
.ಕಡೂರು: ಏಪ್ರಿಲ್ 20 ರಿಂದ 27 ರ ವರೆಗೆ ತಾಲ್ಲೂಕಿನ ಮಲ್ಲೇಶ್ವರದ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಸ್ವರ್ಣಾಂಬ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು, 20 ರಂದು ಶಂಖತೀರ್ಥದಲ್ಲಿ ಮೃತ್ತಿಕಾ ಸಂಗ್ರಹಣೆಯೊಂದಿಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗಲಿದೆ. ಪ್ರತಿ ನಿತ್ಯ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಹೋಮ, ಹವನ, ಪ್ರಸಾದ ವಿನಿಯೋಗ, ದುರ್ಗಾ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ ನೆರವೇರಲಿದೆ.
ಏಪ್ರಿಲ್ 23 ರ ಗುರುವಾರ ಚಿಕ್ಕರಥೋತ್ಸವ ಹಾಗೂ ಚಂಡಿಕಾ ಹೋಮ ನಡೆಯಲಿದ್ದು, ಅಂದು ಸಂಜೆ ದೀಪೋತ್ಸವ ಮತ್ತು ಮಲ್ಲೇಶ್ವರದ ಸ್ವರ್ಣಾಂಬ ದೇವಸ್ಥಾನದ ಧರ್ಮದರ್ಶಿಗಳಾಗಿದ್ದ ದಿ.ಎಂ.ಟಿ.ಶ್ರೀನಿವಾಸ ಅವರ ಸಂಸ್ಮರಣಾ ಕಾರ್ಯಕ್ರಮವಿದೆ. ಏಪ್ರಿಲ್ 24 ರಂದು ಶುಕ್ರವಾರ
ಬ್ರಹ್ಮರಥೋತ್ಸವ ನಡೆಯಲಿದೆ. 25 ರ ಶನಿವಾರ ಸಿಡಿಸೇವೆ,ವಸಂತೋತ್ಸವ, ಸಂಜೆ ಶ್ರೀದೇವಿಯವರ ಉಯ್ಯಾಲೋತ್ಸವ ನಡೆಯಲಿದ್ದು, ವಿದುಷಿ ಅಂಜಲಿ ಶ್ರೀರಾಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಏಪ್ರಿಲ್ 26 ರಂದು ಸತ್ಯನಾರಾಯಣ ಪೂಜೆ, 27 ರಂದು ಪುಷ್ಪಯಾಗ ಹಾಗೂ ಸಂಜೆ ಸ್ವರ್ಣಪುಷ್ಕರಿಣಿಯಲ್ಲಿ ತೆಪ್ಪೋತ್ಸವ ನಡೆದ ನಂತರ ಶ್ರೀದೇವಿಯವರ ಆಲಯ ಪ್ರವೇಶದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರಬೀಳಲಿದೆ. ಸರ್ವ ಭಕ್ತಾದಿಗಳು ಆಗಮಿಸಿ ರಥೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಧರ್ಮದರ್ಶಿ ಮಂಡಳಿ ಕಾರ್ಯಾಧ್ಯಕ್ಷ ಎಂ.ಟಿ.ಹನುಮಂತಯ್ತ, ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ, ಎಂ.ಆರ್.ಧರ್ಮಣ್ಣ, ಪುಟ್ಟಸ್ವಾಮಿ, ಪುಟ್ಟಪ್ಪ, ಎಂ.ಸಿ.ಮಾಲತೇಶ್ ಇದ್ದರು.
