
ಹತ್ಯೆಯಾದ ಗಣೇಶ್ ಗೌಡ
ಕಡೂರು: ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಗೌಡ(38) ಹತ್ಯೆಯಾಗಿದ್ದಾರೆ.
ಶುಕ್ರವಾರ ರಾತ್ರಿ 10-30 ಸುಮಾರಿಗೆ ಸಖರಾಯಪಟ್ಟಣದ ಕಲ್ಮರುಡೇಶ್ವರ ಮಠದ ಸಮೀಪ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಇದಕ್ಕೂ ಮುನ್ನ ಸಖರಾಯಪಟ್ಟಣದ ಬಾರ್ ಬಳಿ ಗಲಾಟೆಯಾಗಿತ್ತು ಎನ್ನಲಾಗಿದೆ.
ತೀವ್ರ ಗಾಯಗೊಂಡ ಗಣೇಶ್ ಗೌಡ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಎದುರಾಳಿ ಗುಂಪಿನ ಇಬ್ಬರ ತಲೆಗೂ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಗಣೇಶ್ ಗೌಡ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಖರಾಯಪಟ್ಟಣ ಕ್ಷೇತ್ರದಿಂದ ಸ್ಪರ್ದಿಸುವ ಇಂಗಿತ ಹೊಂದಿದ್ದರು.
ಹತ್ಯೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಗಲಾಟೆಯಲ್ಲಿ ಭಾಗಿಯಾದ ಇಬ್ಬರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚಿಸಲಾಗಿದೆ.ಸಖರಾಯಪಟ್ಟಣ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಬಂಧೋಬಸ್ತ್ ಮಾಡಲಾಗಿದೆ ಎಂದು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮ್ಟೆ ತಿಳಿಸಿದರು.
ಕಡೂರು ಶಾಸಕ ಕೆ.ಎಸ್.ಆನಂದ್ ಮಲ್ಲೇಗೌಡ ಆಸ್ಪತ್ರೆಗೆ ಭೇಟಿ ನೀಡಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತ್ಯಂತ ಕ್ರೂರವಾಗಿ ಹತ್ಯೆಯಾಗಿದೆ. ಇಂತಹ ಘಟನೆ ಕಡೂರು ತಾಲ್ಲೂಕಿನಲ್ಲಿ ಹಿಂದೆಂದೂ ನಡೆದಿರಲಿಲ್ಲ. ಪೂರ್ವ ನಿಯೋಜಿತವೇ ಅಥವಾ ಮತ್ತೇನು ಕಾರಣ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಹತ್ಯೆ ಮಾಡಿದವರನ್ನು ಪೊಲೀಸರು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಘಟನೆ ಖಂಡನೀಯ ಎಂದು ಪ್ರತಿಕ್ರಿಯಿಸಿದರು.

