ಕಡೂರು: ಕನ್ನಡ ಕಾವ್ಯಲೋಕದಲ್ಲಿ ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಹೆಸರು ಚಿರಸ್ಥಾಯಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಎಚ್ಚೆಸ್ವಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾವಗೀತೆಗಳನ್ನು ನಮ್ಮ ನಿತ್ಯ ಜೀವನದ ಅನುಭವದಂತೆ ಬರೆದವರು ಎಚ್ಚೆಸ್ವಿ. 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾಡಿದ ವಿದ್ವತ್ಪೂರ್ಣ ಭಾಷಣ ಮರೆಯಲಾಗದು. ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿ ಅವರ ಮೂಲಕ ಬರುವ ನಿರೀಕ್ಷೆಯಿತ್ತು. ಎಚ್ಚೆಸ್ವಿ ನಿಧನ ಕನ್ನಡ ಕಾವ್ಯಲೋಕಕ್ಕೆ ಆದ ದೊಡ್ಡ ನಷ್ಟ ಎಂದರು.
ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ ಮಾತನಾಡಿ, ಎಚ್ಚೆಸ್ವಿ ಅವರ ಭಾವಗೀತೆಗಳು ಮನಸ್ಸಿಗೆ ತೀರ ಹತ್ತಿರವಾಗಿದ್ದವು. ಬಾವನೆ ತುಂಬಿ ಬರೆದು ಜನ ಮಾನಸದಲ್ಲಿ ವಿಶಿಷ್ಠ ಸ್ಥಾನ ಪಡೆದ ಹೆಚ್ಚೆಸ್ವಿ ಕನ್ನಡ ನಾಡು ಮರೆಯಲಾಗದ ಪ್ರಾತಃ ಸ್ಮರಣೀಯರು ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಮಾಜಿ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಪ್ರಕಾಶ್ ನಾಯ್ಕ, ಬ್ಯಾಗಡೇಹಳ್ಳಿ ಬಸವರಾಜು, ಶಾಂತಮೂರ್ತಿ, ರವಿ ಇದ್ದರು.
