Spread the love

ಚಿಕ್ಕನಲ್ಲೂರಿನಲ್ಲಿ ನಡೆದ ಜಾನಪದ ಸಮ್ಮೇಳನದ ಸಮಾರೋಪದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿದರು

ಕಡೂರು:ಕನ್ನಡದ ಮಾನವನ್ನು ಉಳಿಸುವಲ್ಲಿ  ಗ್ರಾಮೀಣ ಜನರ ಪಾತ್ರ ಬಹು ದೊಡ್ಡದು ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ತಾಲ್ಲೂಕಿನಲ್ಲಿ ಸೋಮವಾರ  ಕರ್ನಾಟಕ ಜಾನಪದ ಪರಿಷತ್ತು ಏರ್ಪಡಿಸಿದ್ದ ನಾಲ್ಕನೇ ತಾಲ್ಲೂಕು ಜಾನಪದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಎಲ್ಲವೂ ಆಧುನಿಕತೆಯತ್ತ ಹೊರಳುತ್ತಿದೆ. ಪಟ್ಟಣ ಭಾಗದ ಮಕ್ಕಳಿಗೆ ಸಂಸ್ಕೃತಿಯ ಪರಿಚಯವೇ ಇಲ್ಲದಂತಾಗಿರುವುದು ವಿಪರ್ಯಾಸ. ಆದರೆ ಗ್ರಾಮೀಣ ಮಕ್ಕಳಿಗೆ ಸ್ವಲ್ಪವಾದರೂ ಜಾನಪದದ ಪರಿಚಯವಿರುವುದು ಸಮಾಧಾನಕರ. ಆಸಾದಿ ಕಲೆ, ಡೊಳ್ಳು ಕುಣಿತ, ಸೋಮನ ಕುಣಿತ ಮುಂತಾದ ಜಾನಪದ ಕಲೆಗಳು ಉಳಿದರೆ ನಮ್ಮ ಮೂಲಸಂಸ್ಕೃತಿ ಉಳಿದಂತೆ.  ಅದಕ್ಕೆ ಪೂರಕವಾಗಿ ಇಂತಹ ಸಮ್ಮೇಳನಗಳು ಅತ್ಯವಶ್ಯಕ ಎಂದರು.
ಸಮಾರೋಪ ಭಾಷಣ ಮಾಡಿದ ಉಪನ್ಯಾಸಕ ಎಚ್.ಎಂ.ನಾಗರಾಜರಾವ್ ಮಾತನಾಡಿ, ಜಾನಪದವನ್ನು ಅರ್ಥ ಮಾಡಿಕೊಳ್ಳದೆ ಸಮಕಾಲೀನ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಂಕಗಳಿಕೆಯ ಹಪಹಪಿಯಲ್ಲಿ ಪೋಷಕರು ನಮ್ಮ ಸಂಸ್ಕೃತಿಯ ಪರಿಚಯವನ್ನು ಮಕ್ಕಳಿಗೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಹೆಚ್ಚು ಅಂಕ ಗಳಿಸಿ ಉನ್ನತ ಹುದ್ದೆಗೆ ಹೋಗುವುದಷ್ಟೆ  ಗುರಿಯಲ್ಲ. ನಮ್ಮ ಬದುಕನ್ನು ರೂಪಿಸಿಕೊಳ್ಳಲು ಜಾನಪದದ ಪರಿಚಯ ಅತ್ಯಂತ ಮುಖ್ಯ ಎಂಬುದನ್ನು ಪೋಷಕರು ಅರಿಯಬೇಕು. ಆ ಕಾರ್ಯಕ್ಕೆ ಇಂತಹ ಸಮ್ಮೇಳನಗಳು ಪೂರಕವಾಗಬೇಕು ಎಂದರು.
ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜೆ‌.ಬಿ.ಸುರೇಶ್ ಮಾತನಾಡಿ, ಜಾನಪದ ಪ್ರಾಕಾರದ ಪುನರುಜ್ಜೀವನಕ್ಕೆ ಪರಿಷತ್ತು ಸದಾ ಶ್ರಮಿಸುತ್ತಿದೆ. ಚಿಕ್ಕನಲ್ಲೂರಿನಂತಹ ಗ್ರಾಮೀಣ ಭಾಗದಲ್ಲಿ ಸಮ್ಮೇಳನ ಯಶಸ್ವಿಯಾಗಿ ನಡೆದುರುವುದು ಜಾನಪದದ ಬಗ್ಗೆ ಜನರಿಗೆ ಇರುವ ಪ್ರೀತಿಗೆ ಸಾಕ್ಷಿಯಾಗಿದೆ ಎಂದರು.
ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಜಾನಪದ ಪರಿಷತ್ , ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರ್, ಹಿರೇನಲ್ಲೂರು ಹೋಬಳಿ ಘಟಕದ ಅಧ್ಯಕ್ಷ  ಜಯಣ್ಣ,   ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ  ಲೋಕನಾಥ್, ಸಮ್ಮೇಳನದ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ ಕ್ಷೇತ್ರಪಾಲ್,ಬಿ. ರಾಜಣ್ಣ, ಸ್ವಾಮಿ, ರೇವಣಸಿದ್ಷಪ್ಪ, ಕಸಾಪ ತಾಲ್ಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಸೋಮೇಶ್, ಸಿದ್ದರಾಮಪ್ಪ ಇದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!