Spread the love

 

ಕಡೂರು ತಾಲ್ಲೂಕಿನ ಬಾಸೂರಿನಲ್ಲಿ ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಿತು.

 

ಕಡೂರು :ರಾಗಿ ಬೆಳೆಯಿದ್ದರೂ ದರ್ಶಕ್ ಆಪ್ ನಲ್ಲಿ ರಾಗಿ ಎಂದು ನಮೂದಿಸದೆ ಪಿಆರ್.ಓ. ಗಳು ತಪ್ಪೆಸಗಿದ ಕಾರಣ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟಕ್ಕೆ ತೊಂದರೆಯಾಗಿದೆ ಎಂದು ವಪ್ಪುಣಸೆ ಗ್ರಾಮಸ್ಥರು ದೂರಿದರು.

ತಾಲ್ಲೂಕಿನ ಬಾಸೂರು ಗ್ರಾಮದಲ್ಲಿ ಮಂಗಳವಾರ ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ವಪ್ಪುಣಸೆ ಗ್ರಾಮಸ್ಥರು ಈ ಕುರಿತು ಮಾತನಾಡಿ,
ಪಿಆರ್‌.ಓ.ಗಳು ಸ್ಥಳಪರಿಶೀಲನೆ ನಡೆಸದೆ ಕೂತಲ್ಲಿಯೇ ಮನಸ್ಸಿಗೆ ಬಂದಂತೆ ಬೆಳೆ ನಮೂದಿಸಿದ್ದಾರೆ. ಬಹುತೇಕ ಜನರು ರಾಗಿ ಹಾಕಿದ್ದರೂ ರಾಗಿ ಎಂದು ನಮೂದಾಗಿಲ್ಲ. ಸಮೀಕ್ಷೆಯನ್ನು ಸರಿಯಾಗಿ ಮಾಡಿಲ್ಲ.ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಒತ್ತಾತಿಸಿದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ರೈತರ ಬೆಳೆಗಳ ಬಗ್ಗೆ ವಪ್ಪುಣಸೆ ಲಕ್ಕಡಿಕೋಟೆ ಭಾಗದಲ್ಲಿ ಸರಿಯಾದ ಸರ್ವೆಕಾರ್ಯ ನಡೆಸದಿರುವ ಬಗ್ಗೆ ಮೇಲ್ನೋಟಕ್ಕೆ ಲೋಪ ಕಂಡುಬಂದಿದೆ. ರೈತರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಈ ಪ್ರಮಾದಕ್ಕೆ ಸ್ಥಳೀಯ ಗ್ರಾಮಲೆಕ್ಕಾಧಿಕಾರಿಯನ್ನೇ ಹೊಣೆಗಾರನ್ನಾಗಿಸಿ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರಿಗೆ ಸೂಚಿಸಿದರು.
ಗೌಡನಕಟ್ಟೆಹಳ್ಳಿ ಗ್ರಾಮದಲ್ಲಿನ 1.18 ಎಕರೆ ಸರಕಾರಿ ಗೋಮಾಳ ಜಾಗದಲ್ಲಿ ಬಹಳಷ್ಟು ವರ್ಷಗಳಿಂದ ಹಲವಾರು ಕುಟುಂಬಗಳು ವಾಸವಾಗಿವೆ. ಈಗ ಈ ಜಾಗ ಅರಣ್ಯ ಇಲಾಖೆಗೆ ವರ್ಗಾವಣೆಗೊಂಡಿದೆ. ದನಕರುಗಳು ಮೇಯಲು ಜಾಗವಿಲ್ಲದಂತಾಗಿದೆ.ಈ ಜಾಗವನ್ನು ಕಂದಾಯ ಇಲಾಖೆಗೆ ವರ್ಗಾಯಿಸಬೇಕು.ಇಲ್ಲಿನ‌ಮನೆಗಳಿಗೆ ಇಸ್ವತ್ತು ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ವಲಯಾರಣ್ಯಾಧಿಕಾರಿ ಹರೀಶ್ ಮಾತನಾಡಿ, ಸದರಿ ಪ್ರಕರಣ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆಗೆ ಈ ಜಾಗ ವರ್ಗಾಯಿಸಲು ಸರಕಾರ ತೀರ್ಮಾನಿಸಬೇಕು ಎಂದು ಹೇಳಿದಾಗ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಜಾಗದ ಮ್ಯೂಟೆಷನ್‌ನಲ್ಲಿ ಸಾರ್ವಜನಿಕವಾಗಿ ಬಳಸಿಕೊಳ್ಳಬಹುದೆಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಗಮನ ಹರಿಸಿ ತಹಸೀಲ್ದಾರ್ ಅವರೊಡನೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಲು ಸೂಚಿಸಿದರು.
1951ರಿಂದಲೂ ಬಾಸೂರು ಅಮೃತ್ ಮಹಲ್‌ನಲ್ಲಿ ಕಾವಲುಗಾರರಾಗಿ ಜಮೀನಿನ ಸಾಗುವಳಿ ಮಾಡಿಕೊಂಡು ಬರಲಾಗುತ್ತಿದ್ದು, ಆದರೆ ಕಳೆದ ಐದಾರು ವರ್ಷದಿಂದ ಏಕಾಏಕಿ ಕಾವಲುದಾರರನ್ನು ಹೊರಗಿಟ್ಟಿದ್ದಾರೆ.ಕಾವಲುದಾರರಿಗೆ ಬೇರೆಡೆ ಜಮೀನು ನೀಡುವಂತೆ ಸರಕಾರದ ಆದೇಶವಿದ್ದರೂ ಇದುವರೆಗೂ ನೀಡಿಲ್ಲ. ಅಮೃತ್ ಮಹಲ್ ಕಾವಲ್ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ. 5ಎಕರೆ ಜಮೀನನ್ನು ಕಾವಲುದಾರರಿಗೆ ನಿಯಮಾನುಸಾರವಾಗಿ ಒದಗಿಸಿಕೊಡುವಂತೆ ಗ್ರಾಮದ ಶ್ರೀಧರ್ ಹಾಗೂ ವಸಂತ್ ಕುಮಾರ್ ಒತ್ತಾಯಿಸಿದರು.

ಬಾಸೂರು ಅಮೃತ್ ಮಹಲ್ ಕಾವಲಿನ ಮುಖ್ಯ ಪಶುವೈದ್ಯಾಧಿಕಾರಿ ಕೆ.ಟಿ. ನವೀನ್ ಮಾತನಾಡಿ, ಅಮೃತ್ ಮಹಲ್ ಕಾವಲ್ ಜಾಗದಲ್ಲಿ ವಿಶೇಷ ತಳಿಯ ಕೃಷ್ಣಮೃಗಗಳು ವಾಸಿಸುತ್ತಿರುವ ಹಿನ್ನಲೆಯಲ್ಲಿ ಇಲ್ಲಿನ ಸಂರಕ್ಷಿತ ಅರಣ್ಯ ಪ್ರದೇಶ ಕಾಯ್ದೆಯಡಿ ಅರಣ್ಯ ಇಲಾಖೆಯು ಗುರುತಿಸಲಾಗಿದೆ.ಉಚ್ಚ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.ಅಂತಿಮ ಆದೇಶ ಬರಬೇಕಿದ್ದು,ಈ ಮಾಹಿತಿಯನ್ನು ಕಾವಲುಗಾರರ ಗಮನಕ್ಕೆ ತರಲಾಗಿದೆ ಎಂದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ,ಆದಿಕಾರಿಗಳು ಸಭೆಗೆ ಬರುವಾಗ ಪೂರ್ಣ ಮಾಹಿತಿಯೊಂದಿಗೆ ಬರಬೇಕು.ಎಲ್ಲ ಸಮಸ್ಯೆಗಳಿಗೂ ಒಂದೇ ಉತ್ತರ ನೀಡುವುದು ಸರಿಯಲ್ಲ. ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕು. ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆ ಮತ್ತಷ್ಟು ಜಟಿಲವಾಗಲು ಆಸ್ಪದ ಕೊಡದೆ ಪರಿಹರಿಸಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಸರ್ಕಾರದ ಮಟ್ಟದಲ್ಲಿ ಏನಾಗಬೇಕೆಂಬುದನ್ನು ಮಾಡಲು ನಾನು ಸದಾ ಸಿದ್ದ. ಒಟ್ಟಾರೆ ಜನಸಾಮಾನ್ಯರ ಸಮಸ್ಯೆಗಳು ಪರಿಹಾರವಾಗಬೇಕೆಂಬುದಷ್ಟೆ ನಮ್ಮ ಆಶಯ ಎಂದರು.

ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಪಂ ಇಓ ಸಿ.ಆರ್.ಪ್ರವೀಣ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರಿಯಾ, ಉಪಾಧ್ಯಕ್ಷೆ ಕವಿತಾ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಾಸೂರು ಚಂದ್ರಮೌಳಿ, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಸದಸ್ಯರಾದ ಆರ್.ಕವಿತಾ, ಗೌರಮ್ಮ, ಟಿ.ಬಿ.ನಾಗಭೂಷಣ್, ಶ್ರೀಕಾಂತ್, ಬಿ.ಕೆ.ಪರಮೇಶ್ವರಪ್ಪ, ನರಸಮ್ಮ, ನೀಲಮ್ಮ, ರಾಜಪ್ಪ, ಎಸ್.ಎಂ. ತಮ್ಮಯ್ಯ, ಮರುಳಪ್ಪ ಇದ್ದರು.

—————-

ಪ್ರತಿ ವರ್ಷದಂತೆ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಮೂರು ಇಲಾಖೆಗಳ ಸಮನ್ವಯದಲ್ಲಿ ಬೆಳೆ ಸಮೀಕ್ಷೆ ಮಾಡಲಾಗುತ್ತದೆ.ತಪ್ಪಾಗಿ ನಮೂದಾಗಿರುವ ಕುರಿತು ರೈತರುಗಳು ತಮ್ಮ ಬೆಳೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.

-ಅಶೋಕ್.ಕೃಷಿ ಸಹಾಯಕ ನಿರ್ದೇಶಕ

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!