Oplus_131072
Spread the love

ಬೆಳವಾಡಿಕರೆ ಹಳ್ಳದಿಂದ ನಾಗರಾಳು ಕೆರೆಗೆ ನೀರು ಹರಿಸಲು ಪಂಪ್ ಅಳವಡಿಸಿರುವುದು

ಕಡೂರು: ತಾಲ್ಲೂಕಿನ ನಾಗರಾಳು ಗ್ರಾಮದ ರೈತರು ತಮ್ಮ ಊರಿನ ಕೆರೆ ತುಂಬಿಸಲು ತಾವೇ ಕಾರ್ಯಪ್ರವೃತ್ತರಾಗಿ ಮಾಡಿದ ಸಾಂಘಿಕ ಯತ್ನಕ್ಕೆ ಯಶಸ್ಸು ದೊರೆತಿದೆ. ಕೆರೆಗೆ ಜೀವಜಲ ಹರಿಯಲಾರಂಭಿಸಿದೆ.
ನಾಗರಾಳು ಗ್ರಾಮದ ಕೆರೆ 92.88 ಎಕರೆ ವಿಸ್ತೀರ್ಣವಿದೆ. ಕೆರೆಭರ್ತಿಯಾದರೆ ಅಂತರ್ಜಲ ಮಟ್ಟ ಹೆಚ್ಚಿ ರೈತರಿಗೆ ಆಧಾರವಾದ ನೂರಾರು ಕೊಳವೆ ಭಾವಿಗಳಿಗೆ ಜೀವದಾನವಾಗುತ್ತದೆ. ಆಧಾರ.ಕೆರೆ ಭರ್ತಿಯಾದದ್ದು 1999 ರಲ್ಲಿ. ನಂತರ ಇಷ್ಟು ವರ್ಷ ಕೆರೆಗೆ ನೀರು ತುಂಬಲಿಲ್ಲ.
ಗ್ರಾಮಸ್ಥರೆಲ್ಲರು ಒಂದು ಯೋಚನೆ ಮಾಡಿದರು.ಕೆರೆಗೆ ನೀರಿನ ಮೂಲವಿದ್ದರೆ ಕೆರೆಯಲ್ಲಿ ಸದಾ ನೀರಿರುತ್ತದೆ.ಆ ಮೂಲ ಯಾವುದು ಎಂಬ ಪ್ರಶ್ನೆಗೆ ಉತ್ತರವಾಗಿ ಕಂಡದ್ದು ಬೆಳವಾಡಿ ಕೆರೆಯಿಂದ ಬರುವ ಹಳ್ಳದ ನೀರು. ನೀರು ಹರಿದು ಮಾರಿಕಣಿವೆಗೆ ಸೇರುತ್ತದೆ.ಈ ನೀರು ನಾಗಾರಳು ಕೆರೆಗೆ ಬರುವಂತಾದರೆ ಹೇಗೆ ಎಂಬ ಚಿಂತನೆ ಮೊಳೆಯಿತು. ನಾಗರಾಳು ಕೆರೆ ಏತ ನೀರಾವರಿ ಯೋಜನೆ ಎಂಬ ಹೆಸರಿನಲ್ಲಿ ಒಂದು ಗುಂಪು ರಚನೆಯಾಯಿತು.
ಕಾರ್ಯವಾಗಲು ಹಣ ಬೇಕು. ಗ್ರಾಮಸ್ಥರೆಲ್ಲ ಒಗ್ಗಟ್ಟಾಗಿ ಹಣ ಸಂಗ್ರಹಕ್ಕೆ ಮುಂದಾದರು. ಇವರ ಚಿಂತನೆಗೆ ಮೊದಲು ದೇಣಿಗೆ ನೀಡಿದ್ದು ಲಕ್ಷ್ಮೀರಂಗನಾಥ ಸ್ವಾಮಿ ದೇವಸ್ಥಾನ ಸಮಿತಿ. ಅವರು ನೀಡಿದ 5 ಲಕ್ಷ ರೂಪಾಯಿ ಬಹು ದೊಡ್ಡ ಶಕ್ತಿ ನೀಡಿತು. ಗ್ರಾಮಸ್ಥರ ದೇಣಿಗೆಯೂ ಸೇರಿ ಒಟ್ಟು 24 ಲಕ್ಷ ಹಣ ಸಂಗ್ರಹವಾಯಿತು. ಇದಕ್ಕಾಗಿ ಅಗತ್ಯವಿದ್ದ
100 ಕೆ.ವಿ.ಟ್ರಾನ್ಸ್ ಫಾರ್ಮರ್ ಅಳವಡಿಸಲಾಯಿತು.ಬೆಳವಾಡಿ ಕೆರೆಯಿಂದ ಬರುವ ಹಳ್ಳದಿಂದ ನಾಗರಾಳು ಕೆರೆಯ ತನಕ ಪೈಪ್ ಲೈನ್ ಮಾಡಿ ಪೈಪು ಅಳವಡಿಸಲು ಗ್ರಾಮದ ಯುವಕರು ಶ್ರಮದಾನಕ್ಕೆ ಮುಂದಾದರು. 10 ಇಂಚಿನ 289 ಪೈಪುಗಳನ್ನು ತಾವೇ  ಶ್ರಮದಾನ ಮಾಡಿ ಅಳವಡಿಸಿದರು.
ಸೆಪ್ಟೆಂಬರ್ 21 ರಿಂದ ಆರಂಭವಾದ ಈ ಕಾರ್ಯ ನವಂಬರ್ 21ಕ್ಕೆ ಕೇವಲ 60 ದಿನಗಳಲ್ಲಿ ಪೂರ್ಣಗೊಂಡಿತು. ಸಮೃದ್ಧ ನೀರು ನಾಗರಾಳು ಕೆರೆಗೆ ಹರಿಯಲಾರಂಭಿಸಿತು. ಸಾಂಘಿಕ ಯತ್ನಕ್ಕೆ ಫಲ ದೊರೆಯಿತು.

ಕೆರೆಗೆ ಬರುತ್ತಿರುವ ನೀರು

ಹಳ್ಳದಲ್ಲಿ ನೀರು ಹರಿಯುತ್ತಿರುವಾಗ ಮಾತ್ರ ಪಂಪ್ ಮಾಡಲಾಗುತ್ತದೆ.ಈ ಪ್ರಯತ್ನ ಯಶಸ್ವಿಯಾಗಲು ಗ್ರಾಮಸ್ಥರ ಪೂರ್ಣ ಸಹಕಾರ ಕಾರಣ. ಈ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎನ್ನುತ್ತಾರೆ ನಾಗರಾಳು ಗ್ರಾಮಸ್ಥರು.
ಹಲವಾರು ಯೋಜನೆಗಳು ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ರೂಪಿತವಾಗಿ ಕಾಮಗಾರಿ ಪೂರ್ಣಗೊಳ್ಳಲು ಹಲವಾರು ವರ್ಷಗಳೇ ಕಳೆಯುವ ಕಾಲದಲ್ಲಿ ಧೃಢ ನಿಶ್ಚಯ ಮಾಡಿ ಸಾಂಘಿಕ ಯತ್ನ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂಬುದಕ್ಕೆ ನಾಗರಾಳು ಗ್ರಾಮಸ್ಥರ ಕಾರ್ಯ ಸಾಕ್ಷಿಯಾಗಿದೆ.
Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!