Spread the love
ಕಡೂರು: ದೈನಂದಿನ ಜೀವನದಲ್ಲಿ ಸ್ವಲ್ಪ ಹೊತ್ತಾದರೂ ಭಗವದ್ಚಿಂತನೆಯಲ್ಲಿ ಕಳೆದರೆ ನಮ್ಮೆಲ್ಲ ಕಾರ್ಯಗಳಲ್ಲಿ ಯಶಸ್ಸು ಪಡೆಯಲು ಬೇಕಾದ ಸ್ಥೈರ್ಯ ದೊರೆಯುತ್ತದೆ ಎಂದು ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ಕಡೂರಿನ ಕೋಟೆ ಶಂಕರ ಮಠದಲ್ಲಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಜೀವನ ನಡೆಸಲು ಅವಕಾಶ ನೀಡಿದ ಭಗವಂತ ಅದಕ್ಕೆ ಬೇಕಾದ ವಿವೇಚನೆಯನ್ನೂ ನೀಡಿದ್ದಾನೆ.ನಮ್ಮ ವಿವೇಚನೆಯನ್ನು ಸರಿದಾರಿಯಲ್ಲಿ ಉಪಯೋಗಿಸಿದರೆ ಜೀವನ ಸುಗಮವಾಗುತ್ತದೆ.ಲೌಕಿಕ ಜಗತ್ತಿನಲ್ಲಿ ಕಾನೂನುಗಳಿವೆ. ಹಾಗೆಯೇ ಶಾಸ್ತ್ರದಲ್ಲೂ ನಿಯಮಗಳಿವೆ. ಅವುಗಳನ್ನು ಅರಿತು ಪಾಲಿಸಿದರೆ ಭಗವಂತನ ಕೃಪೆ ದೊರೆಯುತ್ತದೆ. ಆಧ್ಯಾತ್ಮಿಕವಾಗಿ ಉನ್ನತಿ ಪಡೆಯುವ ಹಾದಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕಿದೆ ಎಂದರು.
ಎಲ್ಲ ಶಾಸ್ತ್ರಗಳು, ದೈವೀ ಸಂಪತ್ತನ್ನು ಉಳಿಸಿಕೊಳ್ಳವುದನ್ನೆ ಉಪದೇಶ ಮಾಡಿವೆ. ದೈವಿ ಸಂಪತ್ತಲ್ಲೊಂದಾದ ಒಳ್ಳೆಯ ಗುಣವನ್ನು ಅಳವಡಿಸಿಕೊಳ್ಳುವ ಕಾರ್ಯದಲ್ಲಿ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಬೇಕು. ಎಂತಹ ಸಂದರ್ಭದಲ್ಲೂ ಧರ್ಮಮಾರ್ಗದಿಂದ ವಿಮುಖನಾಗಬಾರದು ಎಂಬುದು ಶಾಸ್ತ್ರಗಳ ಪ್ರಮುಖ ಉಪದೇಶ.ಅದನ್ನು ಅರ್ಥೈಸಿಕೊಂಡು ಜೀವನದಲ್ಲಿ ಉನ್ನತಿ ಸಾಧಿಸಬೇಕು ಎಂದರು.
ತೆಂಗಿನ ಮರ ತನಗೆ ಯಾವ ನೀರು ಹಾಕಿದನೆಂಬುದನ್ನು ನೆನಪಿಟ್ಟುಕೊಳ್ಳದೆ ಸಿಹಿನೀರನ್ನೆ ಕೃತಜ್ಞತೆಯಿಂದ ನೀಡುತ್ತದೆ. ಮನುಷ್ಯರಲ್ಲೂ ಸಹ ಅಂತಹ ಕೃತಜ್ಞತಾ ಭಾವ ಅಂತರ್ಗತವಾಗಿ ಮೂಡಬೇಕು. ಸದ್ದರ್ಮದಿಂದ ಕರ್ತವ್ಯ ಮಾಡಬೇಕು.ಫಲಾಫಲಗಳನ್ನು ದೇವರಿಗೆ ಬಿಡಬೇಕು ಎಂದರು.
ಕಡೂರನ್ನು ಬಳಸಿ ಬಹಳಷ್ಟು ಸಾರಿ ಹೋದರೂ ಇಲ್ಲಿ ವಾಸ್ತವ್ಯವಿರುವ ಅವಕಾಶವಾಗಿರಲಿಲ್ಲ. ಈ ಬಾರಿ ಅದು ಈಡೇರಿದೆ. ಕಡೂರಿನ ಎಲ್ಲ ಸದ್ಭಕ್ತರಿಗೂ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು.
 ಮಾಜಿ ಶಾಸಕ ವೈ‌.ಎಸ್.ವಿ.ದತ್ತ ಪ್ರಾಸ್ತಾವಿಕವಾಗಿ ಮಾತನಾಡಿ,ಪ್ರಾಚೀನತೆ ಮತ್ತು ಅರ್ವಾಚೀನತೆಯ ಸಮನ್ವಯತೆ ಪೂಜ್ಯ ವಿಧುಶೇಖರ ಭಾರತಿ ಸ್ವಾಮೀಜಿಗಳಿಂದ ಆರಂಭವಾಗಿದೆ. ಕಡೂರಿನಲ್ಲಿ ಶಂಕರ ಮಠ ಆರಂಭವಾಗಿ 25 ವರ್ಷಗಳು ತುಂಬುವ ಈ ಸಮಯದಲ್ಲಿ ಹೊಸದಾಗಿ ಸ್ವಂತ ಜಾಗದಲ್ಲಿ ಶಂಕರ ಮಠ ಮತ್ತು ಶಾರದಾ ಮಂದಿರ ನಿರ್ಮಾಣಕ್ಕೆ ಪ್ರಯತ್ನಗಳು ಆರಂಭವಾಗಿದ್ದು,ಶೀಘ್ರವೇ ಸಾಕಾರಗೊಳ್ಳಲಿದೆ ಎಂದರು.
ಸಾಹಿತಿ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಿ ಮಾತನಾಡಿ, ಜಾತ್ಯಾತೀತ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಶೃಂಗೇರಿ ಶಂಕರ ಮಠದ ಧರ್ಮ ಪ್ರಸಾರದ ಕಾರ್ಯ ಶ್ಲಾಘನೀಯ. ಶಂಕರಾಚಾರ್ಯರು ಜಗತ್ತಿಗೆ ನೀಡಿದ ತತ್ವಗಳನ್ನು ಅಳವಡಿಸಿಕೊಳ್ಳುವ  ಕಾರ್ಯವಾಗಬೇಕಿದೆ.ಶಂಕರ ತತ್ವಗಳು ಪ್ರತಿಯೊಬ್ಬರನ್ನೂ ತಲುಪುವ ಕಾರ್ಯವಾಗಬೇಕಿದೆ ಎಂದರು.
ಕಲಾವಿದ ಚಿಕ್ಕಂಗಳ ಪ್ರಮೋದ್ ಸ್ವಯಂ‌ರಚಿಸಿದ ಚಂದ್ರಶೇಖರ ಭಾರತಿ ಸ್ವಾಮೀಜಿಯವರ ಕಲಾಕೃತಿಯನ್ನು ಶ್ರೀಗಳಿಗೆ ಅರ್ಪಿಸಿದರು.ಶಂಕರ ಮಠ ಕಡೂರು ಶಾಖೆಯ ಆಡಳಿತಾಧಿಕಾರಿ ಬೀರೂರು ಮಂಜುನಾಥ್, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಇದ್ದರು.
——–
ಕಡೂರು: ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕಡೂರಿಗೆ ಮಂಗಳವಾರ ಸಂಜೆ ಆಗಮಿಸಿದಾಗ ಕೋಟೆ ಶಾರದಾ ಮಠದ ಬಳಿ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನೆರೆದಿದ್ದ ಸಾವಿರಾರು ಜನರು ಪುಷ್ಪವೃಷ್ಠಿ ಮಾಡಿ ಸ್ವಾಮೀಜಿಯವರ ದರ್ಶನ ಪಡೆದರು‌‌. ಶಾರದಾ ದೇವಿ ಮತ್ತು ಶಂಕರಾಚಾರ್ಯರ ದರ್ಶನ ಪಡೆದ ಸ್ವಾಮೀಜಿಯವರು ಸಭಾಂಗಣಕ್ಕೆ ಆಗಮಿಸಿದ ನಂತರ ಧೂಳಿಪಾದಪೂಜೆ ನಡೆಯಿತು.
ಬುಧವಾರ ಬೆಳಿಗ್ಗೆ ನಡೆದ  ಪಾದಪೂಜೆಯಲ್ಲಿ ನೂರಾರು ಜನ ಪಾಲ್ಗೊಂಡರು.ನಂತರ ಶ್ರೀಗಳ ಅನುಗ್ರಹ ಭಾಷಣ ನೆರವೇರಿತು. ಬೆಲಗೂರು ಮಾರುತಿ ಪೀಠದ ವಿಜಯ ಮಾರುತಿ ಸ್ವಾಮೀಜಿ ಮುಂತಾದ ಆಧ್ಯಾತ್ಮ ಚಿಂತಕರು ಶ್ರೀಗಳ ದರ್ಶನ ಪಡೆದರು. ಶ್ರೀಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!