ಕಡೂರು: ಪ್ರತಿ ಗ್ರಾಮದ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ ನಮ್ಮ ಸಾಂಸ್ಕೃತಿಕ ಇತಿಹಾಸವನ್ನು ಪ್ರಚುರಪಡಿಸುವುದು ನಮ್ಮ ಊರು ನನ್ನ ಬೇರು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಕಡೂರು ತಾಲ್ಲೂಕಿನ ಇತಿಹಾಸ ಮತ್ತು ಪರಂಪರೆ ಅರಿವು ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತಿಹಾಸವನ್ನು ಹೆಕ್ಕುವ ಕಾರ್ಯವನ್ನು ಅಕಾಡೆಮಿ ಮೂಲಕ ಮಾಡಲಾಗುತ್ತಿದೆ. ರಾಜ್ಯದಾದ್ಯಂತ ಐತಿಹಾಸಿಕ ಮಹತ್ವ ಸಾರುವ ಎಲ್ಲ ಶಾಸನ,ವೀರಗಲ್ಲುಗಳು, ವಿಗ್ರಹಗಳು ಮುಂತಾದವುಗಳನ್ನು ಆಯಾ ಗ್ರಾಮದವರ ಸಹಕಾರ ಪಡೆದು ಅವುಗಳನ್ನು ಅಲ್ಲಿಯೇ ಸಂರಕ್ಷಿಸಿಡುವ ಕಾರ್ಯವನ್ನು ಮಾಡುವ ಕಲ್ಪನೆಯೊಂದಿಗೆ ನಮ್ಮ ಊರು ನನ್ನ ಬೇರು ಎಂಬ ಕಾರ್ಯಕ್ರಮ ರೂಪಿಸಲಾಯಿತು. ಪ್ರಥಮ ಹಂತದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಓ ಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ಐತಿಹಾಸಿಕ ಮಹತ್ವದ ಸ್ಥಳಗಳ ಬಗ್ಗೆ ವಿವರ ನೀಡಿದ್ದಾರೆ. ಮುಂದಿನ ಹಂತದಲ್ಲಿ ಈ ಎಲ್ಲ ಸ್ಮಾರಕಗಳನ್ನು ಪೂರ್ಣ ಸಂರಕ್ಷಿಸಿಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಇತಿಹಾಸ ತಜ್ಞ ಹಿರೇನಲ್ಲೂರು ಪಾಂಡುರಂಗ ಮಾತನಾಡಿ, ಸಾರ್ವಜನಿಕವಾಗಿ ಇತಿಹಾಸ ಪ್ರಜ್ಞೆ ಬಹಳ ಕಡಿಮೆಯಾಗಿದೆ. ದೇವಸ್ಥಾನವೊಂದರಲ್ಲಿ ಸಿಕ್ಕಿದ ಅಮೂಲ್ಯ ಹೊಯ್ಸಳ ವಿಗ್ರಹಗಳನ್ನು ನದಿಗೆ ಎಸೆದದ್ದನ್ನು ಪ್ರತ್ಯಕ್ಷ ಕಂಡಿದ್ದೇನೆ. ಇವೆಲ್ಲವೂ ಐತಿಹಾಸಿಕ ಸ್ಮಾರಕಗಳ ಬಗ್ಗೆ ನಮಗಿರುವ ಅನಾದರಕ್ಕೆ ಸಾಕ್ಷಿ. ಈ ಮನೋಭಾವನೆ ದೂರವಾಗಬೇಕು. ಪ್ರಸ್ತುತ ಉಳಿದಿರುವಷ್ಟಾದರೂ ಐತಿಹಾಸಿಕ ಮಹತ್ವದ ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯವಾಗಬೇಕಿದೆ ಎಂದರು.
ಯುವಜನ ಸೇವಾ ಇಲಾಖೆ ಜಿಲ್ಲಾ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಕಡೂರು ಐತಿಹಾಸಿಕವಾಗಿ ಅತ್ಯಂತ ಮಹತ್ವದ ಪ್ರದೇಶವಾಗಿದೆ. ಪ್ರಾಗೈತಿಹಾಸಿಕ ಸ್ಥಳಗಳೂ ಇಲ್ಲಿ ಪತ್ತೆಯಾಗಿರುವುದು ಇಲ್ಲಿನ ವಿಶೇಷ.ಇದರ ಜೊತೆಗೆ ಪ್ರತಿ ಗ್ರಾಮದಲ್ಲಿಯೂ ಐತಿಹಾಸಿಕ ಮಹತ್ವದ ಸ್ಥಳಗಳಿವೆ. ಬಹಳಷ್ಟು ಕಡೆ ಶಾಸನಗಳು, ವೀರಗಲ್ಲುಗಳು,ವಿಗ್ರಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇವೆಲ್ಲವನ್ನೂ ರಕ್ಷಣೆ ಮಾಡಿದರೆ ನಮ್ಮ ಸಂಸ್ಕೃತಿಯ ಭಾಗವೂ ಆಗಿರುವ ಇತಿಹಾಸದ ಕುರುಹುಗಳನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿದಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಮ್ಮ ಊರು ನನ್ನ ಬೇರು ಕಾರ್ಯಕ್ರಮದ ಉದ್ದೇಶ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಸಿ.ಆರ್.ಪ್ರವೀಣ್ ಮಾತನಾಡಿ, ಪ್ರತಿ ಗ್ರಾಮಗಳಲ್ಲಿರುವ ಇತಿಹಾಸದ ಕುರುಹುಗಳನ್ನು ಅದೇ ಸ್ಥಳದಲ್ಲಿ ಸಂರಕ್ಷಿಸುವ ಕಾರ್ಯ ಅತ್ಯಂತ ಅಗತ್ಯದ್ದು. ಗ್ರಾಮಪಂಚಾಯಿತಿ ಪಿಡಿಓಗಳು ತಮ್ಮ ವ್ಯಾಪ್ತಿಯ ಇತಿಹಾಸದ ವಿವರಗಳನ್ನು ಕಲೆಹಾಕಿರುವುದು ಶ್ಲಾಘನೀಯ. ತಾವು ಕರ್ತವ್ಯ ನಿರ್ವಹಿಸುವ ಕಡೆ ಇತಿಹಾಸದ ಸ್ಮಾರಕಗಳನ್ನು ಸ್ಥಳೀಯ ಸಹಕಾರ ಪಡೆದು ಸಂರಕ್ಷಿಸಿದಲ್ಲಿ ಒಂದು ಆತ್ಮತೃಪ್ತಿ ನಮ್ಮದಾಗುತ್ತದೆ. ತಮ್ಮ ಸಹಕಾರವೂ ಈ ಕಾರ್ಯಕ್ಕೆ ಸದಾ ಇರುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಇದ್ದರು.

