ಕಡೂರು:ಡಾ. ಭೀಮರಾವ್ ಕ್ರಾಂತಿಕಾರಿ ಸೇನೆಯ ಕಾರ್ಯ ಚಟುವಟಿಕೆಗಳ ವಿಸ್ತರಣೆ ಪ್ರಯುಕ್ತ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಸೇನೆಯ ಘಟಕಗಳನ್ನು ರಚಿಸಲಾಗಿದೆ ಎಂದು ಸೇನೆಯ ರಾಜ್ಯ ಕಾರ್ಯಧ್ಯಕ್ಷ ಕುಂಕಾನಾಡು ಮಂಜುನಾಥ್ ತಿಳಿಸಿದರು.
ಕಡೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಶೋಷಿತರ ನೊಂದವರ ಪರವಾಗಿ ಕ್ರಾಂತಿಕಾರಿ ಸೇನೆ ಸದಾ ಹೋರಾಟ ನಡೆಸುತ್ತಿದೆ. ಸೇನೆಯ ಸಂಘಟನೆಯನ್ನು ರಾಜ್ಯವ್ಯಾಪಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸವರ್ಷದ ಮೊದಲ ದಿನದಂದು ಜಮಖಂಡಿಯ ರಮಾ ನಿವಾಸದಲ್ಲಿ ಆ ಭಾಗದ ಸೇನೆಯ ಕಾರ್ಯಕರ್ತರ ಸಭೆ ನಡೆಸಿ ಬಾಗಲಕೋಟೆ, ಧಾರವಾಡ ಹುಬ್ಬಳ್ಳಿ ಮತ್ತು ಬಿಜಾಪುರ ಜಿಲ್ಲಾ ಘಟಕಗಳನ್ನು ರಚಿಸಲಾಗಿದೆ. ಪ್ರಸ್ತುತವಾಗಿ ಎಲ್ಲಾ ಘಟಕಗಳಿಗೆ ಉಸ್ತುವಾರಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಈ ನಾಲ್ಕು ಜಿಲ್ಲಾ ಘಟಕದ ಉಸ್ತುವಾರಿ ಅಧ್ಯಕ್ಷರಾಗಿ ಸುಭಾಷ್ ರಬಕವಿ, ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿ ಗಜಾನಂದ ಆಲಬಾಳ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಜಮಖಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದೇವಿಕುಮಾರ್, ಪ್ರೊ.ಪ್ರಕಾಶ್ ದೊಡ್ಡಮನಿ, ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಕಾಂತ್ ತೇರದಾಳ, ರವಿ ದೊಡ್ಡಮನಿ, ದಿಲೀಪ್ ದಾಸ್ಯಾಳ ಉಪಸ್ಥಿತರಿದ್ದರು. ಅಶೋಕ್ ಮೀಸಿ ಉಪನ್ಯಾಸ ನೀಡಿದರು. ಕಾರ್ಯಕ್ರಮ ಪೂರ್ಣ ಯಶಸ್ವಿಯಾಗಿ ಸೇನೆಯ ಕಾರ್ಯಚಟುವಟಿಕೆಗಳಿಗೆ ಸ್ಪೂರ್ತಿ ದೊರೆತಿದೆ ಎಂದರು.
