ಕೇಂದ್ರ ವಿತ್ತ ಸಚಿವರ ನಡೆ ಖಂಡಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಡೂರು ತಾಲ್ಲೂಕು ಘಟಕದ ಸದಸ್ಯರು ಕಪ್ಪುಪಟ್ಟಿ ಧರಿಸಿ ಜಾಥಾ ನಡೆಸಿದರು.
ಕಡೂರು: ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿ ಜಾರಿಗೆ ನಿವೃತ್ತಿ ವೇತನ ಮತ್ತು ಕುಟುಂಬ ಪಿಂಚಣಿಯ ಪರಿಷ್ಕರಣೆ ಮಾಡಬಾರದು ಹಾಗೂ ವಾರ್ಷಿಕ ತೊಟ್ಟಿಬತ್ತಿ ನೀಡಬಾರದು ಎಂದು ಕೇಂದ್ರ ಹಣಕಾಸು ಸಚಿವರು ಚರ್ಚಿಸಿರುವುದು ಖಂಡನೀಯ ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಿ.ಟಿ.ಅಜ್ಜಯ್ಯ ಹೇಳಿದರು.
ಕೇಂದ್ರ ಹಣಕಾಸು ಸಚಿವರ ನಡೆಯನ್ನು ಖಂಡಿಸಿ ಸಂಘದ ತಾಲೂಕು ಘಟಕದ ಸದಸ್ಯರೊಡನೆ ಕಪ್ಪುಪಟ್ಟಿ ಧರಿಸಿ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಬೆಲೆ ಏರಿಕೆ ಸೂಚ್ಯಂಕದ ಪ್ರಕಾರ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಮತ್ತು ತುಟ್ಟಿ ಭತ್ಯೆಗಳನ್ನು ನೀಡುವುದು ಸರ್ಕಾರಗಳ ಆಧ್ಯ ಕರ್ತವ್ಯವಾಗಿದೆ.ಇಂತಹ ಸಮಯದಲ್ಲಿ ವಿತ್ತಸಚಿವರ ಮಾತು ನಿವೃತ್ತ ನೌಕರರಲ್ಲಿ ಆತಂಕ ಮೂಡಿಸಿದೆ. ಇದಕ್ಕೆ ಅವಕಾಶ ನೀಡಬಾರದು. ವಿತ್ತ ಸಚಿವರ ನಡೆ ಖಂಡನೀಯ ಎಂದರು.
ಸಂಘಟನಾ ಕಾರ್ಯದರ್ಶಿ ಗುರುರಾಜ ಹಾಲ್ಮಠ್ ಮಾತನಾಡಿ,
ಕೇಂದ್ರ ವಿತ್ತ ಸಚಿವರು ಚರ್ಚಿಸಿರುವ ವಿಚಾರ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೆ ನೋವುಂಟು ಮಾಡುವಂತಹುದಾಗಿದೆ. 40 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ವೇತನವನ್ನೆ ಜೀವನಾಧಾರ ಮಾಡಿಕೊಂಡ ವೃದ್ಧರಿಗೆ ಮತ್ತು ಅವರ ಅವಲಂಬಿತರಿಗೆ ತೀವ್ರ ಆರ್ಥಿಕ ಹಿನ್ನಡೆಯಾಗುತ್ತದೆ. ವಿತ್ತ ಸಚಿವರ ನಡೆಯನ್ನು ಖಂಡಿಸಿ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಂಘ ಸಲ್ಲಿಸುತ್ತಿದೆ ಎಂದರು.
ಈ ಕರಿತು ಮನವಿಯನ್ನು ತಹಶೀಲ್ದಾರ್ ಪೂರ್ಣಿಮಾ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪ್ರಧಾನಕಾರ್ಯದರ್ಶಿ ಎನ್.ಎಚ್.ಚಂದ್ರಪ್ಪ, ಖಜಾಂಚಿ ಪಿ.ನಂಜುಂಡಾರಾಧ್ಯ, ಜಿಲ್ಲಾ ಉಪಾಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ, ವೈ.ಕೆ.ರಂಗಪ್ಪ, ಬಿ.ಕೆ.ಕುಬೇಂದ್ರಾಚಾರ್ ಮತ್ತಿತರರು ಇದ್ದರು.
