
ಕಡೂರು : ಪರಿಸರವನ್ನು ಕಾಪಾಡಿದರೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುರಸಭೆ ವತಿಯಿಂದ ಪಟ್ಟಣದ ಮಾತಾ ಬಡಾವಣೆಯಲ್ಲಿ ಏರ್ಪಡಿಸಿದ್ದ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಅಸಮತೋಲನದಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ.ಜೀವಸಂಕುಲಗಳು ಅಪಾಯದಲ್ಲಿವೆ.ಪರಿಸರ ಸಂರಕ್ಷಣೆಯೊಂದೇ ಇದಕ್ಕೆ ಪರಿಹಾರ. ಸಾರ್ವಜನಿಕರು ಸ್ವಪ್ರೇರಣೆಯಿಂದ ಮನೆಗೊಂದು ಗಿಡ ನೆಟ್ಟು ಪೋಷಿಸಿದರೆ ಪಟ್ಟಣ ಸೌಂದರ್ಯವೂ ಹೆಚ್ಚುವ ಜೊತೆಗೆ ಆರೋಗ್ಯಕರ ಪರಿಸರ ನಮ್ಮದಾಗುತ್ತದೆ.ಈ ನಿಟ್ಟಿನಲ್ಲಿ ಪುರಸಭೆ ಈಗಾಗಲೇ ಕಾರ್ಯೋನ್ಮುಖವಾಗಿದೆ. ನಾಗರೀಕರೂ ಸಹ ಕೈಜೋಡಿಸಿದರೆ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದಂತಾಗುತ್ತದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಪರಿಸರದ ಸಂರಕ್ಷಣೆ ಮಾಡುವ ಆಶಯ ಪ್ರತಿಯೊಬ್ಬರಲ್ಲಿ ಮೂಡಿ ಕಾರ್ಯರೂಪಕ್ಕೆ ತಂದಾಗ ಮಾತ್ರ ಪರಿಸರ ಉಳಿವು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮೋಹನ್, ಸುಧಾ ಉಮೇಶ್, ಗೋವಿಂದು, ಸಂದೇಶ್ ಕುಮಾರ್, ನಾಮಿನಿ ಸದಸ್ಯರಾದ ದೇವೇಂದ್ರ, ಕೃಷ್ಣಪ್ಪ, ಖಾದರ್, ವಿನಯ್ ದಂಡಾವತಿ, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಪರಿಸರ ಅಭಿಯಂತರ ಶ್ರೇಯಸ್ ಕುಮಾರ್, ಶಾಮಿಯಾನ ಚಂದ್ರು ಇದ್ದರು.

