
ಕಡೂರು: ಪರಿಸರ ಸಂಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಂಡಂತೆ ಎಂದುರೋಟರಿ ಕ್ಲಬ್ ಅಧ್ಯಕ್ಷ ಟಿ.ಡಿ..ರಾಜನ್ ತಿಳಿಸಿದರು
ಬಿಸಿಲೆಹಳ್ಳಿ ಗ್ರಾಮದ ಶ್ರೀ ಬಾಬು ನರೇಂದ್ರ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಹಿಳಾ ಘಟಕ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಮತ್ತು ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಸಾಲುಮರದ ತಿಮ್ಮಕ್ಕನನ್ನು ನಾವು ಆದರ್ಶವಾಗಿ ಇರಿಸಿಕೊಂಡು ಅವರ ಪರಿಸರ ಸಂರಕ್ಷಣೆಯ ಕಾಯಕವನ್ನು ನಾವೆಲ್ಲರೂ ಮುಂದುವರೆಸಬೇಕಾದ ಅಗತ್ಯವಿದೆ ಎಂದರು.
ಚಕ್ರವರ್ತಿ ಪಿಯು ಕಾಲೇಜಿನ ಅಧ್ಯಕ್ಷ ಕೆ.ಪಿ. ರಾಘವೇಂದ್ರ ನಾಲ್ವಡಿ ಒಡೆಯರ್ ಅವರ ಬಗ್ಗೆ ಮಾತನಾಡಿ,ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯ ಮೂಲಕ ಕನ್ನಡ ನಾಡು ನುಡಿಯ ಸೇವೆಗೆ ಶಾಶ್ವತ ವೇದಿಕೆ ರೂಪಿಸಿದವರು ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಕರ್ನಾಟಕದ ಅಭಿವೃದ್ಧಿಗೆ ಅಡಿಪಾಯ ಹಾಕಿದ ನಾಲ್ವಡಿಯವರು ಇಡೀ ಕರುನಾಡಿಗೆ ಪ್ರಾತಃ ಸ್ಮರಣೀಯರು. ಅವರ ಸಾಧನೆಗಳೇ ಅವರನ್ನು ಇಂದಿಗೂ ಜನಮನದಲ್ಲಿ ಜೀವಂತವಾಗಿರಿಸಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ,
ಬಸವಣ್ಣನವರು ಹಾಗೂ ಅಂದಿನ ಎಲ್ಲ ಶಿವಶರಣರು ಕಾಯಕ ದಾಸೋಹ ಇವುಗಳಿಗೆ ಹೆಚ್ಚು ಮನ್ನಣೆಯನ್ನು ನೀಡಿ ಮಾನವೀಯತೆಯನ್ನು ಮುಂಚೂಣಿಗೆ ತಂದ ಅನುಭವಿಗಳು. ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣನವರ ಆಶಯಗಳು ಅಂಬೇಡ್ಕರ್ ಅವರಿಗೆ ಸಮಾನತೆಯ ಸಂವಿಧಾನ ರೂಪಿಸಲು ಸ್ಪೂರ್ತಿಯಾಗಿರಬಹುದು ಎಂಬುದು ಉತ್ಪ್ರೇಕ್ಷೆಯಲ್ಲ ಎಂದರು.
ತರೀಕೆರೆ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತ ಕಿರಣ್ ಅವರು ಕುಮಾರವ್ಯಾಸ ಭಾರತದ ಪಠ್ಯಧಾರಿತ ಪದ್ಯವನ್ನು ವಿಶ್ಲೇಷಣೆ ಮಾಡಿ ಗಮಕಗಾಯನ ಮತ್ತು ವಾಚನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.ಕಡೂರು ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಕೆ. ಹೆಚ್. ಶ್ರೀನಿವಾಸ್ ಮತ್ತು ಬಿ. ವಿ. ರಾಜಶೇಖರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಪ್ರಿಯಾಂಕ ಭರತ್, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಪ್ಪಾಳು ಶಾಂತ ಮೂರ್ತಿ, ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ಬಿ. ಎಚ್. ಸೋಮಶೇಖರ್ .ಶಿಕ್ಷಕರಾದ ಪಲ್ಲವಿ, ಪರಮೇಶ್, ಅಪೂರ್ವ, ಪ್ರಕಾಶ್ ,ಸುಧಾಮಣಿ ,ಲತಾ ಇದ್ದರು.
