
ಕಡೂರು: ಪುರಸಭಾ ವ್ಯಾಪ್ತಿಯಲ್ಲಿರುವ ಮಲ್ಲೇಶ್ವರ ಬಳಿಯ ಬಡಾವಣೆಯಲ್ಲಿ ಹಕ್ಕುಪತ್ರ ಹೊಂದಿರುವ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ಪೂರಕವಾಗಿ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಆಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪುರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1999ರಲ್ಲಿ ಪುರಸಭೆ ಮೂಲಕ ಮಲ್ಲೇಶ್ವರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಯಿಂದ ಜಮೀನು ಖರೀದಿಸಿ ಬಡಾವಣೆ ನಿರ್ಮಾಣ ಮಾಡಿ 28 ಫಲಾನುಭವಿಗಳಿಗೆ ನಿವೇಶನ ನೀಡಲಾಗಿತ್ತು. ಇತ್ತೀಚೆಗೆ ಕೆಲ ಫಲಾನುಭವಿಗಳು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆ ಬಡಾವಣೆಯಲ್ಲಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಡೂರು ಪಟ್ಟಣದ ಗಣಪತಿ ಆಂಜನೇಯ ದೇವಸ್ಥಾನದ ರಸ್ತೆಯನ್ನು ವಿಸ್ತರಣೆ ಮಾಡಲಾಗಿದ್ದು, ದೇವಾಲಯದ ಬದಿಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ವೃತ್ತವನ್ನು ನಿರ್ಮಿಸಲು ಸದಸ್ಯರು ಸರ್ವಾನುಮತದ ಒಪ್ಪಿಗೆ ಸೂಚಿಸಿದರು.
ಸದಸ್ಯ ಈರಳ್ಳಿ ರಮೇಶ್ ಮಾತನಾಡಿ, ಪಟ್ಟಣದ ಕಲ್ಲುಹೊಳೆ ರಸ್ತೆ, ದೊಡ್ಡಪೇಟೆ, ಸಿದ್ದನಾಯ್ಕನ ಬೀದಿ ಮತ್ತು ಲಕ್ಷ್ಮಿ ಆಸ್ಪತ್ರೆ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ನಮ್ಮ ಮನವಿಗೆ ಯಾವುದೇ ಬೆಲೆ ಇಲ್ಲವಾಗಿದೆ. ಈ ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಮಂಜೂರಾದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ವಾರ್ಡ್ನಲ್ಲಿ ನಡೆಯುತ್ತಿರುವ ಕೆಲಸ ಅಥವಾ ಕಾಮಗಾರಿಗಳ ಬಗ್ಗೆ ನಮಗೆ ಮಾಹಿತಿಯೇ ಎಂದು ಸದಸ್ಯೆ ಹಾಲಮ್ಮ ದೂರಿದರು.ಕೋಟೆ ಬಡಾವಣೆಯಲ್ಲಿ ನೀರಿನ ಸಂಪರ್ಕಕ್ಕಾಗಿ ಪೈಪ್‌ಲೈನ್ ಅಳವಡಿಸಲು ಕಾಮಗಾರಿ ನಿರ್ವಹಿಸಿ ತಿಂಗಳಾದರೂ ಸಂಪೂರ್ಣವಾಗಿಲ್ಲ ಎಂದು ಸದಸ್ಯ ಯಾಸೀನ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ 21ನೇ ವಾರ್ಡ್ನಲ್ಲಿ ಕಿರಿದಾದ ರಸ್ತೆಗಳಿದ್ದು ಅಲ್ಲಿನ ಹಲವಾರು ನಿವಾಸಿಗಳು ರಸ್ತೆಯಲ್ಲಿಯೇ ಕುರಿ, ಎಮ್ಮೆ, ಜಾನುವಾರುಗಳನ್ನು ಕಟ್ಟಿ ಸಾರ್ವಜನಿಕರಿಗೆ ತೊಂದರೆಯಾಗಿದೆ.ಇದರತ್ತ ಗಮನ ಹರಿಸಬೇಕು ಎಂದು ಸದಸ್ಯೆ ಜ್ಯೋತಿ ಆನಂದ್ ಒತ್ತಾಯಿಸಿದರು.
ಸದಸ್ಯರುಗಳಿಗೆ ಪ್ರತಿಕ್ರಿಯಿಸಿದ ಭಂಡಾರಿ ಶ್ರೀನಿವಾಸ್, ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಶ್ಲಾಘನೆ ದೊರೆತಿದೆ. ಪ್ರತಿಯೊಂದು ವಾರ್ಡ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.ಯಾವುದೇ ತಾರತಮ್ಯ ಮಾಡಿಲ್ಲ. ಪಟ್ಟಣದ ಅಭಿವೃದ್ಧಿಗಾಗಿ ಶಾಸಕರಲ್ಲಿ 5 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ. ಈ ಅನುದಾನದಲ್ಲಿ ಪ್ರತಿ ವಾರ್ಡಿಗೆ 15 ಲಕ್ಷ ಮೀಸಲಿಡುವ ಚಿಂತನೆಯಿದೆ. ಇದನ್ನು ವಾರ್ಡಿನಲ್ಲಿ ತುರ್ತು ಅಥವಾ ಪ್ರಮುಖ ಕಾಮಗಾರಿಗಳಿಗಾಗಿ ಸದಸ್ಯರು ಉಪಯೋಗಿಸಿಕೊಳ್ಳಬಹುದಾಗಿದೆ ಎಂದರು.
ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಸದಸ್ಯರಾದ ಕೆ.ಎಂ.ಮೋಹನ್ ಕುಮಾರ್, ಜಿ.ಸೋಮಯ್ಯ, ಸುಧಾ ಉಮೇಶ್, ಮರುಗುದ್ದಿ ಮನು, ಗೋವಿಂದ, ಮಂಡಿ ಇಕ್ಬಾಲ್, ನಾಮನಿರ್ದೇಶಿತ ಸದಸ್ಯರು ಇದ್ದರು.

