-ಪ್ರಯಾಗರಾಜ್ ಮಹಾ ಕುಂಬಮೇಳದಲ್ಲಿ ನಾಪತ್ತೆಯಾಗಿದ್ದ ಕಡೂರಿನ ತಂಗಲಿಯ ನರಸಿಂಹಮೂರ್ತಿ.
-ನಾಲ್ಕು ತಿಂಗಳ ನಂತರ ಮುಂಬೈಯಲ್ಲಿ ಪತ್ತೆ.
-ನೆಮ್ಮದಿಯ ನಿಟ್ಟುಸಿರು ಬಿಟ್ಟ ಕುಟುಂಬ.

ಕಡೂರು: ಜನವರಿಯಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕಾಣೆಯಾಗಿದ್ದ ಕಡೂರಿನ ವ್ಯಕ್ತಿಯೊಬ್ಬರು ಸುಮಾರು ನಾಲ್ಕು ತಿಂಗಳ ನಂತರ ಪತ್ತೆ ಯಾಗಿದ್ದಾರೆ. ನರಸಿಂಹಮೂರ್ತಿ(75) ಮುಂಬೈಯಲ್ಲಿ ಪತ್ತೆಯಾಗಿದ್ದಾರೆ.
ಪಟ್ಟಣದ ಕೆ.ಎಂ.ರಸ್ತೆಯ ಆಂಜನೇಯ ದೇವಸ್ಥಾನದಲ್ಲಿ ಅರ್ಚಕರಾಗಿರುವ ಬದರೀನಾಥ್ ತಮ್ಮ ತಂದೆಯೊಡನೆ
ಕಡೂರು ತಾಲೂಕಿನ ತಂಗಲಿ ಗ್ರಾಮದಲ್ಲಿ ವಾಸವಾಗಿದ್ದಾರೆ. ನರಸಿಂಹ ಮೂರ್ತಿಯವರು ತಂಗಲಿಯ ಚೆನ್ನಕೇಶವ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿದ್ದರು. ಬದರಿನಾಥ್ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳಕ್ಕೆ ಕುಟುಂಬ ಸಮೇತ ತೆರಳಿದ್ದರು. ಜನವರಿ 28 ರಂದು ಜನಜಂಗುಳಿಯಲ್ಲಿ ಆಕಸ್ಮಿಕವಾಗಿ ಬದರಿನಾಥ್ ಅವರ ತಂದೆ ನರಸಿಂಹಮೂರ್ತಿಯವರು ಕಾಣೆಯಾಗಿದ್ದರು. ಮೂರ್ನಾಲ್ಕು ದಿನ ಸತತವಾಗಿ ಹುಡುಕಿದರು ನರಸಿಂಹಮೂರ್ತಿಯವರು ಪತ್ತೆಯಾಗಿರಲಿಲ್ಲ. ಎಷ್ಟು ಹುಡುಕಿದರೂ ಸಿಗದೇ ಬದರಿಯವರು ವಾಪಸ್ ತಂಗಲಿಗೆ ಬಂದು ಕುಟುಂಬಬದವರನ್ನು ಬಿಟ್ಟು ಮತ್ತೆ ಕುಂಭಮೇಳ ನಡೆದ ಸ್ಥಳಕ್ಕೆ ಹೋಗಿ ಮತ್ತೆ ಹುಡುಕಾಟ ನಡೆಸಿದರು ಪತ್ತೆಯಾಗಿರಲಿಲ್ಲ.ಈ ಕುರಿತು ಪ್ರಯಾಗ್ ರಾಜ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಲಾಗಿತ್ತು. ನರಸಿಂಹ ಮೂರ್ತಿಯವರ ಸುಳಿವು ಸಿಗದೆ ಬದರೀನಾಥ್ ಕುಟುಂಬದವರು ಆತಂಕಿತರಾಗಿದ್ದರು.
ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ನರಸಿಂಹ ಮೂರ್ತಿಯವರು ಮುಂಬೈ ಶಾರದಾ ರೀಹ್ಯಾಬಿಲಿಟೇಷನ್ ಸಂಸ್ಥೆಯವರಿಗೆ ಸಿಕ್ಕಿ ಅವರು ಸಂಸ್ಥೆಯಲ್ಲಿ ನರಸಿಂಹ ಮೂರ್ತಿಯವರನ್ನು ರಕ್ಷಿಸಿ ಸಲಹುತ್ತಿದ್ದರು.ನರಸಿಂಹಮೂರ್ತಿಯವರು ಮೂಲತಃ ಹಾಸನ ಜಿಲ್ಲೆ ಮೊಸಳೆ ಗ್ರಾಮದವರು. ಮುಂಬಯಿಯಲ್ಲಿ ಕೆಲಸ ಮಾಡುತ್ತಿರುವ ಮೊಸಳೆ ಗ್ರಾಮದ ಕೆಲವರಿಗೆ ನರಸಿಂಹಮೂರ್ತಿಯವರು ಮುಂಬೈ ನಲ್ಲಿರುವ ಸುಳಿವು ದೊರೆತಿತ್ತು. ನರಸಿಂಹ ಮೂರ್ತಿಯವರ ಗುರುತನ್ನು ಸಂಸ್ಥೆಯವರಿಗೆ ನೀಡಿದ ನಂತರ ಸಂಸ್ಥೆಯವರೇ ನರಸಿಂಹ ಮೂರ್ತಿಯವರನ್ನು ಕರೆತಂದು ಕುಟುಂಬ ವರ್ಗಕ್ಕೆ ಒಪ್ಪಿಸಿದ್ದಾರೆ. ಆತಂಕದಲ್ಲಿದ್ದ ಕುಟುಂಬ ನೆಮ್ಮದಿಗೊಂಡಿದೆ.
ನಮ್ಮ ತಂದೆಯವರಿಗೆ ಮರೆವಿನ ಸಮಸ್ಯೆಯಿತ್ತು. ದೈವಕೃಪೆಯಿಂದ ನಮ್ಮ ತಂದೆ ಮರಳಿದ್ದು ನೆಮ್ಮದಿ ತಂದಿದೆ. ಶಾರದಾ ಸಂಸ್ಥೆಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಕುರಿತು ಪ್ರಯಾಗ್ ರಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ನೋವು ಆತಂಕದ ದಿನಗಳಲ್ಲಿ ನಮಗೆ ನೈತಿಕ ಸ್ಥೈರ್ಯ ಕೊಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬದರೀನಾಥ್ ಪ್ರತಿಕ್ರಿಯಿಸಿದರು.

