ಸಿ.ಎಸ್.ಪೂರ್ಣಿಮಾ, ತಹಶೀಲ್ದಾರ್.ಕಡೂರು
ಕಡೂರು: ತಾಲ್ಲೂಕು ಕಚೇರಿಯಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ತಿಳಿಸಿದರು.
ಶುಕ್ರವಾರ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಚೇರಿ ಕಾರ್ಯನಿರ್ವಹಣೆಯಲ್ಲಿ ತಹಶೀಲ್ದಾರ್ ಅವರು ಕಿರುಕುಳ ನೀಡುತ್ತಿದ್ದಾರೆ, ಹಣ ನೀಡುವಂತೆ ಒತ್ತಡ ಹಾಕುತ್ತಿದ್ದು, ಇದನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಇಕ್ಬಾಲ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಇದು ಸುಳ್ಳು. ಇಡೀ ತಾಲ್ಲೂಕು ಕಚೇರಿ ಆಡಳಿತದ ಮುಖ್ಯಸ್ಥೆಯಾಗಿ ಯಾವುದೇ ನೌಕರರಿಗೆ ಕಿರುಕುಳ ನೀಡಿಲ್ಲ. ಕಾರ್ಯನಿರ್ವಹಣೆಯಲ್ಲಿ ಲೋಪ ಕಂಡು ಬಂದರೆ ಕೂಡಲೇ ಆ ನೌಕರರಿಗೆ ಎಚ್ಚರಿಕೆ ನೀಡುವುದನ್ನು ಕಿರುಕುಳ ಎನ್ನಲಾಗದು. ಇಕ್ಬಾಲ್ ಅವರು ಕಾರ್ಯನಿರ್ವಹಿಸುತ್ತಿದ್ದ
ಜನನ ಮರಣ ಶಾಖೆ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಹಲವಾರು ಬಾರಿ ಲೋಪಗಳನ್ನು ಮಾಡಿದ್ದಾರೆ. ಅನುಮತಿ ಪಡೆಯದೆ ಗೈರು ಹಾಜರಾಗುವುದು, ಯಾವುದೇ ಅನುಮತಿಯಿಲ್ಲದೆ ಇಬ್ಬರು ಸಹಾಯಕರನ್ನು ನೇಮಿಸಿಕೊಂಡಿರುವುದು, ಸಾರ್ವಜನಿಕರ ಬಳಿ ಅವಾಚ್ಯ ಶಬ್ಧಗಳನ್ನುಪಯೋಗಿಸುವುದು ಹೀಗೆ ಹಲವಾರು ದೂರುಗಳಿದ್ದವು. ಈ ಬಗ್ಗೆ ಅವರಿಗೆ ಕಾರಣ ಕೇಳಿ ನೋಟೀಸ್ ಕೂಡ ನೀಡಲಾಗಿತ್ತು.ಅದಕ್ಕೆ ಅವರು ಯಾವ ಉತ್ತರವನ್ನೂ ನೀಡದೆ ಅಲಕ್ಷ್ಯ ಮಾಡಿದ್ದಾರೆ. ಈ ಕಾರಣದಿಂದ
ಸಾರ್ವಜನಿಕ ಮತ್ತು ಆಡಳಿತ ಹಿತ ದೃಷ್ಟಿಯಿಂದ ಬೇರೆ ನಿರೀಕ್ಷಕರನ್ನು ನೀಡಲು ಪತ್ರ ಬರೆಯಲಾಗಿತ್ತು. ಅದನ್ನಹ ಆಧರಿಸಿ ಇಕ್ಬಾಲ್ ಅವರನ್ನು ಕಡೂರು ತಾಲ್ಲೂಕು ಕಚೇರಿಯಿಂದ ರಿಲೀವ್ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
ಇದನ್ನೆ ಕಿರುಕುಳ ಎಂದು ಇಕ್ಬಾಲ್ ಸುಳ್ಳು ಆರೋಪ ಮಾಡುವ ಮೂಲಕ ನಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ.ನಾನು ಯಾವುದೇ ನೌಕರರಿಂದ ಹಣ ಕೇಳಿಲ್ಲ. ಹೀಗೆ ಸುಳ್ಳು ಆರೋಪ ಮಾಡಿರುವುದರಿಂದ ಅಧಿಕಾರಿಗಳ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ಆದ್ದರಿಂದ ಹಿರಿಯ ಅಧಿಕಾರಿಗಳು ಈ ಪ್ರಕರಣದ ಪೂರ್ಣ ತನಿಖೆ ನಡೆಸಬೇಕು ಹಾಗೂ ತಪ್ಪು ಯಾರದೇ ಇದ್ದರೂ ಅವರಿಗೆ ಶಿಕ್ಷೆಯಾಗಲಿ. ಈ ಬಗ್ಗೆ ಪೊಲೀಸ್ ದೂರು ಸಹ ನೀಡಲಾಗಿದೆ ಎಂದರು.
——-
ಎರಡು ದಿನಗಳ ಹಿಂದೆ ಕಡೂರು ಸಾಖ್ಯಿಕ ನಿರೀಕ್ಷಕ ಇಕ್ಬಾಲ್ ಅವರು ತಹಶೀಲ್ದಾರ್ ಪೂರ್ಣಿಮಾ, ಶಾಸಕರ ಪಿಎ ಮಂಜುನಾಥ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ಅವರು ಕಿರುಕುಳ ನೀಡುತ್ತಿದ್ದು,ಅದನ್ನು ತಾಳಲಾಗದೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
