
ಕಡೂರು: ತಾಲ್ಲೂಕಿನ ಯಲ್ಲಂಬಳಸೆಯ ಮರುಳಸಿದ್ದೇಶ್ವರ ಪ್ರೌಢಶಾಲೆಗೆ ಡಿಡಿಪಿಐ ತಿಮ್ಮರಾಜು ಬುಧವಾರ ಭೇಟಿ ನೀಡಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ದತೆಗಳನ್ನು ಪರಿಶೀಲಿಸಿದರು.
ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಅವರು, ಪರೀಕ್ಷೆಯನ್ನು ಎದುರಿಸಲು ಭಯ ಬೇಡ. ಯಾವುದೇ ಉದ್ವೇಗವಿಲ್ಲದೆ ಪರೀಕ್ಷೆ ಎದುರಿಸಬೇಕು.ಪಾಠಗಳನ್ನು ಮನನ ಮಾಡಿಕೊಂಡು ಪರೀಕ್ಷೆಗೆ ಶಾಂತಚಿತ್ತರಾಗಿ ಹಾಜರಾಗಿ ಭಯಪಡದೆ ಉತ್ತರಿಸಬೇಕು.ಈ ಪರೀಕ್ಷೆ ನಿಮ್ಮ ಭವಿಷ್ಯಕ್ಕೆ ಭಧ್ರ ಬುನಾದಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡುಪರೀಕ್ಷೆಗೆ ಸಿದ್ದರಾಗಿ. ಯಾವುದೇ ಒತ್ತಡ ಬೇಡ ಎಂದು ಶುಭ ಹಾರೈಸಿದರು.
ತಾಲ್ಲೂಕು ಪಂಚಾಯಿತಿ ಇಓ ಸಿ.ಆರ್. ಪ್ರವೀಣ್ ಮಾತನಾಡಿ, ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲಾಗಿದೆ ಮೊದಲನೇ ಹಂತದ ಪೂರ್ವ ತಯಾರಿ ಪರೀಕ್ಷೆಯಲ್ಲಿಯಲ್ಲಿನ ಫಲಿತಾಂಶವು ಕುಂಠಿತಗೊಂಡಿದ್ದು, ಜಿಲ್ಲೆಯಲ್ಲಿ ಕಡೂರು ಶೈಕ್ಷಣಿಕ ವಲಯವು ಏಳನೇ ಸ್ಥಾನದಲ್ಲಿದೆ. ಕಳೆದ ಸಾಲಿನ 10ನೇ ತರಗತಿ ಫಲಿತಾಂಶವೂ ಜಿಲ್ಲೆಯಲ್ಲಿ ಕಡೂರು ಎಂಟನೇ ಸ್ಥಾನಕ್ಕೆ ಕುಸಿದಿತ್ತು. ಇದರಿಂದಾಗಿ ಪರೀಕ್ಷೆಗೆ ಉಳಿದಿರುವ 35 ದಿನಗಳಲ್ಲಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳು ಎಲ್ಲಾ ರೀತಿಯ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಧೈರ್ಯದಿಂದ ಪರೀಕ್ಷೆ ಎದುರಿಸಿ ಶೇಕಡ 100 ಫಲಿತಾಂಶವನ್ನು ದೊರಕಿಸಿಕೊಡಬೇಕಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ಮಾತನಾಡಿ, ಎಸ್.ಎಸ್.ಎಲ್.ಸಿ 2ನೇ ಹಂತದ ಪೂರ್ವಸಿದ್ದತಾ ಪರೀಕ್ಷೆಯಲ್ಲಿ ಈ ಶಾಲೆ ಶೇ 84.9 ಫಲಿತಾಂಶ ದಾಖಲಿಸಿದೆ. 52 ವಿದ್ಯಾರ್ಥಿಗಳಲ್ಲಿ ಏಳು ಜನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ವಿಷಯವಾರು ಪಾಠದಲ್ಲಿ ಹಿನ್ನಡೆಯಾಗಿರುವ ಬಗ್ಗೆ ಹೆಚ್ಚು ಒತ್ತುಕೊಟ್ಟು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಲು ವಿದ್ಯಾರ್ಥಿಗಳು ಸಿದ್ದರಾಗಬೇಕು. ಒಟ್ಟಾರೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದ್ದಾರೆಂಬ ಭಾವನೆ ಬಾರದಂತೆ ಅವರು ಓದಿನತ್ತ ಗಮನ ಹರಿಸಿ ಉತ್ತಮ ಫಲಿತಾಂಶ ಪಡೆಯಲು ಕುರಿತು ಪ್ರೇರೇಪಿಸಲು ಮುಂದಾಗಬೇಕಿದೆ ಎಂದರು.

ನಂತರ ಇತ್ತೀಚೆಗೆ ಸಾವಿಗೀಡಾದ ಶಾಲೆಯ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ ಡಿಡಿಪಿಐ ಅಧಿಕಾರಿಗಳ ತಂಡ ವಿದ್ಯಾರ್ಥಿನಿಯ ಫೋಷಕರಿಗೆ ಸಾಂತ್ವನ ಹೇಳಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ದೇವರಾಜು, ಇಸಿಡಿ ಕೆ.ಡಿ.ನಾಗರಾಜು, ಶಾಲಾ ಮುಖ್ಯಶಿಕ್ಷಕ ಧನಪಾಲನಾಯ್ಕ, ಪಿಡಿಒ ಶುಭಲಕ್ಷ್ಮಿ ಇದ್ದರು.
