ಕಡೂರು : ಅಲೆಮಾರಿ ಸಮುದಾಯಗಳ ಬದುಕು ಹಸನುಗೊಳ್ಳಬೇಕೆಂಬುದು ಒಕ್ಕೂಟದ ಉದ್ದೇಶ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಕೆ. ರವೀಂದ್ರಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾಜಿಕ ನ್ಯಾಯದ ವ್ಯವಸ್ಥೆಯಡಿಯಲ್ಲಿ ಅಲೆಮಾರಿ ಸಮುದಾಯಗಳು ಶೋಷಣೆಗಾಗುತ್ತಿರುವುದು ದುರಂತದ ಸಂಗತಿ. ಸರಕಾರವು ಕೂಡ ಗಂಭೀರವಾದ ಸಮಸ್ಯೆಗಳನ್ನು ಪರಿಗಣಿಸುವಲ್ಲಿ ವಿಫಲವಾಗಿದೆ. ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವಾಗಬೇಕಿದೆ. ಸರಕಾರದ ದಾಖಲಾತಿಯ ಪ್ರಕಾರ ಜನನ-ಮರಣಗಳ ನೊಂದಣಿ ಪತ್ರ, ಜಾತಿ ಪ್ರಮಾಣ ಪತ್ರಗಳ ನೀಡುವಿಕೆ ಹಾಗೂ ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನಗಳ ಸ್ಥಾಪನೆಗೆ ರಾಜ್ಯ ಸರಕಾರ ಒತ್ತು ನೀಡಬೇಕಿದೆ ಎಂದರು.
ಈಗಾಗಲೇ ರಾಜ್ಯಾದ್ಯಂತ ವಸತಿ ರಹಿತರಾಗಿ ವಾಸಿಸುತ್ತಿರುವ ಅಲೆಮಾರಿ ಸಮುದಾಯಕ್ಕೆ ನಿವೇಶನದ ಬೇಡಿಕೆ ಹೆಚ್ಚಿದೆ.ಮನೆಕಟ್ಟಿಕೊಳ್ಳುವವರಿಗೆ ಈಗಿರುವ ಪ್ರೋತ್ಸಾಹಧನವನ್ನು 5 ಲಕ್ಷದವರೆಗೆ ಎರಿಸುವುದರ ಜೊತೆಯಲ್ಲಿ ಅಲೆಮಾರಿಗಳು ಅಂತ್ಯಸಂಸ್ಕಾರ ನಡೆಸಲು ರುದ್ರಭೂಮಿಗಾಗಿ ಪ್ರತಿ ತಾಲ್ಲೂಕಿನಲ್ಲಿ 10 ಎಕರೆ ಜಾಗವನ್ನು ಮೀಸಲಿಡುವ ಕಾರ್ಯವಾಗಬೇಕು. ಸಮುದಾಯದ ಶಿಕ್ಷಣಕ್ಕಾಗಿ ಹೆಚ್ಚಿನ ಪ್ರೋತ್ಸಾಹ, ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಇರುವ ಮಾನದಂಡವನ್ನು ಸರಳೀಕರಣಗೊಳಿಸಿಕೊಡಬೇಕಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಅಲೆಮಾರಿ ಸಮುದಾಯಕ್ಕಾಗಿಯೇ ವಿದ್ಯಾರ್ಥಿ ಭವನಗಳನ್ನು ಸ್ಥಾಪಿಸಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ರಾಜ್ಯಾದ್ಯಂತ ಒಕ್ಕೂಟದ ಅಡಿಯಲ್ಲಿ ಸಂಘಟನೆಯು ಕಾರ್ಯನಿರ್ವಹಿಸುತ್ತಿದ್ದು, ಚಿಕ್ಕಮಗಳೂರು ಘಟಕವನ್ನು ನೂತನವಾಗಿ ರಚಿಸಲಾಗಿದೆ. ಸಮುದಾಯದ ಹಕ್ಕುಗಳ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಹಾಗೂ ಅಲೆಮಾರಿಯ ಬದುಕು ಕಟ್ಟಿಕೊಳ್ಳುತ್ತಿರುವ ಸಮುದಾಯಕ್ಕೆ ಶಕ್ತಿ ತುಂಬುವ ಕಾರ್ಯಬೇಕಿದೆ ಎಂದರು.
ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಮಹೇಶ್ ಮಾತನಾಡಿ ಜಿಲ್ಲಾದ್ಯಂತ ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯಗಳ ಸಂಘಟನೆಗೆ ಒತ್ತು ಕೊಡಲಾಗುವುದು. ಮುಂದಿನದಿನಗಳಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ರಚಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಧುಮಲ್ಲಾಘಟ್ಟ, ಆನಂದ್, ತುಮಕೂರು ಜಿಲ್ಲಾಧ್ಯಕ್ಷ ಮಂಜುನಾಥ್, ಮೂಡಲಗಿರೀಶ್ ಮತ್ತಿತರಿದ್ದರು.
———-
ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಜಿಲ್ಲಾ ಸಮಿತಿ.
ಅಧ್ಯಕ್ಷ: ಕೆ.ಟಿ. ಮಹೇಶ್, ಅಶೋಕ್ (ಜಿಲ್ಲಾ ಪ್ರಧಾನಕಾರ್ಯಧರ್ಶಿ), ಮಲ್ಲಾಘಟ್ಟ ವಸಂತ್(ಜಿಲ್ಲಾ ಉಪಾಧ್ಯಕ್ಷ), ಟಿ.ಗಿರೀಶ್(ಕಾನೂನು ಸಲಹೆಗಾರ), ದೇವಿರಪ್ಪ(ಕಡೂರು ತಾಲ್ಲೂಕು ಅಧ್ಯಕ್ಷ)
