Spread the love

ಕಡೂರು: ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಶಕ್ತಿದೇವತೆ ಸ್ವರ್ಣಾಂಬ ದೇವಿ ಬ್ರಹ್ಮ ರಥೋತ್ಸವ ಶುಕ್ರವಾರ ಸಾವಿರಾರು ಜನ ಸದ್ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿತು‌.
ಬೆಳಿಗ್ಗೆ ದೇವಿ‌ಮೂಲಸ್ಥಾನದಲ್ಲಿ ಅಭಿಷೇಕ, ಪೂಜೆಗಳು ನಡೆದ ನಂತರ ಶ್ರೀ ದೇವಿಯವರ ಗಜಾರೋಹಣೋತ್ಸವ ನೆರವೇರಿತು. ನಂತರ ಕನ್ನಿಕಾ ಪೂಜೆ ಹಾಗೂ ಪುರಸ್ಸರ ಕಲ್ಯಾಣೋತ್ಸವ ನಡೆಯಿತು.
ಅರಳೀಮರದಮ್ಮ, ಚೌಡ್ಲಾಪುರ ಕರಿಯಮ್ಮ ಹಾಗೂ ಮತ್ತಿತರ ಪರಿವಾರ ದೇವತೆಗಳ ಉಪಸ್ಥಿತಿಯಲ್ಲಿ ಸ್ವರ್ಣಾಂಬ ದೇವಿ ಉತ್ಸವ ವಿಗ್ರಹವನ್ನು ನೆರೆದಿದ್ದ ಜನರೆದುದು ಮೂರು ಸುತ್ತು ತರಲಾಯಿತು. ಈ ಸಂದರ್ಭದಲ್ಲಿ‌ ಮುತ್ತೈದೆಯರು ಶ್ರೀದೇವಿಗೆ ಅರಿಶಿನ ಸಮರ್ಪಿಸಿದ ನಂತರ ಶ್ರೀ ಮಾತೆಯ ಉತ್ಸವ ವಿಗ್ರಹವನ್ನು ಆಲಂಕೃತ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು.ದೇವಸ್ಥಾನ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ಮತ್ತು ಸದಸ್ಯರು ರಥಕ್ಕೆ ಪೂಜೆ ಸಲ್ಲಿಸಿ ಬಲಿಪ್ರಧಾನವಾದ ನಂತರ ನೆರೆದ ಭಕ್ತರು ರಥವನ್ನು ಉತ್ಸಾಹದಿಂದ ಎಳೆದು ಸಂಭ್ರಮಿಸಿದರು. ಪುರೋಹಿತ ದೇವೀಪ್ರಸಾದ್ ಶರ್ಮ ಮತ್ತು ತಂಡದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಸುಡುಬಿಸಿಲಿನ ನಡುವೆಯೂ ಸಾವಿರಾರು ಜನ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.ವಾಹನ ದಟ್ಟಣೆ ಹೆಚ್ಚಿದ್ದರಿಂದ ದೇವಸ್ಥಾನದಿಂದ ದೂರದಲ್ಲಿಯೇ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು.
ಪ್ರತೀ ವರ್ಷ ಒಟ್ಟು ಏಳುದಿನಗಳ ಪರ್ಯಂತ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಅವಧಿಯಲ್ಲಿ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ, ವುವಿಧ ಹೋಮಗಳು, ದೀಪಾರಾಧನೋತ್ಸವ, ಉಯ್ಯಾಲೋತ್ಸವ, ತೆಪ್ಪೋತ್ಸವಗಳು ನಡೆಯುತ್ತವೆ.ಶಕ್ತಿದೇವತೆಯ ಬ್ರಹ್ಮರಥೋತ್ಸವದಲ್ಲಿ ಗ್ರಾಮಸ್ಥರು ಭಕ್ತಿ ಭಾವದಿಂದ ತೊಡಗಿಸಿಕೊಳ್ಳುತ್ತಾರೆ.‌

ರಥೋತ್ಸವಕ್ಕೆ ಹೊರರಾಜ್ಯ,ಹೊರಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಡೂರು ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.ದೇವಸ್ಥಾನದ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

——–
ಬುಧವಾರ ಸಂಜೆ ದೀಪಾರಾಧನೋತ್ಸವ ನಡೆಯಿತು.ನಂತರ ದೇವಸ್ಥಾನದ ಧರ್ಮಾಧಿಕಾರಿಯಾಗಿದ್ದ ದಿ. ಎಂ.ಟಿ.ಶ್ರೀನಿವಾಸ್ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಎಂ.ಆರ್.ಧರ್ಮಣ್ಣ, ಎಂ.ವೈ‌.ಚಂದ್ರಶೇಖರ, ಹಿರಿಯ ಕಲಾವಿದ ಕಲ್ಲೇಶಪ್ಪ, ಶರತ್ ಕೃಷ್ಣಮೂರ್ತಿ ಡಾ.ಎಂ.ಟಿ.ಸತ್ಯನಾರಾಯಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಂ.ಟಿ‌‌.ಶ್ರೀನಿವಾಸ್ ಅವರ ಕುರಿತಾದ ಇ- ಪುಸ್ತಕ ” ಮಿತ್ರವತ್ಸಲ” ವನ್ನು ಬಿಡುಗಡೆಗೊಳಿಸಲಾಯಿತು.


ರಥಾರೋಹಣಕ್ಕೆ ಮುನ್ನ ದೇವಿ ವಿಗ್ರಹಕ್ಕೆ ಮುತ್ತೈದೆಯರು ಅರಿಶಿನ ಕುಂಕುಮ ಅರ್ಪಿಸುವುದು ಅಪರೂಪದ ವಿದ್ಯಮಾನ. ಬೇರೆಲ್ಲೂ ಕಾಣದ ಈ ಪದ್ದತಿ. ಕ್ವಿಂಟಾಲುಗಟ್ಟಲೆ ಅರಿಶಿನ ಇದಕ್ಕಾಗಿ ಬಳಕೆಯಾಗುತ್ತದೆ. ಉತ್ಸವವಿಗ್ರಹವನ್ನು ಹೊತ್ತ ಭಕ್ತರು ಅರಿಶಿನದಿಂದ ತೋಯ್ದು ಹೋಗುತ್ತಾರೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!