
ಕಡೂರು: ಕೆಲದಿನಗಳ ಹಿಂದೆ ಕಂಸಾಗರ ಗೇಟ್ ಬಳಿ ಸುಟ್ಟ ಶವ ಪತ್ತೆ ಪ್ರಕರಣವನ್ನು ಕಡೂರು ಪೊಲೀಸರು ಬೇಧಿಸಿದ್ದು, ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಕಡೂರು ವಾಸಿಗಳಾದ ಪ್ರದೀಪ್ ಆಚಾರ್, ಸಿದ್ದೇಶ್,ವಿಶ್ವಾಸ್ ಬಂಧಿತರು.
ಘಟನೆ ಹಿನ್ನೆಲೆ: ಕಡೂರು ಟೌನ್ ಕೋಟೆ ವಾಸಿ ಮಹಿಳೆಯೊಬ್ಬರು ತಮ್ಮ ಪತಿ ಸುಬ್ರಮಣ್ಯ ಅವರು ಕಾಣೆಯಾಗಿದ್ದಾರೆ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಎರಡು ದಿನಗಳ ನಂತರ ಕಂಸಾಗರ ಗೇಟ್ ಬಳಿ ಶವವೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವ ಪುರುಷನದೇ ಅಥವಾ ಮಹಿಳೆಯದೇ ಎಂಬುದು ತಿಳಿದಂತಹ ಪರಿಸ್ಥಿತಿಯಿತ್ತು. ಬೆಂಗಳೂರಿನಿಂದ ಎಫ್.ಎಸ್.ಎಲ್.ತಜ್ಞರನ್ನು ಕರೆಸಲಾಗಿತ್ತು.
ಎರಡೂ ಪ್ರಕರಣಗಳನ್ನು ತಾಂತ್ರಿಕ ಮತ್ತು ಹಲವು ಆಯಾಮಗಳಿಂದ ಪರಿಶೀಲಿಸಿ ಕಾಣೆಯಾದ ಮತ್ತು ಪತ್ತೆಯಾದ ಸುಟ್ಟ ಶವ ಒಬ್ಬನದೇ ಎಂದು ಖಚಿತಪಡಿಸಿಕೊಂಡ ಪೊಲೀಸರು ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಅನೈತಿಕ ಸಂಬಂಧಕ್ಕಾಗಿ ನಡೆದ ಕೊಲೆ ವಿಚಾರ ಬಹಿರಂಗವಾಗಿದೆ.
ಪ್ರದೀಪ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ, ಈತನಿಗೂ ಕೊಲೆಯಾದ ಸುಬ್ರಮಣ್ಯ ಅವರ ಹೆಂಡತಿಯ ಜೊತೆ ಅಕ್ರಮ ಸಂಬಂಧವಿತ್ತು.ಇದಕ್ಕೆ ಅಡ್ಡಿಯಾಗಿದ್ದ ಸುಬ್ರಮಣ್ಯ ಅವರನ್ನು ಕೊಲೆ ಮಾಡಲು ನಿಶ್ಚಯಿಸಿ ಸಿದ್ದೇಶ್ ಮತ್ತು ವಿಶ್ವಾಸ್ ಅವರ ಸಹಾಯ ಪಡೆದು, ಸಿದ್ದೇಶನ ಕಾರಿನಲ್ಲಿ ಸುಬ್ರಮಣ್ಯ ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಶವವನ್ನು ಕಂಸಾಗರ ಗೇಟ್ ಬಳಿ ಸೌದೆ ಪೆಟ್ರೋಲ್ ಬಳಸಿ ಸುಟ್ಟು ಹಾಕಿರುವುದು ಧೃಢಪಟ್ಟಿದೆ. ಮೂವರೂ ಅರೋಪಿಗಳು ನ್ಯಾಯಾಂಗದ ವಶದಲ್ಲಿದ್ದಾರೆ.
ಕಡೂರು ವೃತ್ತ ನಿರೀಕ್ಷಕ ರಫೀಕ್, ಪಿಎಸೈ ಸಿ.ಸಿ. ಪವನ್ ಕುಮಾರ್ ಮತ್ತು ಡಿ.ಎಚ್.ಧನಂಜಯ ಹಾಗೂ ಲೀಲಾವತಿ, ಎಎಸ್ಐ ವೇದಮೂರ್ತಿ ಹಾಗೂ ಅಫರಾದ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಗಳು ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು.

ಕೊಲೆ ಪ್ರಕರಣ ಬೇಧಿಸಿದ ಕಡೂರು ಪೊಲೀಸರ ತಂಡ…ಸಿಪಿಐ ರಫೀಕ್,ಪಿಎಸೈ ಪವನ್ ಕುಮಾರ್, ಪಿಎಸೈ ಧನಂಜಯ,ಪಿಎಸೈ ಲೀಲಾವತಿ ಮತ್ತು ಸಿಬ್ಬಂದಿ ಇದ್ದಾರೆ.
