
ಕಡೂರು: ತಾಲೂಕಿನ ಗ್ರಾಮವೊಂದರಲ್ಲಿ ಐದು ವರ್ಷದ ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸರ ಕಾರ್ಯಾಚರಣೆಯಿಂದಾಗಿ ಬಾಲಕಿ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾಳೆ.
ಘಟನೆ ವಿವರ: ಕಡೂರು ಪಟ್ಟಣಕ್ಕೆ ಹತ್ತಿರವಿರುವ ಗ್ರಾಮದ ಕುಟುಂಬವೊಂದರ ಐದು ವರ್ಷದ ಬಾಲಕಿ ಭಾನುವಾರ ಬೆಳಿಗ್ಗೆ 10.30 ರ ಸುಮಾರಿಗೆ ಕಾಣೆಯಾಗುತ್ತಾಳೆ. ಬಾಲಕಿಯ ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಮಗುವನ್ನು ನೆರೆಹೊರೆಯ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು.
ಬಾಲಕಿ ಕಾಣೆಯಾದ ಕೂಡಲೇ ಗ್ರಾಮಸ್ಥರೆಲ್ಲ ಸೇರಿ ಹುಡುಕಾಟ ನಡೆಸಿದ್ದಾರೆ. ಪೋಷಕರು ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಯಗಟಿ, ಬೀರೂರು, ಕಡೂರು ಪೊಲೀಸರ ತಂಡ ಬಾಲಕಿ ಪತ್ತೆಗೆ ಹುಡುಕಾಟ ನಡೆಸಿದೆ. ಸಂಜೆಯಾದರೂ ಬಾಲಕಿ ಪತ್ತೆಯಾಗದೆ ಎಲ್ಲರೂ ಆತಂಕಗೊಂಡಿದ್ದಾರೆ.
ಈ ನಡುವೆ ರಾತ್ರಿ 9 ಗಂಟೆ ಸುಮಾರಿಗೆ ಖಂಡುಗದಹಳ್ಳಿ ಬಳಿಯ ಪಾಳು ಮನೆಯೊಂದರಲ್ಲಿ ಬಾಲಕಿ ಜೊತೆ ವ್ಯಕ್ತಿ ಒಬ್ಬ ಪತ್ತೆಯಾಗಿದ್ದಾನೆ. ಈ ವ್ಯಕ್ತಿ ಸಿರಾ ತಾಲೂಕಿನ ಚೆನ್ನನಕುಂಟೆಯವನಾಗಿದ್ದು ಕುರಿ ಕಾಯಲು ಈ ಗ್ರಾಮದ ಮನೆಯೊಂದರಲ್ಲಿ ಕೆಲಸಕ್ಕೆ ಇದ್ದ ಎಂದು ತಿಳಿದುಬಂದಿದೆ.
ಯಾವ ಕಾರಣಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಹುನ್ನಾರ ನಡೆಸಿದ್ದನೆ ಎಂಬ ಬಗ್ಗೆ ತನಿಖೆಯ ನಂತರವೇ ಸ್ಪಷ್ಟಗೊಳ್ಳಲಿದೆ.
ಸದರಿ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿ ಸುರಕ್ಷಿತವಾಗಿ ಪತ್ತೆಯಾದ ಬಗ್ಗೆ ತಿಳಿಯುತ್ತಲೇ ಶಾಸಕ ಕೆ. ಎಸ್. ಆನಂದ್ ಕಡೂರು ವೃತ ನಿರೀಕ್ಷಕರ ಕಚೇರಿಗೆ ಆಗಮಿಸಿ ಬಾಲಕಿಯನ್ನು ಮಾತನಾಡಿಸಿ, ಪೋಷಕರ ಮಡಿಲು ಸೇರಿದ್ದನ್ನು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟರು.
ಹಲವಾರು ಕಡೆ ಈ ರೀತಿ ಅಪಹರಣ ಪ್ರಕರಣಗಳು ವರದಿಯಾಗುತ್ತಿದ್ದುದನ್ನು ನೋಡಿದ್ದೇವೆ. ಆದರೆ ನಮ್ಮ ಕ್ಷೇತ್ರದಲ್ಲಿ ಈ ರೀತಿ ಆದಾಗ ಬಹಳ ಆತಂಕವಾಗಿತ್ತು. ಪೊಲೀಸರ ಕಾರ್ಯ ಶ್ಲಾಘನೀಯವಾದದ್ದು. ಬಾಲಕಿಗೆ ಯಾವುದೇ ತೊಂದರೆ ಆಗಿಲ್ಲ ಎಂಬುದು ಸಮಾಧಾನ ತಂದಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಪೊಲೀಸರು ಬೀಟ್ ವ್ಯವಸ್ಥೆಯನ್ನು ಬಲಪಡಿಸಬೇಕು. ಪೋಷಕರು ಸಹ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂದರು.
ಇನ್ಸ್ ಪೆಕ್ಟರ್ ರಫೀಕ್ ಮಾತನಾಡಿ, ಪರ ಊರುಗಳ ವ್ಯಕ್ತಿಗಳನ್ನು ಕೆಲಸಕ್ಕೆ ಇಟ್ಟುಕೊಳ್ಳುವಾಗ ಅವರ ಪೂರ್ವಾಪರಗಳನ್ನು ತಿಳಿದುಕೊಳ್ಳುವುದು ಅಗತ್ಯ. ಅವರ ವಿಳಾಸ ಪುರಾವೆ ಎಲ್ಲವನ್ನೂ ಪಡೆದು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇಂತಹ ಘಟನೆಗಳು ನಡೆದಾಗ ಉಪಯೋಗವಾಗುತ್ತದೆ. ಅಪರಿಚಿತ ವ್ಯಕ್ತಿಗಳ ಚಲನವಲನ ಕಂಡರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಯಾವುದೇ ಅನಪೇಕ್ಷಿತ ಘಟನೆಗಳು ನಡೆಯದಂತೆ ತಡೆಯಬಹುದಾಗಿದೆ ಎಂದರು.
ಡಿವೈಎಸ್ಪಿ ಪರಶುರಾಮಪ್ಪ, ಇನ್ಸ್ ಪೆಕ್ಟರ್ ರಫೀಕ್, ಪಿಎಸೈ ಗಳಾದ ಮಂಜುನಾಥ್, ಧನಂಜಯ,ವಿದ್ಯಾ, ತಿಪ್ಪೇಶ್ ಮತ್ತು ಸಿಬ್ಬಂದಿ ಇದ್ದರು.

