
ಕಡೂರು ಪಟ್ಟಣದ 6 ನೇ ವಾರ್ಡ್ ಮೀಸಲಾತಿ ಬದಲಾಯಿಸಿದರೆ ಉಗ್ರ ಹೋರಾಟ- ಕೆ.ಎಸ್.ಶಂಕರ್
ಕಡೂರು: ಎಸ್.ಸಿ( ಮಾದಿಗ) ಜನಾಂಗದವರೇ ಹೆಚ್ಚಿರುವ ಅಂಬೇಡ್ಕರ್ ನಗರ 6ನೇ ವಾರ್ಡಿನ ಮೀಸಲಾತಿ ಬದಲಿಸುವ ಹುನ್ನಾರ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಉಗ್ರ ಹೋರಾಟಕ್ಕೂ ಸಿದ್ಧ ಎಂದು ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಅಂಬೇಡ್ಕರ್ ನಗರ ಕೆ.ಎಸ್. ಶಂಕರ್ ತಿಳಿಸಿದರು.
ಶುಕ್ರವಾರ ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2002 ರಲ್ಲಿ ಮೀಸಲಾತಿ ಆರಂಭವಾದ ದಿನದಿಂದಲೂ 6ನೇ ವಾರ್ಡಿನಲ್ಲಿ ಮೀಸಲಾತಿ ದೊರೆಯದೆ ಮಾದಿಗ ಜನಾಂಗಕ್ಕೆ ಬಹುದೊಡ್ಡ ಅನ್ಯಾಯವಾಗಿತ್ತು.ಈ ವಾರ್ಡಿನಲ್ಲಿ 1300ಕ್ಕೂ ಹೆಚ್ಚು ಮಾದಿಗ ಜನಾಂಗದ ಮತದಾರರಿದ್ದಾರೆ.2002 ರಿಂದ 2019 ರವರೆಗೆ ಅವಧಿವರೆಗೆ ಮೂರು ಬಾರಿ ಬಿ.ಸಿ.ಎಂ- ಎ ಮೀಸಲಾತಿ ನೀಡಲಾಗಿತ್ತು. ಯಾವುದೇ ನಾಯಕರೂ ಸಹ ಈ ವಾರ್ಡ್ ವಿಚಾರದಲ್ಲಿ ಮಾದಿಗ ಜನಾಂಗಕ್ಕೆ ನ್ಯಾಯ ಕೊಡಿಸಲು ಮುಂದಾಗಲಿಲ್ಲ. ಕೇವಲ ಎಸ್.ಸಿ.ಜನಾಂಗದವರನ್ನು ಓಟ್ ಬ್ಯಾಂಕ್ ಮಾಡಿಕೊಂಡೇ ಬಂದರು.2019ರಲ್ಲಿ ಬೆಳ್ಳಿ ಪ್ರಕಾಶ್ ಶಾಸಕರಾದ ಸಮಯದಲ್ಲಿ ಈ ವಾರ್ಡಿಗೆ ಎಸ್.ಸಿ.ಮಹಿಳೆ ಗೆ ಮೀಸಲು ದೊರಕಿಸಿಕೊಟ್ಟು ನಮ್ಮ ಮಾದಿಗ ಜನಾಂಗಕ್ಕೆ ನ್ಯಾಯ ದೊರಕಿಸಿಕೊಟ್ಟರು.ಇದಕ್ಕಾಗಿ ನಾವೆಲ್ಲರೂ ಅವರಿಗೆ ಕೃತಜ್ಞರಾಗಿದ್ದೇವೆ ಎಂದರು.
ಇತ್ತೀಚೆಗೆ ಪುರಸಭೆಯ ಪ್ರಸಕ್ತ ಅವಧಿ ಮುಗಿದ ನಂತರ ಬರಲಿರುವ ಪುರಸಭಾ ಚುನಾವಣೆಯಲ್ಲಿ 6 ನೇ ವಾರ್ಡಿನ ಮೀಸಲಾತಿಯನ್ನು ಬದಲಿಸುವ ಹುನ್ನಾರ ನಡೆಯುತ್ತಿದೆ. ಮತ್ತೆ ಬಿಸಿಎಂ- ಎ ಗೆ ಮೀಸಲಿಡುವ ಪ್ರಯತ್ನಗಳಾಗುತ್ತಿವೆ. ಕೇವಲ 60-70 ಜನ ಮತದಾರರಿರಿವ ಬಿಸಿಎಂ- ಎ ಪಂಗಡಕ್ಕೆ ಮೀಸಲಿಡಲು ಮುಂದಾದವರು ಬಿಸಿಎಂ-ಎ ಮತದಾರರು ಹೆಚ್ಚಿರುವ ಕಡೆ ಎಸ್.ಸಿ.ಜನಾಂಗಕ್ಕೆ ಮೀಸಲು ಕಲ್ಪಿಸಲು ಎಂದಿಗೂ ಮನಸ್ಸು ಮಾಡಲೇ ಇಲ್ಲ. ಈಗ ಈ ಹುನ್ನಾರ ನಡೆಯುತ್ತಿರುವುದು ಸಹಜವಾಗಿಯೇ ನಮ್ಮ ಮಾದಿಗ ಜನಾಂಗದ ಮನಸ್ಸಿಗೆ ನೋವುಂಟು ಮಾಡಿದೆ. ಈಗಿರುವ ಮೀಸಲಾತಿಯನ್ನು ಬದಲಾಯಿಸುವ ಪ್ರಯತ್ನಗಳು ನಿಲ್ಲಬೇಕು. ಒಂದು ವೇಳೆ ಈಗಿರುವ ಮೀಸಲಾತಿ ಬದಲಾದರೆ ದಲಿತ ಸಂಘಟನೆಗಳು, ಮಹಿಳಾ ಸಂಘಗಳೊಡಗೂಡಿ ಜಿಲ್ಲಾಧಿಕಾರಿ ಕಚೇರಿಯೆದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಡಾ.ಭೀಮರಾವ್ ಕ್ರಾಂತಿಕಾರಿ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಕುಂಕಾನಾಡು ಮಂಜುನಾಥ್, ಚಿಕ್ಕಂಗಳ ಲಕ್ಷ್ಮಣ್ ಇದ್ದರು.
