Spread the love
 ಕಡೂರು : ತಾಲ್ಲೂಕಿನಾದ್ಯಂತ ಚಿತ್ತಾ ಮಳೆಯ ಆರ್ಭಟ ಮುಂದುವರೆದಿದೆ. ಕೆಲವೆಡೆ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಕೆಲ ಕೆರೆಗಳು ಪೂರ್ಣ ತುಂಬಿ ಕೋಡಿ ಹರಿಯಲಾರಂಭಿಸಿದೆ. ನೀರಿನ ಸೆಳೆತಕ್ಕೆ ಸಿಕ್ಕಿ ಎರಡು ಎತ್ತುಗಳು ಪ್ರಾಣ ಬಿಟ್ಟಿವೆ.ಬುಧವಾರವೂ ಮಳೆಯ ಆರ್ಭಟ ಮುಂದುವರೆದಿದೆ.
ಚಿಕ್ಕದೇವನೂರು ಗ್ರಾಮದಲ್ಲಿ ದೇವನೂರು ಕೆರೆ ಕೋಡಿ ನೀರು ಹರಿದು  ಕಡೂರು-ಮಂಗಳೂರು ರಸ್ತೆಯ ಸಖರಾಯಪಟ್ಟಣದಿಂದ ಬಿಎಚ್. ರಸ್ತೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ರಸ್ತೆ ಮುಳುಗಡೆಗೊಂಡು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ಸಖರಾಯಪಟ್ಟಣ, ದೇವನೂರು, ಬಾಣಾವಾರ, ಅರಸೀಕರೆ ಮಾರ್ಗಕ್ಕೆ ಸಂಪರ್ಕಗೊಳ್ಳುವ ರಸ್ತೆ ಬಂದ್ ಉಂಟಾಗಿ ವಾಹನಸವಾರರು ಪರದಾಡುವಂತಾಯಿತು.  ಜಡಕನಹಳ್ಳಿ, ಗಣಪತಿಹಳ್ಳಿ, ಕಾರೇಹಳ್ಳಿ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿವೆ.
ಇನ್ನೂ ಗೌಡನಕಟ್ಟೆಹಳ್ಳಿ ಗ್ರಾಮದ ಕೆರೆ ತುಂಬಿ ಕೋಡಿ ನೀರು ಅಲ್ಲಲ್ಲಿ ಸೋರಿಕೆಯಾಗುತ್ತಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸ್ವತಃ ರೈತರೇ ಜೆಸಿಬಿ ಯಂತ್ರ ಬಳಸಿ ಕೆರೆ ಏರಿಯ ಬಿರುಕನ್ನು ಮುಚ್ಚಿ ತತ್ಕಾಲಿಕವಾಗಿ ಕೆರೆ ಏರಿಯನ್ನು ಅಪಾಯದಿಂದ ರಕ್ಷಿಸುವ ಕಾರ್ಯ ಮಾಡಿದ್ದಾರೆ. ಮಳೆ ಹೀಗೆ ಮುಂದುವರೆದರೆ ಕೆರೆಗೆ ಅಪಾಯವಿದ್ದು, ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಗ್ರಾಮಸ್ಥ ಚಿದಾನಂದಮೂರ್ತಿ ಒತ್ತಾಯಿಸಿದರು.
ಮಂಗಳವಾರ  ತರೀಕೆರೆ ಉಪವಿಭಾಗಾಧಿಕಾರಿ ನಟೇಶ್ ಬಾಬು ಕೆರೆಗೆ ಭೇಟಿ ನೀಡಿ ಕೆರೆ ಏರಿಯನ್ನು ಪರಿಶೀಲಿಸಿದರು.
ತರೀಕೆರೆ ಉಪವಿಭಾಗಾಧಿಕಾರಿ ನಟೇಶ್ ಬಾಬು ಗೌಡನಕಟ್ಟೆಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.
 ತುರುವನಹಳ್ಳಿಯ ಬೈಪಾಸ್ ಸಮೀಪ ಪಟ್ಟಣಕ್ಕೆ ಸಂಪರ್ಕಿಸುವ ಸುಣ್ಣದಗೂಡು ಮಾರ್ಗದ ರಸ್ತೆಯಲ್ಲಿ ಮಂಗಳವಾರ ಹುಲ್ಲೆಹಳ್ಳಿ ಗ್ರಾಮದ ರೈತ ಲಕ್ಷ್ಮಣಪ್ಪ ಅಡಿಕೆ ಸಸಿಗಳನ್ನು ತರಲು ತನ್ನ ಎತ್ತಿನಗಾಡಿಯಲ್ಲಿ ಕಡೂರಿಗೆ ಬರುವಾಗ ಕಾಲುವೆಯ ದಾರಿಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೊಗಿದ್ದು, ಲಕ್ಷ್ಮಣಪ್ಪ ಅಪಾಯದಿಂದ ಪಾರಾದರೂ ಗಾಡಿ ಮತ್ತು ಎತ್ತುಗಳು ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿವೆ. ಸ್ಥಳಕ್ಕೆ ಅಗ್ನಿ ಶಾಮಕದ ಉಪಠಾಣಾಧಿಕಾರಿ ದೇವೇಂದ್ರಪ್ಪ, ನೇತೃತ್ವದ ದರ್ಶನ್, ಸಿದ್ದಗೌಡ, ಕೆಂಪರಾಜ್, ರಾಕೇಶ್, ಆಕಾಶ್ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿ ಒಂದು ಎತ್ತಿನ ಮೃತದೇಹ ಪತ್ತೆ ಹಚ್ಚಿದರು. ಬುಧವಾರ ಬೆಳಿಗ್ಗೆಯೂ ಸುರಿಯುವ ಮಳೆಯ ನಡುವೆಯೇ ದೋಣಿ ಬಳಸಿ ಮತ್ತೊಂದು ಎತ್ತನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಿರತರಾಗಿದ್ದರು.
ಎತ್ತುಗಳನ್ನು ಕಳೆದುಕೊಂಡ ರೈತನ ಅಳಲು

ಕೊಚ್ಚಿಹೋಗಿರುವ ಎತ್ತನ್ನು ಹುಡುಕುತ್ತಿರುವ ಅಗ್ನಿಶಾಮಕ ಸಿಬ್ಬಂದಿ

ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ. ಬಹು ವರ್ಷಗಳ ನಂತರ ವೇದಾವತಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ರಭಸದಿಂದ ಹರಿಯುತ್ತಿರುವ ನೀರನ್ನು ಜನರು ತಂಡೋಪತಂಡವಾಗಿ ವೀಕ್ಷಿಸುತ್ತಿದ್ದಾರೆ.
20ಕ್ಕೂ ಹೆಚ್ಚು ಮನೆಗಳಿಗೆ ಹಾನಿ : 
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಹೊಸಸಿದ್ದರಹಳ್ಳಿ, ಚೌಡಿಪಾಳ್ಯ, ಜಿಗಣೇಹಳ್ಳಿ, ಹೋಚಿಹಳ್ಳಿ, ಯಳ್ಳಂಬಳಸೆ, ಬಾಣೂರು, ಮಂಜೀಹಳ್ಳಿ, ಬೀರೂರು ನಗರ, ಶ್ರೀರಾಂಪುರ ಗ್ರಾಮಗಳಲ್ಲಿ ತಲಾ ಒಂದು ಮನೆಗಳಿಗೆ ಹಾನಿಯಾಗಿದೆ. ಸಿಂಗಟಗೆರೆ ಮತ್ತು ಕೆ. ಬಿದರೆ ಗ್ರಾಮಗಳಲ್ಲಿ ತಲಾ ಮೂರಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!