
ಕಡೂರು: ಬರದ ನಾಡೆಂದೇ ಹೆಸರಾದ ಕಡೂರು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಮುಖ ಆಧ್ಯತೆ ನೀಡಿದ್ದು, ಅಹರ್ನಿಶಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಶುಕ್ರವಾರ ತಾಲ್ಲೂಕಿನ ಮಧಗದ ಕೆರೆಗೆ ತಾಲ್ಲುಕಿನ ಜನತೆ ಪರವಾಗಿ ಸಾಂಪ್ರದಾಯಿಕವಾಗಿ ಭಾಗಿನ ಸಮರ್ಪಿಸಿ, 50 ಕೋಟಿ ವೆಚ್ಚದಲ್ಲಿ ಮಧಗದ ಕೆರೆ ಮೂಲಕ 25 ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ನೀರು ತುಂಬಿಸುವ ಹಾಗೂ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಡೂರು ತಾಲ್ಲೂಕನ್ನು ಅತೀ ಅಂತರ್ಜಲ ಬಳಕೆ ಪ್ರದೇಶವೆಂದು ಗುರುತಿಸಲಾಗಿದೆ. ಇಲ್ಲಿನ ರೈತರಿಗೆ ಅತ್ಯಂತ ಅಗತ್ಯವಾಗಿರುವುದು ಶಾಶ್ವತ ನೀರಾವರಿ. ಈ ನಿಟ್ಟಿನಲ್ಲಿ ಈಗಾಗಲೇ ಭಧ್ರಾ ಉಪಕಣಿವೆ ಯೋಜನೆ ಪ್ರಗತಿಯಲ್ಲಿದೆ. ಬರಗಾಲ ಪೀಡಿತ ಪ್ರದೇಶ ಎಂದೇ ಹಣೆಪಟ್ಟಿ ಹೊತ್ತಿರುವ ಕಡೂರು ಅದರಿಂದ ಹೊರಬರುವ ದಿನಗಳು ಹತ್ತಿರದಲ್ಲಿದೆ.ಕ್ಷೇತ್ರದಲ್ಲಿ 2ನೇ ಹಂತದ ಭದ್ರಾ ಉಪ ಕಣಿವೆ ಯೋಜನೆಗೆ ತಾಲ್ಲೂಕಿನ 118 ಕೆರೆಗಳನ್ನು ತುಂಬಿಸುವ ಕಾಮಗಾರಿ ನಡೆಯುತ್ತಿದ್ದು, 2ನೇ ಹಂತದ ಕಾಮಗಾರಿಯನ್ನು ಮುಗಿಸಲು 2026ರ ಜೂನ್ ಒಳಗೆ ಸಮಯ ನಿಗಧಿ ಪಡಿಸಲಾಗಿದೆ. ನಿಗಧಿತ ಅವಧಿಯೊಳಗೆ ಕಾಮಗಾರಿ ಮುಗಿಯುವ ವಿಶ್ವಾಸವಿದೆ ಎಂದರು.
ಮಧಗದ ಕೆರೆಯಿಂದ 25 ಕೆರೆಗಳಿಗೆ ಗುರುತ್ವ ಶಕ್ತಿಯ ಮೂಲಕ ನೀರು ತುಂಬಿಸುವ ಮತ್ತು ಹೊಸಮಧಗದ ಕೆರೆ ಹಾಗೂ ಕಾಲುವೆಗಳ ಆಧುನೀಕರಣಗೊಳಿಸುವ ಕಾಮಗಾರಿಯ ಅನುಷ್ಠಾನಕ್ಕಾಗಿ ₹50 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದ ಮಧಗದ ಕೆರೆ ವ್ಯಾಪ್ತಿಯಲ್ಲಿ 6407.00 ಹೆಕ್ಟೇರ್ ಪ್ರದೇಶದ ಶೇ30ರಷ್ಟು ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ. 50 ಕೋಟಿ ವೆಚ್ಚದಲ್ಲಿ ಮಧಗದ ಕೆರೆ ವ್ಯಾಪ್ತಿಯ ಪ್ರಮುಖ ಕಾಲುವೆಗಳು, ಮಡಬಾಯಿಗಳು, ಸೇತುವೆಗಳು ಸುಸಜ್ಜಿತಗೊಳ್ಳಲಿವೆ. ಮಧಗದ ಕೆರೆಯಾಶ್ರಿತ ಕೃಷಿ ಭೂಮಿಗಳಿಗೆ ಇದು ಬಹು ದೊಡ್ಡ ಕೊಡುಗೆಯಾಗಿದ್ದು,ತಾಲ್ಲೂಕಿನ ಜನತೆಯ ಪರವಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಬರದ ನಾಡು ಎಂದು ಗುರುತಿಸಿರುವ ಕಡೂರು ತಾಲ್ಲೂಕಿನ ರೈತರಿಗೆ ಮಧಗದ ಕೆರೆ ಜೀವನಾಡಿಯಾಗಿದೆ. ಶಾಸಕ ಆನಂದ್ ಅವರು ಶ್ರಮವಹಿಸಿ ಈ ಕೆರೆಯ ಅಭಿವೃದ್ಧಿ ಮತ್ತು ಕಾಲುವೆಯ ದುರಸ್ತಿ ಕಾರ್ಯಗಳಿಗೆ 50 ಕೋಟಿ ಅನುದಾನ ತಂದಿರುವುದು ಶ್ಲಾಘನೀಯ. ಅಧಿಕಾರಿಗಳು ಯಾವುದೇ ಲೋಪವಾಗದಂತೆ ಕಾಮಗಾರಿ ನಡೆಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಶಾಸಕರೆಂದರೆ ಕೇವಲ ರಸ್ತೆ, ಕಟ್ಟಡ ಮತ್ತಿತರ ಕೆಲಸಗಳನ್ನು ಮಾಡುವುದಕ್ಕೆ ಸೀಮಿತವಲ್ಲ. ಸಾಮಾನ್ಯ ರೈತರ ಬವಣೆಗಳನ್ನು ಕೂಡ ಅರಿತು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶಾಸಕರು ಒತ್ತು ಕೊಟ್ಟಿರುವುದು ಹೆಮ್ಮೆ ಎನಿಸುತ್ತದೆ. ನಾಯಕನಾದವನಿಗೆ ಭವಿಷ್ಯದ ಚಿಂತೆ ಇದ್ದರೆ ಮಹತ್ವದ ಕಾರ್ಯಗಳನ್ನು ಮಾಡುವ ದೂರದೃಷ್ಟಿಯಿರುತ್ತದೆ ಎಂಬುದಕ್ಕೆ ಶಾಸಕರ ಕಾರ್ಯಗಳೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಹಾಸನ ವಿಭಾಗದ ಇ ಇ ರಾಮಚಂದ್ರಪ್ಪ, ತಹಶೀಲ್ದಾರ್ ಪೂರ್ಣಿಮಾ, ತಾ ಪಂ. ಇಓ ಪ್ರವೀಣ್, ವಿಶ್ವೇಶ್ವರಯ್ಯ ಜಲ ನಿಗಮದ ಇಂಜಿನೀಯರ್ ಹರ್ಷ, ಸಣ್ಣ ನೀರಾವರಿ ಎಇಇ ದಕ್ಷಿಣಾ ಮೂರ್ತಿ, ಇಂಜಿನಿಯರ್ ಮಂಜುನಾಥ, ಮುಖಂಡರಾದ ತೋಟದಮನೆ ಮೋಹನ್‌ಕುಮಾರ್, ಬೀರೂರು ದೇವರಾಜು, ಶಾಂತಪ್ಪ ಒಡೆಯರ್, ಹೆಚ್.ವಿ.ಗಿರೀಶ್, ಆಸಂದಿ ಕಲ್ಲೇಶ್, ಕೆ.ಹೆಚ್.ಶಂಕರ್, ಕಂಸಾಗರ ಸೋಮಶೇಖರ್, ಡಿ.ಉಮೇಶ್, ಸಾಣೆಹಳ್ಳಿ ಆರಾಧ್ಯ, ದಾಸಯ್ಯನ ಗುತ್ತಿ ಚಂದ್ರಪ್ಪ, ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಛಾಯಪತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
