ಕಡೂರು: ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯಬೇಕು, ಸ್ಥಿರ ಆದಾಯ ದೊರೆಯಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರವನ್ನು ರಾಜ್ಯ ಸರ್ಕಾರ ಆರಂಭಿಸಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತೀ ವರ್ಷ ಮಾರ್ಕೆಟಿಂಗ್ ಫೆಡರೇಷನ್ ನಿಂದ ರಾಗಿ ಖರೀದಿ ನಡೆಯುತ್ತಿತ್ತು ಈ ವರ್ಷ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಮೂಲಕ ಖರೀದಿಸಲಾಗುತ್ತಿದೆ. ತಾಲ್ಲೂಕಿನಲ್ಲಿ 13470 ರೈತರು ನೊಂದಣಿ ಮಾಡಿಕೊಂಡಿದ್ದಾರೆ. ಸುಮಾರು 3 ಲಕ್ಷ ಕ್ವಿಂಟಾಲಿಗೂ ಹೆಚ್ಚು ರಾಗಿ ಖರೀದಿಯಾಗುವ ನಿರೀಕ್ಷೆಯಿದೆ. ಒಂದುಕ್ವಿಂಟಾಲಿಗೆ ₹4886 ರೂಪಾಯಿ ನೀಡಲಾಗುತ್ತದೆ.ರೈತರು ಈ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇತ್ತೀಚೆಗೆ ರಾಗಿ ಬೆಳೆಗೆ ಬಹಳ ಮಹತ್ವ ಬಂದಿದೆ. ರೈತರು ಅಡಿಕೆ ಮುಂತಾದವಕ್ಕೆ ಒತ್ತು ನೀಡಿದ್ದು, ಆರೋಗ್ಯಕ್ಕೆ ಅತ್ಯುತ್ತಮವೆನಿಸಿದ ರಾಗಿ ಬೆಳೆ ಬೆಳೆಯುವವರು ಕಡಿಮೆಯಾಗಿದ್ದಾರೆ. ಮುಂದೊಂದು ದಿನ ರಾಗಿಗೆ ಎಲ್ಲಿಲ್ಲದ ಬೇಡಿಕೆ ಬರುವ ಸಾಧ್ಯತೆಗಳು ಹೆಚ್ಚಿದೆ.ರೈತರು ಅಡಿಕೆ ಮೇಲೆ ಸಮೂಹ ಸನ್ನಿಯ ರೀತಿ ಅವಲಂಬಿತರಾಗಿರುವುದು ಒಳ್ಳೆಯ ಲಕ್ಷಣವಲ್ಲ. ಸೀಮಿತ ಬೆಳೆಯಾದ ಅಡಿಕೆ ಅನಿವಾರ್ಯವಲ್ಲ. ಆದರೆ ರಾಗಿ ಆನಿವಾರ್ಯ ಆಹಾರ ಬೆಳೆ ಎಂಬುದನ್ನು ರೈತರು ಅರಿಯಬೇಕು ಎಂದರು.
ಯಾಂತ್ರೀಕೃತ ಬದುಕಿನಲ್ಲಿ ಈಗ ಸಾಂಪ್ರದಾಯಿಕ ಕಣಗಳು ಮರೆಯಾಗಿವೆ. ಪ್ರತಿ ಗ್ರಾಮದಲ್ಲೂ ಸಾಂಪ್ರದಾಯಿಕ ಒಕ್ಕಣೆಗೆ ಅನುಕೂಲವಾಗುವಂತೆ ಕಣ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ.ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲೂ ಗಮನ ಸೆಳೆಯುವ ಕಾರ್ಯ ಮಾಡುತ್ತೇನೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಅಶೋಕ್, ಆಹಾರ ನಿರೀಕ್ಷಕಿ ಶಿಲ್ಪ ಮತ್ತು ಶ್ರೀನಿವಾಸ್, ಎಪಿಎಂಸಿ ಕಾರ್ಯದರ್ಶಿ ಧರ್ಮರಾಜ್, ಕೆಡಿಪಿ ನಾಮನುರ್ದೇಶಿತ ಸದಸ್ಯ ಗುಮ್ಮನಹಳ್ಳಿ ಅಶೋಕ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಲ್.ರುದ್ರೇಗೌಡ, ಪ್ರಗತಿ ರೈತ ಉತ್ಪಾದಕ ಕೇಂದ್ರದ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್, ಮಲಿಯಪ್ಪ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನಿರ್ದೇಶಕ
ಯೋಗಾನಂದ್, ವ್ಯವಸ್ಥಾಪಕಿ ಅನುರಾಧ, ಗುರುರಾಜ ಹಾಲ್ಮಠ್ ಇದ್ದರು.
——–
ಬಾಕ್ಸ್ ಸುದ್ದಿ
50 ಕ್ವಿಂಟಾಲಿಗಿಂತ ಹೆಚ್ಚು ರಾಗಿ ಮಾರಾಟ ಮಾಡಿದರೆ ಅಂತಹವರ ಬಿಪಿಎಲ್ ಕಾರ್ಡು ರದ್ದಾಗುತ್ತದೆ. ಹಾಗಾಗಿ ರೈತರು ತಾವು ಬೆಳೆದಷ್ಟೆ ಪ್ರಮಾಣದ ರಾಗಿ ಮಾರಾಟ ಮಾಡಬೇಕು. ಇದರ ಬಗ್ಗೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು. ರಾಗಿ ಖರೀದಿ ಕೇಂದ್ರದಲ್ಲಿ ಯಾವುದೇ ಗೊಂದಲವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ದಲ್ಲಾಳಿಗಳ ಪ್ರವೇಶವಾಗದಂತೆ ಎಚ್ಚರ ವಹಿಸಬೇಕು.ರೈತರೂ ಸಹ ನಿಯಮ ಮೀರದಂತೆ ಸಹಕರಿಸಬೇಕು ಎಂದ ಶಾಸಕರು
ದೇಶ ಮೊದಲು ಎನ್ನುವ ಬಿಜೆಪಿಯವರು, ಪಂಚ ಗ್ಯಾರಂಟಿಗಳ ಉಪಯೋಗ ಪಡೆದುಕೊಳ್ಳುವುದಿಲ್ಲ ಎಂಬ ಅಭಿಯಾನ ಆರಂಭಿಸಲಿ. ಸಾದ್ಯವಾದರೆ ಕಡೂರಿನಿಂದಲೇ ಆರಂಭಿಸಲು ಮುಂದಾಗಲಿ. ಗೋಣಿ ಚೀಲ ಖರೀದಿಸಲು ಹಣವಿಲ್ಲ ಎಂದು ಒಬ್ಬರು ಹೇಳಿಕೆಯಿತ್ತಿದ್ದಾರೆ. ಅವರೇ ಗ್ಯಾರಂಟಿ ಯೋಜನೆಗಳ ಉಪಯೋಗ ಪಡೆಯುತ್ತಿದ್ದಾರೆ. ನನ್ನ ಶಾಸಕತ್ವದ ಅವಧಿಯಲ್ಲಿ ಏನೇನು ಕೆಲಸಗಳಾಗಿವೆ, ಎಷ್ಟು ಅನುದಾನ ಬಂದಿದೆ ಎಂಬುದರ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
