಳ ನಾರಾಯಣ ರಾಯರು ತಮ್ಮ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯಲ್ಲಿ ” ಆ ಜಲಧಿಯ ನೆಗೆದ ಹನುಮ ನುದಿಸಿದ ನಾಡು” ಎಂದಿದ್ದಾರೆ. ಅಂದರೆ ಹನುಮ ನಮ್ಮ ಕರುನಾಡಿನವನು. ಅಂದರೆ ರಾಮಾಯಣ – ಮಹಾಭಾರತ ಕಾಲದಲ್ಲೆ ಕರುನಾಡಿನವನೊಬ್ಬನಿದ್ದ. ಆತ ಕನ್ನಡದಲ್ಲೆ ಮಾತನಾಡುತ್ತಿದ್ದಿರಬಹುದಲ್ಲವೆ?
ಇನ್ನೊಂದು ಪ್ರಸಿದ್ಧ ಗೀತೆ ರಾಮನ ಅವತಾರ ಹಾಡಿನಲ್ಲಿ ಶರಣು ಶರಣು ಹೇ ಭಾಗವತೋತ್ತಮ..ಕನ್ನಡ ಕುಲ ಪುಂಗವ ಹನುಮ..ಎನ್ನುತ್ತಾರೆ. ಕನ್ನಡದ, ಕರ್ನಾಟಕದ ಪ್ರಾಚೀನತೆ ಮಹಾಭಾರತ ರಾಮಾಯಣ ಕಾಲದ್ದು ಅಲ್ಲವೆ?
ಯಾವುದೇ ಭಾಷೆ ಅಥವಾ ಪ್ರದೇಶದ ಇತಿಹಾಸಕ್ಕೆ ಪ್ರಮುಖ ಆಧಾರ ಶಾಸನಗಳು. ನಮ್ಮ ಭಾಷೆ ಎಷ್ಟು ಪ್ರಾಚೀನವೆಂಬುದು ತಿಳಿಯುವುದೇ ಅದರಿಂದ. ಇಲ್ಲಿಯ ತನಕದ ಸಂಶೋಧನೆಗಳು ಕನ್ನಡ ಭಾಷೆಯನ್ನು ಎರಡು ಸಾವಿರ ವರ್ಷಗಳಿಂಗಿಂತ ಹಿಂದಕ್ಕೆ ಕೊಂಡೊಯ್ದಿವೆ. ಅಂತಹುದರಲ್ಲಿ ಕನ್ನಡ ಭಾಷೆ ಮತ್ತು ಪ್ರದೇಶದಲ್ಲಿ ಬೆಂಬಲ ಮತ್ತು ಪ್ರೀತಿ ಗಳಿಸಿದ ನಟ ಕನ್ನಡ ಭಾಷೆಯ ಬಗ್ಗೆ ತಮಿಳಿನಿಂದ ಹುಟ್ಟಿದ್ದು ಕನ್ನಡ ಎಂದರೆ ಅದು ಮಾನ್ಯವೇ? ಕನ್ನಡಿಗರಿಗೆ ಅದು ಸಹ್ಯವೆ?
ಮತ್ತೂ ಗಮನಿಸಬೇಕಾದ ಅಂಶವೆಂದರೆ ಕಮಲ ಹಾಸನ್ ಈ ಮಾತುಗಳನ್ನಾಡಿದ್ದು ಕನ್ನಡದ ಮೇರು ನಟ, ಕನ್ನಡಿಗರ ಅಣ್ಣಾವ್ರೇ ಆಗಿದ್ದ ಡಾ.ರಾಜ್ ಕುಮಾರ್ ಅವರ ಮಗ ಶಿವರಾಜ್ ಕುಮಾರ್ ಅವರ ಮುಂದೆ. ಕಮಲ ಹಾಸನ್ ಈ ಮಾತುಗಳನ್ನಾಡಿದಾಗ ಶಿವರಾಜ್ ಕುಮಾರ್ ಅವರು ಅದಕ್ಕೆ ವಿರೋಧಿಸಬೇಕಿತ್ತೆಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಕಮಲ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕೆಂದು ಆಗ್ರಹವೂ ಸಾರ್ವತ್ರಿಕವಾಗಿದೆ.
ಇಲ್ಲೊಂದು ಘಟನೆ ನೆನಪಾಗುತ್ತದೆ. ಡಾ.ರಾಜ್ ಅವರ ದಾರಿ ತಪ್ಪಿದ ಮಗ ಚಿತ್ರ ಬಿಡುಗಡೆಯಾದಾಗ ಅದರಲ್ಲಿ ದ್ವಿಪಾತ್ರ ಮಾಡಿರುವ ರಾಜ್ ಅವರ ಒಂದು ಪಾತ್ರ ಖಳನ ಪಾತ್ರ. ಅದರಲ್ಲಿ ಅವರು ವಜ್ರಮುನಿ ಜೊತೆ ಮಾತನಾಡುತ್ತಾ ಒಂದು ವಾಕ್ಯ ಹೇಳುತ್ತಾರೆ.
ಚೇ….ಅಣ್ಣಾವ್ರ ಬಾಯಲ್ಲಿ ಇಂತಹ ಮಾತೆ…ಎಂದು ಬೇಸರಿಸಿದ ಕನ್ನಡಿಗರು ಆ ಚಿತ್ರವನ್ನು ನೋಡಲು ಹೋಗಲೇ ಇಲ್ಲ. ಆ ನಂತರ ಆ ಮಾತನ್ನು ತುಂಡರಿಸಿ ಮತ್ತೆ ಚಿತ್ರ ಬಿಡುಗಡೆಯಾದಾಗ ಆ ಚಿತ್ರ ಶತದಿನ ಕಂಡಿತು.( ಇದನ್ನು ಏಲ್ಲೋ ಓದಿದ್ದಷ್ಟೆ)
ಇಲ್ಲಿ ಗಮನಿಸಬೇಕಾದ್ದೇನೆಂದರೆ ರಾಜ್ ಕುಮಾರ್ ಅವರನ್ನು ಕನ್ನಡಿಗರು ಮನೆ ಮಗನೆಂದುಕೊಂಡಿದ್ದರು. ಅಂತಹವರ ಬಾಯಲ್ಲಿ ನಟನೆಯೇ ಆದರೂ ಕೆಟ್ಟ ಮಾತು ಬರಬಾರದೆಂಬುದು ಕನ್ನಡಿಗರ ಆಶಯವಾಗಿತ್ತು. ರಾಜ್ ಅವರ ಮೇಲಿನಪ್ರೀತಿ ಅಂತಹುದು.
ಕಮಲ ಹಾಸನ್ ಅವರ ಮೇಲೆ ರಾಜ್ ಕುಮಾರ್ ಅವರ ಮೇಲಿನಷ್ಟು ಪ್ರೀತ್ಯಾದರ ಕಮಲ್ ಹಾಸನ್ ಮೇಲಿಲ್ಲದಿದ್ದರೂ ಬಹುದೊಡ್ಡ ಪ್ರೀತಿಯಂತೂ ಇದೆ. ಅದಕ್ಕೆ ಅವರು ನಟಿಸಿದ ಎಲ್ಲ ಚಿತ್ರಗಳಿಗೆ ಕನ್ನಡದವರು ನೀಡಿದ ಬೆಂಬಲವೇ ಸಾಕ್ಷಿ. ಅಷ್ಟೇಕೆ? ಕನ್ನಡ ನಾಡಿನ ಅಯ್ಯಂಗಾರ್ ಕುಟುಂಬದಲ್ಲಿ ಹುಟ್ಟಿ ತಮಿಳು ನಾಡು ಮುಖ್ಯಮಂತ್ರಿಯಾದ ಪುರುಚ್ಚಿ ತಲೈವಿ ಜಯಲಲಿತಾ ಇದೇ ಕಮಲ ಹಾಸನ್ ಗೆ ಕಿರುಕುಳ ನೀಡಿದಾಗ ನಮ್ಮ ನಾಡಿಗೆ ಬನ್ನಿ ಎಂದವರು ಕನ್ನಡಿಗರು! ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಕಮಲ್ ಸ್ವಂತ ” ಕನ್ನಡ ನಾಡಿನಲ್ಲಿ ಕನ್ನಡ ಮಾತಾಡು” ಎಂದು ಕುಣಿದಿಲ್ಲವೆ? ಆಗ ತಮಿಳಿನಿಂದ ಹುಟ್ಟಿದ ಕನ್ನಡ ಎಂದು ತಿಳಿದಿರಲಿಲ್ಲವೆ? ಇದೀಗ ಯಾಕೆ ಜ್ಞಾನೋದಯವಾಯ್ತು?
ನಿಜಕ್ಕೂ ಈಗ ಆಗಬೇಕಾದ್ದೇನು? ಕಮಲ ಹಾಸನ್ ಕನ್ನಡ ಭಾಷಿಕರ ಕ್ಷಮೆ ಕೇಳಿಬಿಡಲಿ. ಕನ್ನಡಿಗರು ಅಷ್ಟು ಮಾತ್ರ ಬಯಸುತ್ತಾರೆ. ಕ್ಷಮೆ ಕೇಳದಿದ್ದರೆ ಖಂಡಿತಾ ಕಮಲ ಹಾಸನ್ ಅವರ ಯಾವ ಚಿತ್ರವೂ ಕರುನಾಡಿನಲ್ಲಿ ಹಿಟ್ ಆಗಲ್ಲ. ಯಾರೂ ನೋಡುವುದಿಲ್ಲ. ಅಸಲಿಗೆ ಅವರ ಚಿತ್ರಗಳೇ ಕರುನಾಡಿನಲ್ಲಿ ಬಿಡುಗಡೆಯಾಗಲ್ಲ. ಕೂಡಲೇ ಕಮಲ್ ಕ್ಷಮೆ ಕೇಳಿ ದೊಡ್ಡವರಾಗಲಿ.
ಅದಿರಲಿ ಕಮಲ ಹಾಸನ್ ಹೆಸರಿನ ಹಾಸನ್ ಯಾವುದು? ಕರುನಾಡಿನದ್ದೇ ಅಲ್ಲವೆ? ಅದನ್ನು ತಮ್ಮ ಹೆಸರಿನಿಂದ ತೆಗೆಯಬೇಕೆಂದರೆ ಕಮಲ್ ಏನನ್ನಬಹುದು?
ಒಂದು ಭಾಷೆಯ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕಷ್ಟೆ……
