oplus_0
Spread the love
ಕೆ.ಎಸ್.ಆನಂದ್, ಶಾಸಕ.ಕಡೂರು
ಕಡೂರು: ತಮ್ಮ ಆಪ್ತ ಸಹಾಯಕ ಮಂಜುನಾಥ್ ಶಾಸಕರ ಸ್ಥಾನದಲ್ಲಿ ಕುಳಿತು ಸಭೆ ನಡೆಸಿದ್ದಾರೆಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಸ್ಪಷ್ಟಪಡಿಸಿದರು.

ಭಾನುವಾರ ಕಡೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಶುಕ್ರವಾರ ಕಂದಾಯ ಗ್ರಾಮಗಳ ಕುರಿತು ತಹಶೀಲ್ದಾರ್ ಅವರು ಅಧಿಕಾರಿಗಳ ಸಭೆ ನಡೆಸಿದ್ದರು. ಅಧಿವೇಶನ ನಡೆಯುತ್ತಿರುವ ಪ್ರಯುಕ್ತ ತಾವು ಆ ಸಭೆಗೆ ಹಾಜರಾಗಿರಲಿಲ್ಲ. ಮದ್ಯಾನ್ಹ 2-30 ಗೆ ಆರಂಭವಾದ ಸಭೆಗೆ ತಮ್ಮ ಆಪ್ತ ಸಹಾಯಕ ಮಂಜುನಾಥ್ 4-30 ಗೆ ಸಭೆಗೆ ಹಾಜರಾಗಿ ಕಂದಾಯ ಗ್ರಾಮಗಳ ಕುರಿತು ಮಾಹಿತಿ ನೀಡಿದ್ದಾರೆ. ತಹಶೀಲ್ದಾರ್ ಅವರ ಪಕ್ಕ ಕುಳಿತಿಲ್ಲ. ಹಿಂದಿನ ಸಾಲಿನ ಆಸನದಲ್ಲಿ‌ ಕುಳಿತಿದ್ದಾರೆ. ಪ್ರೊಜೆಕ್ಟರ್ ನೋಡುವ ಸಂದರ್ಭದಲ್ಲಿ ಎಲ್ಲರೂ ಆ ಕಡೆ ತಿರುಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದನ್ನೆ ಕೆಲ ಸುದ್ದಿ ವಾಹಿನಿಗಳು, ಪತ್ರಿಕೆಗಳು ಹಾಗೂ ಯೂ ಟ್ಯೂಬ್ ಚಾನಲ್ ಗಳು ಸತ್ಯಾಸತ್ಯತೆ ಪರಿಶೀಲಿಸದೆ ಪ್ರಸಾರ ಮಾಡಿವೆ ಎಂದರು.
ಶಿಷ್ಟಾಚಾರ ಪಾಲನೆಯನ್ನು ನಾನಾಗಲೀ ಅಥವಾ ನನ್ನ ಆಪ್ತ ಸಹಾಯಕರಾಗಲಿ ಯಾರಿಂದಲೂ ಕಲಿಯಬೇಕಿಲ್ಲ. ಈ ಘಟನೆಯನ್ನೆ ದೊಡ್ಡ ಪ್ರಮಾದ ಎಂಬಂತೆ ಬಿಜೆಪಿಯ ಕಾರ್ಯಕರ್ತರೊಬ್ಬರು ಶಾಸಕರ ಪಿಎ ದರ್ಭಾರ್ ನಡೆಸುತ್ತಿದ್ದಾರೆ. ಸಭೆ ನಡೆಸುತ್ತಾರೆಂಬ ಹೇಳಿಕೆ ನೀಡಿದ್ದಾರೆ. ತಮ್ಮ ಅಭಿವೃದ್ಧಿ ಕಾರ್ಯಗಳ ಕುರಿತು ಅವರಿಗಿರುವ ಅಸಹನೆಯನ್ನು ತೋರಿಸಲು ಈ ಘಟನೆ ಬಳಸಿಕೊಂಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರುಗಳೇ ಪತ್ರಿಕಾಗೋಷ್ಟಿ ಮಾಡಬಹುದಿತ್ತು. ತೀರ ಒಬ್ಬ  ನಿರುದ್ಯೋಗಿ ಕಾರ್ಯಕರ್ತ ಇದನ್ನು ಹೇಳಿದ್ದಾನೆಂದರೆ ಹಿರಿಯ ನಾಯಕರುಗಳಿಗೆ ನೈತಿಕತೆಯೇ ಇಲ್ಲವೆ ಎಂದು ಪ್ರಶ್ನಿಸಿದರು.
ಇನ್ನು ಮಾಜಿ ಸಚಿವ ಸಿ.ಟಿ.ರವಿ ಯವರು ಇನ್ನೂ ಸೋಲಿನ ಹತಾಶೆಯಿಂದ ಹೊರಬಂದೇ ಇಲ್ಲ.ಅವರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಿಷ್ಠಾಚಾರ ಪಾಲನೆಯನ್ನು ಅವರಿಂದ ಕಲಿಯಬೇಕಿಲ್ಲ. ಜಿಲ್ಲೆ ಹಿಂದುಳಿಯಲು ಅಪೂರ್ವ ಕೊಡುಗೆ ನೀಡಿದ ಸಿ.ಟಿ.ರವಿಯವರು ನಮ್ಮ ದೇಶದ ಹೆಮ್ಮೆಯ ಸ್ವಾಮಿ ವಿವೇಕಾನಂದರ ಪ್ರಥಿಮೆ ಈಗ ಎಲ್ಲಿದೆ ಎಂದು ಜಿಲ್ಲೆಯ ಜನತೆಗೆ ತಿಳಿಸಲಿ.ಆ ಪ್ರಥಿಮೆಯನ್ನು ನಮಗೆ ನೀಡಲಿ.ಕಡೂರಿನಲ್ಲಿ ಅತ್ಯಂತ ಗೌರವವಾಗಿ ಪ್ರತಿಷ್ಠಾಪಿಸುತ್ತೇವೆ.ಶಿಷ್ಠಾಚಾರವನ್ನು ಪಾಲಿಸುವ ಕುರಿತು ತಮಗೆ ಪಾಠ ಮಾಡಬೇಕಿಲ್ಲ ಎಂದರು.
ಜೆಡಿಎಸ್- ಬಿಜೆಪಿ ಎರಡೂ ಈಗ ನಿರುದ್ಯೋಗ ಪರ್ವದಲ್ಲಿವೆ. ಕಾಂಗ್ರೆಸ್ ಪಕ್ಷದ ಶಾಸಕರ ಅಭಿವೃದ್ಧಿಯ ಕಾರ್ಯಗಳನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಮುಂದೆ ತಮಗೆ ಅವಕಾಶವೇ ಸಿಗುವುದಿಲ್ಲ ಎಂಬ ಅಸಹಾಯಕತೆ,ಹತಾಶೆ ಅವರಲ್ಲಿದ್ದು, ಇಂತಹ ನಿರಾಧಾರ ವಿಷಯಗಳನ್ನು ಆಗಾಗ ಪ್ರಸ್ತಾಪಿಸುತ್ತಾರೆ. ಯಾವುದೇ ವಿಷಯಗಳನ್ನು ಮಾತನಾಡಲು ಎಲ್ಲರಿಗೂ ಹಕ್ಕಿದೆ. ಆದರೆ  ತಮ್ಮ ವಿರುದ್ಧ ಮಾತನಾಡಲು ಯಾವುದೇ ಅವಕಾಶ ಸಿಗದಿದ್ದಾಗ ಇಂತಹ ಆಧಾರ ರಹಿತ ಆರೋಪ ಮಾಡುವುದನ್ನು ಬಿಟ್ಟು ರಚನಾತ್ಮಕವಾಗಿ ಯೋಚಿಸುವ ಪರಿಪಾಠ ಬೆಳೆಸಿಕೊಳ್ಳಲಿ ಎಂದರು.
ಸಪ್ತಕೋಟಿ ಧನಂಜಯ, ಅರೇಹಳ್ಳಿ ಶಿವು,ರೋಹನ್ ಫರ್ನಾಂಡಿಸ್, ಅರುಣ್ ಇದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!