Spread the love
ಕಡೂರು : ಬಂಜಾರ ಸಮುದಾಯದ ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಆಲ್ ಇಂಡಿಯಾ ಬಂಜಾರ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯಾಧ್ಯಕ್ಷ ವಿಜಯ್‌ಜಾದವ್ ತಿಳಿಸಿದರು.
 ಪಟ್ಟಣದ ಎಪಿಎಂಸಿ ಆವರಣದ ಅರಿವಿನ ಮನೆ ಸೌಹಾರ್ದ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
, ರಾಜ್ಯದ 31 ಜಿಲ್ಲೆಗಳಲ್ಲಿನ 3390 ತಾಂಡಗಳಲ್ಲಿ ಸಂಘಟನೆ ಗಟ್ಟಿಯಾಗಿದೆ. ಬಂಜಾರ ಸಮಾಜವು ಬಹುತೇಕ ತಾಂಡಗಳಲ್ಲಿ ಇಂದಿಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಅಂಬೇಡ್ಕರ್ ಅವರ ಸಂವಿಧಾನದ ಆಶಯದಡಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಸಮಯದಲ್ಲೆ ರಾಜ್ಯ ಸರಕಾರ ಒಳಮೀಸಲಾತಿ ಮಸೂದೆ ತಂದಿರುವುದು ಬಂಜಾರ ಸಮಾಜಕ್ಕೆ ಸಾಕಷ್ಟು ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಒಳಮೀಸಲಾತಿ ಜಾರಿಮಾಡಿದರೆ ಈ ಹಿಂದೆ ಇರುವ ಮೀಸಲಾತಿ ಪದ್ದತಿಯನ್ನು ಮುಂದುವರೆಸಬೇಕೆಂಬುದು ನಮ್ಮ ಆಗ್ರಹ.
ಒಳಮೀಸಲಾತಿ ವಿಚಾರವಾಗಿ ಬಂಜಾರ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಕಾನೂನು ಮೂಲಕ ಹೋರಾಟ ನಡೆಸಲಾಗುತ್ತದೆ.  ಸಂವಿಧಾನದ ವಿರುದ್ದವಾಗಿ ಒಳ ಮೀಸಲಾತಿ ಜಾರಿಗೆ ತಂದಿರುವುದು ಖಂಡನೀಯವಾಗಿದ್ದು, ಬಂಜಾರ ಸಮಾಜದ ಯಾವುದೇ ದತ್ತಾಂಶಗಳ ಸರ್ವೆ ನಡೆಸದೆ ರಾಜ್ಯದ ಬಹುತೇಕ ತಾಂಡಗಳಲ್ಲಿ  ತಮ್ಮ ಬದುಕಿಗಾಗಿ ಗುಳೆ ಹೋಗಿರುವ ಸಮಾಜದ ಬಂಧುಗಳನ್ನು ಸಮೀಕ್ಷೆ ಮಾಡದೆ ದತ್ತಾಂಶ ಸಿದ್ದಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂದರು.
 ವಿಶೇಷವಾಗಿ ರಾಜ್ಯದ 56ಸಾವಿರ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿರುವ ರಾಜ್ಯ ಸರ್ಕಾರ ಈ ಹಿಂದಿನ ಮೀಸಲಾತಿಯಂತೆ ನೇಮಕಾತಿ ಮಾಡುವ ಬಗ್ಗೆ ಆದೇಶ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಬಂಜಾರ ಸಮಾಜಕ್ಕೆ ಯಾವುದೇ ಅನ್ಯಾಯವಾಗದಂತೆ ಸೂಕ್ತ ಕ್ರಮವಹಿಸಿ ಸಮಾಜದ ಹಿತಕಾಪಾಡಬೇಕಿದೆ ಎಂದು ಒತ್ತಾಯಿಸಿದರು.
ಆಲ್ ಇಂಡಿಯಾ ಬಂಜಾರ ಸಂಘದ ನೂತನ ಜಿಲ್ಲಾಧ್ಯಕ್ಣ ಲಕ್ಷ್ಮಣ್ ನಾಯ್ಕ್ ಮಾತನಾಡಿ, ಜಿಲ್ಲಾದ್ಯಂತ ಬಂಜಾರ ಸಮಾಜದ ಸಂಘಟನೆಗೆ ಒತ್ತುಕೊಡಲಾಗುತ್ತದೆ. ಶೀಘ್ರದಲ್ಲೇ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಗುವುದು. ಒಳಮೀಸಲಾತಿ ವಿಚಾರಕ್ಕೆ ಬಂಜಾರ ಸಮಾಜಕ್ಕೆ ಅನ್ಯಾಯವಾಗಿರುವ ಬಗ್ಗೆ ಸಂಘಟನೆ ಮೂಲಕ  ಹೋರಾಟ ರೂಪಿಸಲಾಗುತ್ತದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಬಂಜಾರ, ಭೋವಿ, ಕೊರಚ-ಕೊರಮ ಸಮುದಾಯಗಳಿಗೆ 4.5ಶೇರಷ್ಟು ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದ್ದರು. ಆದರೆ ಈಗ 63ಸಮುದಾಯಗಳನ್ನು ಒಳಪಟ್ಟ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿ ನೀಡಿರುವುದು ಬಂಜಾರ ಸಮಾಜಕ್ಕೆ ಅನ್ಯಾಯ ವೆಸಗಿದಂತಾಗಿದೆ.‌ಮುಂದಿನ ದಿನಗಳಲ್ಲಿ ಸಮಾಜದ ಸಂಘಟನೆ ಮೂಲಕ ಹೋರಾಟ ಮುಂದುವರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಪುಟ್ಟನಾಯ್ಕ, ಬಾಸುನಾಯ್ಕ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶೈಲಾಬಾಯಿ, ಯುವ ಘಟಕದ ರಾಜ್ಯಾಧ್ಯಕ್ಷ ಸುನೀಲ್ ನಾಯ್ಕ, ರಾಜಾನಾಯ್ಕ ಮಂಜುನಾಥ್ ನಾಯ್ಕ, ರಘುನಾಯ್ಕ, ಜಯಂತ್ ಕುಮಾರ್ ಮತ್ತಿತರಿದ್ದರು.
————————————————————
 ಆಲ್ ಇಂಡಿಯಾ ಬಂಜಾರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಲಕ್ಷ್ಮಣ್ ನಾಯ್ಕ, ಬಿ.‌ಟಿ. ಗಂಗಾಧರ್ ನಾಯ್ಕ(ಜಿಲ್ಲಾ ಗೌರವಾಧ್ಯಕ್ಷ), ಹಳೆಹಟ್ಟಿ ಆನಂದ್ ನಾಯ್ಕ(ಜಿಲ್ಲಾ ಯುವ ಘಟಕ ಅಧ್ಯಕ್ಷ), ಕವಿತಾ ರಾಹುಲ್ ನಾಯ್ಕ(ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ), ಶ್ರೀನಿವಾಸ್ ನಾಯ್ಕ(ಕಡೂರು ತಾಲ್ಲೂಕು ಘಟಕದ ಅಧ್ಯಕ್ಷ) ಪದಾಧಿಕಾರಿಗಳಾಗಿ ಆಯ್ಕೆಗೊಂಡರು

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!