ಕಡೂರು: ತಾಲ್ಲೂಕಿನ ಕುಂಕಾನಾಡು ಗ್ರಾಮಪಂಚಾಯಿತಿಯಲ್ಲಿ ನರೇಗಾ ಹಣ ಸಂದಾಯಿಸದೆ ಸತಾಯಿಸುತ್ತಿರುವುದನ್ನು ಖಂಡಿಸಿ ಹಲವಾರು ಜನರು ಗ್ರಾಮಪಂಚಾಯಿತಿ ಮುಂದೆ ಬುಧವಾರ ಹಸುಗಳನ್ನು ಕಟ್ಟಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕುಂಕಾನಾಡಿನ ಯೋಗೀಶ್ ಮಾತನಾಡಿ, ಸುಮಾರು 12 ಕ್ಕೂ ಹೆಚ್ಚು ಜನರು ನರೇಗಾ ಯೋಜನೆಯಡಿ ಕೊಟ್ಟಿಗೆ ಕಟ್ಟಲು ಮಂಜೂರಾತಿ ಪಡೆದು ಕೊಟ್ಟಿಗೆ ನಿರ್ಮಾಣ ಮಾಡಿದ್ದೇವೆ.ಎರಡು ವರ್ಷವಾದರೂ ನರೇಗಾ ಕಾಮಗಾರಿ ಮೊತ್ತ ಸಂದಾಯವಾಗಿಲ್ಲ. ಹಣ ಸಂದಾಯಿಸಲು ಬೇಕಾದ ಎಲ್ಲ ದಾಖಲೆಗಳನ್ನು ನೀಡಿದ್ದೇವೆ.ಕಾಮಗಾರಿ ಕುರಿತು ಎನ್.ಎಂ.ಆರ್. ಸಹ ಆಗಿದೆ. ಆದರೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ನಮಗೆ ಬರಬೇಕಾದ ಹಣ ಬಂದಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ ಇಓ ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಇಲ್ಲಿ ಆರು ತಿಂಗಳಿಗೊಮ್ಮೆ ಪಿಡಿಓ ಬದಲಾಗುತ್ತಾರೆ. ಅಧಿಕಾರಿಗಳು ನಮ್ಮ ಸಮಸ್ಯೆ ಪರಿಹರಿಸಲು ಆಸಕ್ತಿ ವಹಿಸುವುದೇ ಇಲ್ಲ.ಈ ಕಾರಣದಿಂದ ಇಂದು ಎಲ್ಲ ಫಲಾನುಭವಿಗಳು ಸೇರಿ ಗ್ರಾಮಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಇಓ ಸಿಆರ್.ಪ್ರವೀಣ್ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಮಾತನಾಡಿ, ಈ ಗ್ರಾಮದಲ್ಲಿ ಸುಮಾರು 70 ಕ್ಕೂ ಹೆಚ್ಚು ಕಾಮಗಾರಿಗಳು ನಡೆದಿವೆ. ಕೆಲವರು ಕೊಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಹಂತ ಹಂತವಾಗಿ ಬಿಡುಗಡೆಯಾಗಬೇಕಾದ ಹಣವನ್ನು ಬಿಡುಗಡೆ ಮಾಡದೆ ಎನ್.ಎಂ.ಆರ್.ಹಣ ಮಾತ್ರ ನೀಡಿದ್ದಾರೆ. ನರೇಗಾ ಕಾಮಗಾರಿಯಡಿ ಬಾಕಿಯಿರುವ ಹಣದ ಬಗ್ಗೆ ಪೂರ್ಣ ಪರಿಶೀಲನೆ ನಡೆಸಿ ಹಣ ಪಾವತಿಗೆ ಕ್ರಮ ಕೈಗೊಳ್ಳುವ ಕುರಿತು ನರೇಗಾ ತಾಲ್ಲೂಕು ನಿರ್ದೇಶಕರಿಗೆ ಸೂಚಿಸಲಾಗಿದೆ.ಒಂದು ವಾರದೊಳಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ.
ನರೇಗಾ ಕಾಮಗಾರಿಯ ಹಣ ಪಾವತಿ ವಿಳಂಬ ಪ್ರಶ್ನಿಸಲು, ಪ್ರತಿಭಟನೆ ಮಾಡಲು ಅವಕಾಶವಿದೆ. ಆದರೆ ಸರ್ಕಾರಿ ಕಚೇರಿಯಲ್ಲಿ ಹಸು ಕಟ್ಟಿ ಕೆಲಸಗಳಿಗೆ ಅಡಚಣೆ ಮಾಡುವುದಕ್ಕೆ ಅವಕಾಶವಿಲ್ಲ. ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ನನ್ನ ಗಮನಕ್ಕೆ ತಂದರೆ ಕೂಡಲೇ ಕ್ರಮ ಕೈಗೊಳ್ಳುತ್ತೇನೆ. ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಯಾವುದೇ ತೊಂದರೆ ಮಾಡಲು ಇನ್ನು ಮುಂದೆ ಆಸ್ಪದ ನೀಡಬಾರದು ಎಂದು ಹೇಳಿದರು. ಬಳಿಕ ಪ್ರತಿಭಟನಾಕಾರರು ಸಮಾಧಾನಗೊಂಡು ತೆರಳಿದರು.
ಪಂಚನಹಳ್ಳಿ ಪಿಎಸೈ ಅಫ್ರೀದಿ,ನರೇಗಾ ತಾಲ್ಲೂಕು ನಿರ್ದೇಶಕ ಎ.ಇ.ಕಲ್ಲಪ್ಪ, ಪಿಡಿಓ ಪುಷ್ಪಾ ಇದ್ದರು.
