Oplus_131072
Spread the love
ಕಡೂರು : ಭಾರತೀಯ ಸೇನೆಯಲ್ಲಿ ಲೆಪ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ

ತಾಲ್ಲೂಕಿನ ನಾಗರಾಳು ಗ್ರಾಮದ ಎನ್.ಡಿ.ಅಕ್ಕಮಹಾದೇವಿ ಅವರಿಗೆ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಬಡ್ತಿ ದೊರೆತಿದೆ.

ಎನ್.ಡಿ.ಅಕ್ಕಮಹಾದೇವಿ
 ತಾಲ್ಲೂಕಿನ ನಾಗರಾಳು ಗ್ರಾಮದ ಕೃಷಿ ಕುಟುಂಬದ ದೇವರಾಜು ಮತ್ತು ಸುಮಾ ದಂಪತಿಗಳ ಪುತ್ರಿ , ತನ್ನ ಪ್ರಾಥಮಿಕ ಶಿಕ್ಷಣವನ್ನು ಮೂಡಿಗೆರೆಯಲ್ಲಿ ಪೂರೈಸಿದ್ದರು. 2016-17ನೇ ಸಾಲಿನ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಬೆಳಗಾವಿಯ ವಿ.ಟಿ.ಯು ವಿಶ್ವವಿದ್ಯಾಲಯದಿಂದ ಐದನೇ ರ್ಯಾಂಕ್ ಜೊತೆಗೆ ಪಡೆದರು‌.
ಚಿಕ್ಕಂದಿನಿಂದಲೇ ಸೇನೆಗೆ ಸೇರುವ ಕನಸು ಕಂಡಿದ್ದ ಅಕ್ಕಮಹಾದೇವಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರೂ ಸೇನೆಗೆ ಸೇರುವ ನಿಟ್ಟಿನಲ್ಲಿ ಸೇನೆಯ ವಿವಿಧ ವಿಭಾಗಗಳ ಎ.ಎಫ್.ಸಿ.ಎ.ಟಿ ಮತ್ತು ಎಸ್.ಎಸ್.ಬಿ ಪರೀಕ್ಷೆಗಳಿಗೆ ತಯಾರಿ ನಡೆಸಿ ಅಲಹಾಬಾದಿನಲ್ಲಿ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದರು.ಆದರೆ ಕಾನ್ಫರೆನ್ಸ್ ಸುತ್ತಿನಲ್ಲಿ ಪರೀಕ್ಷೆಯಿಂದ ಹೊರಗೆ ಉಳಿಯುತ್ತಾರೆ. ನಂತರ ಬೆಂಗಳೂರಿನಲ್ಲಿ ನಡೆದ ಎಸ್.ಎಸ್.ಬಿ ಪರೀಕ್ಷೆಯ 5ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಏಐಆರ್-2 ಅನ್ನು ಪಡೆದರೂ ಏರೋನಾಟಿಕಲ್ ವಿಭಾಗದಲ್ಲಿ ಕೇವಲ ಒಂದು ಹುದ್ದೆ ಮಾತ್ರ ಲಭ್ಯವಿದ್ದ ಕಾರಣ ಪುನಃ ಹೊರಗುಳಿಯುವಂತಾದರೂ.  ಛಲ ಬಿಡದೆ ಕಠಿಣ ಪರಿಶ್ರಮ ಹಾಗೂ ದೈಹಿಕ ಕ್ಷಮತೆಯನ್ನು ಕಾಯ್ದುಕೊಂಡು ಭೋಪಾಲ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಎಂಟನೇ ಪ್ರಯತ್ನದಲ್ಲಿ ಉನ್ನತ ಸ್ಥಾನ ಪಡೆದರು.
 ನಂತರ ಚೆನೈ ನಲ್ಲಿ  ನಡೆದ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆದುಕೊಳ್ಳುತ್ತಾರೆ. ಈ ಅವಧಿ ಅಕ್ಕಮಹಾದೇವಿ ಅವರಿಗೆ ಮರೆಯಲಾಗದು. ದಿನಕ್ಕೆ ಕೇವಲ ಎರಡು ಗಂಟೆ ನಿದ್ದೆ. ಕಿಲೋಮೀಟರ್ ಗಟ್ಟಲೆ ಭಾರ ಹೊರುವ ಕಠಿಣಾತಿಕಠಿಣ ಶ್ರಮ.ಇದರ ನಡುವೆ ಮತ್ತೊಂದು ಅಗ್ನಿಪರೀಕ್ಷೆ. ತರಬೇತಿ ಮುಗಿಯಲು ಕೆಲವೇ ಸಮಯ ಇರುವಾಗ ಕುದುರೆ ಸವಾರಿ ತರಬೇತಿ ವೇಳೆ ಕೆಳಗೆ ಬಿದ್ದು ಕೈ ಮುರಿಯುತ್ತದೆ.ಆದರೂ ಮನಸ್ಥೈರ್ಯದಿಂದ ಹೆದರದೆ ಚಿಕಿತ್ಸೆ ಪಡೆದು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.
 2024ರ ಅಕ್ಟೋಬರ್ 24 ರಂದು ಭಾರತೀಯ ಸೈನ್ಯಕ್ಕೆ ಲೆಪ್ಟಿನೆಂಟ್ ಆಗಿ  ನಿಯೋಜನೆಗೊಂಡು,  ಪದೊನ್ನತಿ ಪಡೆದು ಇ.ಎಂ.ಇ ಬ್ರಾಂಚ್‌ನಲ್ಲಿ  ಕ್ಯಾಪ್ಟನ್ ಆಗಿ ಜಮ್ಮು ಕಾಶ್ಮೀರದ ಶ್ರೀನಗರದ ಸೇನಾ ವಿಂಗ್‌ನಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ನನ್ನ ಕನಸು ಸಾಕಾರಗೊಂಡಿರುವುದು ನಿಜಕ್ಕೂ ಸಂತಸ ತಂದಿದೆ. ಕಠಿಣ ಪರಿಶ್ರಮ ಹಾಗೂ ಸತರ ಪ್ರಯತ್ನ ಈ ಯಶಸ್ಸಿಗೆ ಕಾರಣ. ನನ್ನ ಕನಸಿಗೆ ಪ್ರೋತ್ಸಾಹ ನೀಡಿದ ತಂದೆ ತಾಯಿಯರ ತ್ಯಾಗ ಮರೆಯಲಾಗದು.ಹೆಣ್ಣು ಮಕ್ಕಳಿಗೆ ಅವರ ಕನಸು ನನಸಾಗಲು ಪ್ರೋತ್ಸಾಹದಾಯಕ ವಾತಾವರಣ ನಿರ್ಮಾಣವಾಗಬೇಕು. ದೇಶ ಸೇವೆಗೆ ನನ್ನ ಜೀವನ ಮುಡಿಪು ಎಂದು ಕ್ಯಾ.ಅಕ್ಕಮಹಾದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.
———
ತರಬೇತಿ ವೇಳೆ ಅಕ್ಕಮಹಾದೇವಿ ಅವರು ಮೂಟೆಗಟ್ಟಲೆ ಭಾರ ಹೊತ್ತು ಕಿಲೋಮೀಟರ್ ಗಟ್ಟಲೆ ನಡೆದಿದ್ದಾರೆ. ತಂಡದಲ್ಲಿ ಯಾರೇ ತಪ್ಪು ಮಾಡಿದರೂ ಇಡೀ ತಂಡ ಶಿಕ್ಷೆ ಅನುಭವಿಸುವ ಅನಿವಾರ್ಯತೆ. ದಿನಕ್ಕೆ ಕೇವಲ ಮೂರು ಗಂಟೆ ನಿದ್ರೆ. ಆದರೆ ಸೇನೆಗೆ ಸೇರಲೇಬೇಕೆಂಬ ಅದಮ್ಯ ಗುರಿ ಅಕ್ಕಮಹಾದೇವಿಯವರಿಗೆ ಮನೋಸ್ಥೈರ್ಯ ನೀಡಿತು.ಅವರ ಯಶಸ್ಸು ತಾಲ್ಲೂಕಿನ ಕೀರ್ತಿಗೆ ಮತ್ತೊಂದು ಗರಿ ಮೂಡಿಸಿದೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!