Spread the love
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಇಂದಿನವರಲ್ಲಿ ಮೂಡಬೇಕಾದ ಅಗತ್ಯವಿದೆ.
– ಜಿಗಣೇಹಳ್ಳಿ ನೀಲಕಂಠಪ್ಪ.

ಕಡೂರು: ದೂರದೃಷ್ಟಿಯ ಚಿಂತನೆಯಿದ್ದರೆ ಆಡಳಿತ ನಿರ್ವಹಣೆ ಮಾದರಿಯಾಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟ ನಾಡಪ್ರಭು ಮಾಗಡಿ ಕೆಂಪೇಗೌಡರು ಪ್ರಾತಃ ಸ್ಮರಣೀಯರು ಎಂದು ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ತಾಲ್ಲೂಕಿನ ಜಿಗಣೇಹಳ್ಳಿ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವ ಸೌಲಭ್ಯವನ್ನು ಒಳಗೊಂಡ ಮಹಾನಗರವನ್ನು ನಿರ್ಮಿಸುವ ಚಿಂತನೆಯಲ್ಲಿ ಅತ್ಯಂತ ಸುವ್ಯವಸ್ಥಿತ ಮೂಲಸೌಕರ್ಯಗಳನ್ನು ಒಳಗೊಂಡ ನಗರ ನಿರ್ಮಾಣಕ್ಕೆ  ಮುಂದಾದವರು ಕೆಂಪೇಗೌಡರು. ಒಂದು ನಗರ ನಿರ್ಮಾಣವಾದರೆ ಅಲ್ಲಿ ಅಗತ್ಯವಿರುವ ಪ್ರತಿ ಸೌಲಭ್ಯಗಳನ್ನು ಒದಗಿಸಬೇಕು. ಕೆರೆ ಕಟ್ಟೆಗಳು, ಚರಂಡಿ ವ್ಯವಸ್ಥೆ, ಉದ್ಯೋಗಾಧಾರಿತ ಬಡಾವಣೆಗಳು, ಮಾರುಕಟ್ಟೆ ವ್ಯವಸ್ಥೆ ಎಲ್ಲವನ್ನೂ ಒದಗಿಸಿ ಜನರು ನೆಮ್ಮದಿಯ ಜೀವನ ನಡೆಸಬೇಕೆಂಬ ಕನಸು  ಬೆಂಗಳೂರು ನಗರ ನಿರ್ಮಾಣದೊಂದಿಗೆ ನನಸಾಯಿತು. ಇಂದು ಬೆಂಗಳೂರು ಉದ್ಯಾನ ನಗರಿ ಎಂದು ಹೆಸರಾಗಿದೆ. ಅದಕ್ಕೆ ಮೂಲ‌ಕಾರಣ ಕೆಂಪೇಗೌಡರು ಕಟ್ಟಿಸಿದ ಕೆರೆಗಳು. ಸದಾ ಕಾಲವೂ ನೀರಿನಿಂದ ಸಮೃದ್ಧವಾಗಿದ್ದ ಕೆರೆಗಳು ನಗರಕ್ಕೆ ಕುಡಿಯುವ ನೀರಿನೊಂದಿಗೆ ಮತ್ತಿತರ ಕೃಷಿ ಕಾರ್ಯಗಳಿಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ಯು. ಉದ್ಯೋಗದ  ಸ್ವರೂಪವಾವನ್ನಾಧರಿಸಿ ಪ್ರತ್ಯೇಕ ಬಡಾವಣೆಗಳನ್ನು ನಿರ್ಮಿಸಿದ್ದು ಕೆಂಪೇಗೌಡರ ದೂರದೃಷ್ಟಿಯ ಮತ್ತೊಂದು ಉದಾಹರಣೆಯಾಗಿದೆ. ಬೆಂಗಳೂರಿನ ಅರಳೇಪೇಟೆ, ಕುಂಬಾರಪೇಟೆ, ಉಪ್ಪಾರ ಪೇಟೆ ಮುಂತಾದವು  ಜಾತಿಯಾಧಾರಿತವಾಗದೆ ಜನಕ್ಕೆ ಬೇಕಾದ ಪದಾರ್ಥಗಳನ್ನು ತಯಾರಿಸುವವರಿಗಾಗಿ ರಚಿತವಾದ ಬಡಾವಣೆಗಳಾಗಿದ್ದವು. ಉತ್ಪಾದಿಸಿದ ವಸ್ತುಗಳ ಮಾರಾಟಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯಿತ್ತು. ಇವೆಲ್ಲವೂ ಕೆಂಪೇಗೌಡರ ಹೆಸರನ್ನು ಅಜರಾಮರಗೊಳಿಸಿದವು. ಇಂದಿನ ಬೆಂಗಳೂರಿನ ಹಿರಿಮೆಗೆ ಸುಭಧ್ರ ಅಡಿಪಾಯ ಹಾಕಿದ ಕೆಂಪೇಗೌಡರು ಇಂದಿನ ಆಡಳಿತಗಾರರಿಗೆ ಮಾದರಿ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಅದ್ಧೂರಿಯಾಗಿ ಗ್ರಾಮದೊಳಗೆ ಮೆರವಣಿಗೆ ಮಾಡಲಾಯಿತು.ಗ್ರಾಮದ ಗೌಡರುಗಳಾದ  ಎಂ.ಉಮೇಶ್, ಮಂಜಪ್ಪ, ಮಹೇಶ್, ಕರಿಯಪ್ಪ,ಮಲ್ಲಪ್ಪ,ಮರಿಯಪ್ಪ, ಕೆಂಚಪ್ಪ, ಕೆಂಪೇಗೌಡ ಯುವಕ ಬಳಗ,ಜಿಗಣೇಹಳ್ಳಿ ಗ್ರಾಮಸ್ಥರು, ಕೆಫೇಗೌಡ ಬಳಗದ ಪದಾಧಿಕಾರಿಗಳು ಇದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!