ಕಡೂರು: ನಿಧನರಾದ ತಂದೆಯ ಅಂತ್ಯಸಂಸ್ಕಾರವನ್ನು ಅವರ ಹೆಣ್ಣುಮಕ್ಕಳೇ ಸಂಪ್ರದಾಯಬದ್ದವಾಗಿ ನಡೆಸುವ ಮೂಲಕ ಕರ್ತವ್ಯ ನಿರ್ವಹಿಸಲು ಹೆಣ್ಣುಮಕ್ಕಳಿಗೂ ಸಮಾನ ಅವಕಾಶವಿದೆಯೆಂಬ ಸಂದೇಶವನ್ನು ಬೀರೂರಿನ ಸಹೋದರಿಯರಿಬ್ಬರು ಸಮಾಜಕ್ಕೆ ನೀಡಿದ್ದಾರೆ.
ತಂದೆಯ ಅಂತಿಮಸಂಸ್ಕಾರ ನೆರವೇರಿಸಿದ ಐಶ್ವರ್ಯಾ

ಬೀರೂರು ಪಟ್ಟಣದ ಭಾವಸಾರ ಸಮಾಜದ ಭಾಂಗ್ರೆ.ಎಸ್.ವಿಶ್ವನಾಥ್ ಅವರು ಗುರುವಾರ ನಿಧನರಾಗಿದ್ದರು. ಅವರಿಗೆ ಗಂಡು ಸಂತಾನವಿರದಿದ್ದ ಕಾರಣ ಅವರ ಸಹೋದರರ ಮಕ್ಕಳಲ್ಲಿ ಒಬ್ಬರು ಅಂತಿಮ ವಿಧಿ ವಿಧಾನ ನಡೆಸಬೇಕೆಂಬ ಚಿಂತನೆ ಕುಟುಂಬ ವರ್ಗದಲ್ಲಿತ್ತು.ಆದರೆ ವಿಶ್ವನಾಥ್ ಅವರ ಪುತ್ರಿ ಬಿ.ವಿ.ಐಶ್ವರ್ಯ ತಂದೆಯ ಅಂತ್ಯ ಸಂಸ್ಕಾರವನ್ನು ತಾನೇ ನಡೆಸುವುದಾಗಿ ತಾಯಿ ಗೀತಾ ಹಾಗೂ ಪತಿ ರಾಹುಲ್ ಹಾಗೂ ಕುಟುಂಬದ ಹಿರಿಯರ ಬಳಿ ಮಾಡಿದ ಮನವಿಗೆ ಎಲ್ಲರೂ ಒಪ್ಪಿದರು.
ಐಶ್ವರ್ಯ ಅವರು ತಂಗಿ ಬಿ.ವಿ.ಭಾವನ ಜೊತೆಗೂಡಿ ಅಂತಿಮ ವಿಧಿ ವಿಧಾನಗಳನ್ನು ಚಾಚೂ ತಪ್ಪದೆ ನೆರವೇರಿಸಿ ಚಿತೆಗೆ ಅಗ್ನಿಸ್ವರ್ಶ ಮಾಡಿ ತಂದೆಗೆ ಅಂತಿಮ ವಿದಾಯ ಹೇಳಿದರು.
ಈ ಹೃದಯಂಗಮ ಸನ್ನಿವೇಶಕ್ಕೆ ಕುಟುಂಬ ವರ್ಗದವರ ಜೊತೆ ಭಾವಸಾರ ಸಮಾಜದ ಬಂಧುಗಳು ಸಾಕ್ಷಿಯಾದರು. ಜನ್ಮ ನೀಡಿದ ತಂದೆಗೆ ತಾವೇ ಅಂತಿಮ ವಿಧಿ ವಿಧಾನ ನೆರವೇರಿಸಿ ಕರ್ತವ್ಯನಿಷ್ಠೆ ತೋರಿದ ಸೋದರಿಯರ ನಡೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
