
ಕಡೂರು: ಸಮ್ಮೇಳನಗಳು ಕೇವಲ ಸಾಹಿತ್ಯ ಸಂಸ್ಕೃತಿಗಷ್ಟೆ ಮೀಸಲಾಗದೆ ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ನಡೆಸುವ ವೇದಿಕೆಯೂ ಆಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲ್ಲೂಕಿನ ಚಿಕ್ಕನಲ್ಲೂರು ಗ್ರಾಮದ ಕಲ್ಲೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ನಾಲ್ಕನೇ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ಅದೊಂದು ದೊಡ್ಡ ಆಸ್ತಿಯಾಗಿ ಉಳಿಯಬೇಕು. ಕಡೂರು ಜಾನಪದ ಕಲಾವಿದರ ತವರೂರು ಎಂಬುದು ಹೆಮ್ಮೆಯ ಸಂಗತಿ. ಜೀವನಾನುಭವವನ್ನು ನೇರವಾಗಿ ನಮಗೆ ತಿಳಿಸುವ, ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಶಕ್ತಿ ಜಾನಪದದಲ್ಲಿದೆ.ಜಾನಪದ ಸಂಸ್ಕೃತಿಯಲ್ಲಿ ಆಧುನಿಕ ಅವಿಷ್ಕಾರಗಳಿಗೂ ಮಿಗಿಲಾದ ಸಂಗತಿಗಳು ಅಡಗಿದೆ. ಆದರೆ ಆಧುನಿಕತೆಯ ಆಕರ್ಷಣೆಯಲ್ಲಿ ಜಾನಪದದ ಶ್ರೀಮಂತಿಕೆ ಮರೆಯಾಗುತ್ತಿದೆ. ಅದನ್ನು ಉಳಿಸಲು ಶ್ರಮಿಸುತ್ತಿರುವ ಪರಿಷತ್ತಿನ ಕಾರ್ಯ ಶ್ಲಾಘನೀಯ. ಇಂತಹ ಸಮ್ಮೇಳನಗಳು ಕೇವಲ ಜಾನಪದಕ್ಕೆ ಸೀಮಿತವಾಗದೆ ಕ್ಷೇತ್ರದ ಅಭಿವೃದ್ಧಿಯ ಚಿಂತನೆಗೂ ವೇದಿಕೆಯಾಗಬೇಕು.ಜಾನಪದ ಉಳಿಯಲಿ,ಬೆಳೆಯಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್ ಮಾತನಾಡಿ,ನಮ್ಮ ಮೂಲ ಸಂಸ್ಕೃತಿಯಾದ ಜಾನಪದದ ಸೊಗಡನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಿಷತ್ತು ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ, ಪ್ರತಿದಿನ ಜೀವನ ಆರಂಭವಾಗುವುದೇ ಜಾನಪದದಿಂದ. ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಜಾನಪದವನ್ನು ಉಳಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕಿದೆ ಎಂದರು.
ಸಾಹಿತಿ ಚಟ್ನಳ್ಳಿ ಮಹೇಶ್ ಆಶಯ ಭಾಷಣ ಮಾತನಾಡಿ, ಜಾನಪದ ಉಳಿಯಲು ಶ್ರದ್ಧೆ ಬಹು ಮುಖ್ಯ. ಇಂತಹ ಕಾರ್ಯಕ್ರಮಗಳು ಜಾನಪದದ ಬಗ್ಗೆ ಯುವಪೀಳಿಗೆಯಲ್ಲಿ ಆಸಕ್ತಿ ಮೂಡಿಸುವ ಮೂಲಕ ಜಾನಪದ ಸೊಗಡನ್ನು ಪುನರುಜ್ಜೀವಿಸುವ ನಿಟ್ಟಿನಲ್ಲಿ ಪೂರಕ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಜಾನಪದ ವಸ್ತು ಪ್ರದರ್ಶನ ಉದ್ಘಾಟಿಸಿದರು.ಹಿರಿಯ ಜಾನಪದ ಕಲಾವಿದರಾದ ಡಾ.ಮಾಳೆನಹಳ್ಳಿ ಬಸಪ್ಪ, ಮುಗುಳಿ ಲಕ್ಷ್ಮಿದೇವಮ್ಮ,ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್.ಮಲ್ಲೇಶಗೌಡ, ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಕೋಶಾಧ್ಯಕ್ಷ ಪ್ರಕಾಶ್ ನಾಯ್ಕ, ತಾಲ್ಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಸಮ್ಮೇಳನದ ವ್ಯವಸ್ಥಾಪನ ಸಮಿತಿ ಮುಖ್ಯಸ್ಥ ಕ್ಷೇತ್ರಪಾಲ, ನಿವೃತ್ತ ಶಿಕ್ಷಕ ರಾಜಪ್ಪ, ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರ್, ಆಸಂದಿ ಕಲ್ಲೇಶ್, ರಾಜು,ಪ್ರಕಾಶ್ ಇದ್ದರು.
———
ಜಾನಪದ ದೂರವಾಗುತ್ತಿರುವುದು ವಿಷಾಧ
ಆಧುನಿಕತೆಯ ಭರಾಟೆಯಲ್ಲಿ ಜಾನಪದ ಸಂಸ್ಕೃತಿ ದೂರವಾಗುತ್ತಿದೆ. ಗ್ರಾಮೀಣ ಭಾಗದಲ್ಲಿಯೇ ಜಾನಪದ ನೇಫಥ್ಯಕ್ಕೆ ಸರಿಯುತ್ತಿರುವುದು ಬೇಸರದ ಸಂಗತಿ ಎಂದು ಜಾನಪದ ಕಲಾವಿದ ಸಿ. ತಿಪ್ಪೇಶ್ ವಿಷಾಧಿಸಿದರು.
ಚಿಕ್ಕನಲ್ಲೂರಿನಲ್ಲಿ ಸೋಮವಾರ ನಡೆದ
ತಾಲ್ಲೂಕು ನಾಲ್ಕನೇ ಜಾನಪದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
35 ವರ್ಷಗಳಿಂದ ಜಾನಪದ ಪ್ರಾಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ನನಗೆ ಸಮ್ಮೇಳನದ ಅಧ್ಯಕ್ಷ ಪದವಿ ದೊರೆತಿರುವುದು ಜಾನಪದಕ್ಕೆ ಸಂದ ಗೌರವವಾಗಿದೆ. ಜಾನಪದವನ್ನುಳಿಸಲು ಜೀವನ ಪೂರ್ತಿ ಕ್ರಿಯಾಶೀಲನಾಗಿರುತ್ತೇನೆ. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ಕೊಟ್ಟಂತೆ ಅವರಿಗೆ ಜಾನಪದ ಸಂಸ್ಕೃತಿಯ ಬಗ್ಗೆಯೂ ಆಸಕ್ತಿ ಮೂಡಿಸಬೇಕು. ಸಮ್ಮೇಳನಗಳಿಂದ ಜಾನಪದದ ಬಗ್ಗೆ ಒಲವು ಮೂಡಿದರೆ ಸಮ್ಮೇಳನ ಸಾರ್ಥಕವಾಗುತ್ತದೆ ಎಂದರು.
———–
ಕ್ಷೇತ್ರದ 115 ಕೆರೆ ತುಂಬಿಸುವ ಭಧ್ರಾ ಉಪಣಿವೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. 2 ನೇ ಹಂತದ ಯೋಜನೆಗೆ 400 ಕೋಟಿ ಹಣ ಬಿಡುಗಡೆಯಾಗಿದೆ. ಚಿಕ್ಕನಲ್ಲೂರು ಕೆರೆಗೂ ನೀರು ಹರಿಸಲು ಶ್ರಮಿಸುತ್ತಿದ್ದೇನೆ.ತಾಲ್ಲೂಕಿನಲ್ ಲಿ ಶೀಘ್ರ ಗಾರ್ಮೆಂಟ್ಸ್ ಫ್ಯಾಕ್ಟರಿ ಆರಂಭವಾಗಲಿದ್ದು, 5 ಸಾವಿರ ಸ್ಥಳಿಯ ಉದ್ಯೋಗ ದೊರೆಯಲಿದೆ.ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಸದಾ ಗಮನ ಹರಿಸುತ್ತಿದ್ದೇನೆ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.

