ಕಡೂರುಃ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುಲಭ್ ಶೌಚಾಲಯ ಕಾಮಗಾರಿಗೆ ಶಾಸಕ ಕೆಎಸ್.ಆನಂದ್ ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಶೌಚಾಲಯಗಳನ್ನು ನಿರ್ಮಿಸಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಸುಲಭ್ ಸಂಸ್ಥೆಯ ಕಾರ್ಯ ಶ್ಲಾಘನೀಯ.ಈ ಆಸ್ಪತ್ರೆಯಲ್ಲಿ ಶೌಚಾಲಯದ ಅಗತ್ಯ ಬಹಳವಾಗಿತ್ತು. 35 ಲಕ್ಷ ವೆಚ್ಚದಲ್ಲಿ ಇದು ನಿರ್ಮಾಣವಾಗಲಿದೆ.ಇದಕ್ಕೆ ಸಿಎಸ್ಆರ್ ಅನುದಾನ ದೊರೆತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚಿದೆ. ಸುಸಜ್ಜಿತ ಶೌಚಾಲಯ ನಿರ್ಮಾಣವಾಗುತ್ತಿರುವುದು ಉತ್ತಮ ಸೌಲಭ್ಯ ನೀಡಿದಂತಾಗಿದೆ.ಸುಲಭ್ ಸಂಸ್ಥೆಯವರು ಕ್ಷೇತ್ರದ ಹಲವಾರು ಶಾಲಾ ಕಾಲೇಜುಗಳಿಗೆ ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಈ ರೀತಿಯ ಶೌಚಾಲಯ ಅಗತ್ಯವಾಗಿದ್ದು,ಸುಲಭ್ ಸಂಸ್ಥೆಯವರು ಅಲ್ಲಿಯೂ ಶೌಚಾಲಯ ನಿರ್ಮಾಣ ಮಾಡಿಕೊಡುವ ನಿರೀಕ್ಷೆಯಿದೆ ಎಂದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಆಧುನಿಕ ಶೌಚಾಲಯ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಇದನ್ನು ಸ್ವಚ್ಚವಾಗಿಟ್ಟುಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು. ಕಡೂರು ಪಟ್ಟಣದಲ್ಲಿ ಹಲವಾರು ಕಡೆ ಶೌಚಾಲಯದ ಅಗತ್ಯವಿದೆ. ಸುಲಭ್ ಸಂಸ್ಥೆ ಶೌಚಾಲಯ ನಿರ್ಮಾಣಕ್ಕೆ ಮುಂದಾದರೆ ಪುರಸಭೆ ವತಿಯಿಂದ ನಮ್ಮ ಇತಿಮಿತಿಯಲ್ಲಿ ಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ವಾಡಿಲಾಲ್, ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಡಾಗುರುಮೂರ್ತಿ, ಡಾ.ದೀಪಕ್ , ಸುಲಭ್ ಸಂಸ್ಥೆಯ ಇಂಜಿನಿಯರ್ ಆನಂದ್ ಝಾ, ಆಸ್ಪತ್ರೆಯ ವ್ಯವಸ್ಥಾಪಕ ಚಂದ್ರೇಗೌಡ ಇದ್ದರು.
———–
ಸುಲಭ್ ಇಂಟರ್ ನ್ಯಾಷನಲ್ ವತಿಯಿಂದ 30 ಲಕ್ಷ ವೆಚ್ಚದಲ್ಲಿ ಹೈ ಟೆಕ್ ಶೌಚಾಲಯ ನಿರ್ಮಾಣಗೊಳ್ಳಲಿದೆ. ಸಿಎಸ್ಆರ್ ಅನುದಾನ ಇದಕ್ಕೆ ದೊರೆತಿದೆ. ಈ ಶೌಚಾಲಯ ನಿರ್ಮಾಣದ ಜೊತೆ 30 ವರ್ಷ ನಿರ್ವಹಣೆಯನ್ನೂ ಸಂಸ್ಥೆಯೇ ಮಾಡುತ್ತದೆ ಎಂದು ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ವಿಶ್ವನಾಥ್ ಮಾಳಗಿ ತಿಳಿಸಿದರು.

