
ಕಡೂರಿನ ಗ್ರಾಮಾಂತರ ಭಾಗದ ಯಾವುದೇ ರಸ್ತೆಗೆ ಹೋದರು ಬದಿಯಲ್ಲಿ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಹೈ ಟೆನ್ಶನ್ ತಂತಿಗಳು ತೀರ ಕೆಳಮಟ್ಟದಲ್ಲಿ ಇದ್ದು ಅಪಾಯಕ್ಕೆ ಎಡೆ ಮಾಡುವಂತಿದ್ದರೂ ಮೆಸ್ಕಾಂ ಅದರತ್ತ ಗಮನಹರಿಸದಿರುವುದು ಆತಂಕಕಾರಿಯಾಗಿದೆ.
ಕಡೂರು ಪಟ್ಟಣದಿಂದ ಕೇವಲ ಎರಡು ಕಿಲೋಮೀಟರ್ ದೂರವಿರುವ ಮಲ್ಲೇಶ್ವರ ಬಳಿಯ ಬೈಪಾಸ್ ಮೇಲ್ಸೇತುವೆ ಪಕ್ಕ ಇರುವ ಆವತಿ ಹಳ್ಳದ ಬಳಿ ವಿದ್ಯುತ್ ತಂತಿಗಳು ತೀರ ಕೆಳಮಟ್ಟದಲ್ಲಿ ಇವೆ. ಮುಂದುವರೆದು ಹೋದಂತೆ ಮಲ್ಲೇದೇವಿ ಹಳ್ಳಿ, ಕುಂತಿಹೊಳೆ ಮುಂತಾದ ಕಡೆ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಇರುವುದು ರಸ್ತೆಯಲ್ಲಿ ಯಾವುದಾದರೂ ಅತಿ ಎತ್ತರದ ವಾಹನ ಸಂಚರಿಸುವ ಸಮಯದಲ್ಲಿ ಅನಾಹುತ ಆಗುವ ಸಂಭವ ಅಧಿಕವಾಗಿದೆ.

ಕೇವಲ ಈ ರಸ್ತೆ ಒಂದೇ ಅಲ್ಲ, ಗ್ರಾಮೀಣ ಭಾಗದಲ್ಲಿ ಬಹಳಷ್ಟು ಕಡೆ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಇರುವುದು ಸಾಮಾನ್ಯ ಎನಿಸಿದೆ. ಆಕಸ್ಮಿಕವಾಗಿ ಏನಾದರೂ ಅವಘಡ ಸಂಭವಿಸಿದರೆ ಅದರ ಹೊಣೆ ಯಾರದ್ದು ಎಂಬ ಪ್ರಶ್ನೆ ಜನಸಾಮಾನ್ಯರದ್ದಾಗಿದೆ.
ಮೆಸ್ಕಾಂ ಇಲಾಖೆ ಸಿಬ್ಬಂದಿ ವಿದ್ಯುತ್ ಸರಬರಾಜಿಗೆ ತೊಂದರೆ ಉಂಟಾದ ಸಮಯದಲ್ಲಿ ಹಗಲು ರಾತ್ರಿ ಎನ್ನದೇ ಕಷ್ಟಪಡುವುದನ್ನು ನೋಡಿದ್ದೇವೆ. ಆದರೆ ತಾಲೂಕಿನ ಹಲವಾರು ಭಾಗದಲ್ಲಿ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಜ್ಯೋತಿ ಬಿದ್ದಿರುವುದು, ಅದಕ್ಕೆ ಬಳ್ಳಿಗಳು ಹಬ್ಬಿಕೊಂಡಿರುವುದು ನಿಜಕ್ಕೂ ಅಪಾಯಕಾರಿ. ಇದನ್ನು ತೆರವುಗೊಳಿಸಲು ಮೆಸ್ಕಾಂ ಗಮನಹರಿಸಬೇಕು. ಅವಘಡಗಳು ನಡೆಯುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅನಾಹುತ ನಡೆದ ನಂತರ ಅದರತ್ತ ಗಮನಹರಿಸುವುದು ಸ್ವೀಕಾರಾರ್ಹವಲ್ಲ. ಶಾಸಕರು ಸಹ ಇದರತ್ತ ಗಮನಹರಿಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕಾರ್ಯ ಮಾಡಬೇಕಿದೆ.
– ಬಾಲುಮಚ್ಚೇರಿ.
– ಬಾಲುಮಚ್ಚೇರಿ.

