ಕಡೂರು: ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸಂತಸ ತಂದಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಕಡೂರಿನ ತಮ್ಮ ಗೃಹಕಚೇರಿಯಲ್ಲಿ ಬೀರೂರು ಪುರಸಭೆಯ ನೌಕರರನ್ನು ಗೌರವಿಸಿ ಅವರು ಮಾತನಾಡಿದರು.
ಹಗಲಿರುಳು ಶ್ರಮಿಸುತ್ತಿರುವ ಶ್ರಮಿಕ ವರ್ಗಕ್ಕೆ ಅವರ ಬೇಡಿಕೆಯಾದ ರಾಜ್ಯದಲ್ಲಿರುವ ಹೊರಗುತ್ತಿಗೆ ಪೌರಕಾರ್ಮಿಕರಿಗೆ ನೇರ ಪಾವತಿಯ ಮುಖಾಂತರ ವೇತನ ನೀಡಬೇಕು, ಜೊತೆಗೆ ದಿನಗೂಲಿ ಕೆಲಸ ಮಾಡುವವರ ಕೆಲಸ ಖಾಯಂ ಮಾಡಬೇಕು ಎನ್ನುವ ಬೇಡಿಕೆಯನ್ನು ಆಗ್ರಹಿಸಿ ರಾಜ್ಯಾದ್ಯಂತ ಏಕಕಾಲದಲ್ಲಿ ಶಾಂತ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮನವಿ ಸಲ್ಲಿಸುವ ಕೆಲಸ ಮಾಡಿದ್ದಾರೆ ನಮ್ಮ ಪೌರಕಾರ್ಮಿಕರು, ಅವರ ಮನವಿಗೆ ಸ್ಪಂದಿಸಿದ
ಸರ್ಕಾರ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಘೋಷಣೆ ಮಾಡಿದೆ.
ಪೌರ ಕಾರ್ಮಿಕರಿಂದ ಪಟ್ಟಣ ಶುಚಿಯಾಗಿರುತ್ತದೆ. ಜನರ ಆರೋಗ್ಯದ ದೃಷ್ಟಿಯಿಂದ ಇದು ಅತ್ಯಂತ ಅಗತ್ಯ. ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಪ್ರಕಟಿಸಿರುವುದು ರಾಜ್ಯ ಸರ್ಕಾರ ಯಾವಾಗಲೂ ಶ್ರಮಿಕ ವರ್ಗದ ಪರವಾಗಿರುತ್ತದೆ ಎಂಬುದು ಇದರಿಂದ ಮತ್ತೊಮ್ಮೆ ಧೃಢಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ತಾವೂ ಸಹ ಪೌರ ಕಾರ್ಮಿಕರ ಪರವಾಗಿದ್ದೇನೆ. ಅವರ ಧ್ವನಿಯಾಗಿ ಸದಾ ಕಾರ್ಯನಿರ್ವಹಿಸುತ್ತೇನೆ ಎಂದರು.

