ಕಡೂರು : ಸ್ಪರ್ದಾತ್ಮಕ ಜಗತ್ತಿನಲ್ಲಿ ಪ್ರತಿ ವಿಷಯದಲ್ಲೂ ಜ್ಞಾನ ದೊರಕಿಸಿಕೊಡುವುದು ಶಿಕ್ಷಣದ ಮೂಲ ಉದ್ದೇಶ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲ್ಲೂಕಿನ ಕಲ್ಲಾಪುರ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಉರ್ದು ಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರಕಿಕೊಡುವ ಆಶಯ ಸರಕಾರದ್ದಾಗಿದೆ. ಜೊತೆಗೆ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಶಿಕ್ಷಣದ ಜಿತೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಕನ್ನಡ ಶಾಲೆಗಳ ಮಕ್ಕಳ ಜೊತೆಗೂಡಿ ಉರ್ದು ಶಾಲೆಯ ಮಕ್ಕಳನ್ನು ಸಮ್ಮಿಲನಗೊಳಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ. ಈ ಬಗ್ಗೆ ಪ್ರಸ್ತಾಪಿಸಿರುವ ಶಿಕ್ಷಕ ಸಮುದಾಯದ ಬೇಡಿಕೆಗೆ ನಮ್ಮ ಸಹಮತವೂ ಇದೆ. ಉರ್ದು ಶಾಲೆಯ ಮಕ್ಕಳು ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ವೇದಿಕೆಯಲ್ಲಿ ಭಾಗವಹಿಸಲು ಸರಕಾರದ ಅನುಮತಿ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈಗಾಗಲೇ ಕಡೂರಿಗೆ ಮೌಲಾನಾ ಆಜಾದ್ ಮಾದರಿ ಶಾಲೆ ಮಂಜೂರಾಗಿದೆ. ಕಲ್ಲಾಪುರ ಗ್ರಾಮದಲ್ಲಿ 50 ಲಕ್ಷ ವೆಚ್ಚದಡಿ ಸಿಸಿ ರಸ್ತೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿರುವ ಎಲ್ಲಾ ರಸ್ತೆಗಳನ್ನು ಅಭಿವೃದ್ದಿಪಡಿಸಿಕೊಡಲಾಗುತ್ತದೆ ಎಂದರು.
ಬಿಇಒ
ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಹು ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಬಹಳಷ್ಟು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸಿದೆ. ಕಡೂರಿನ ಕೋಟೆಯ ಪ್ರದೇಶದಲ್ಲಿ ಶಾಸಕರ ಅಸಕ್ತಿಯ ಫಲವಾಗಿ 1-12 ತರಗತಿಯವರೆಗೆ ಅಲ್ಪಸಂಖ್ಯಾತರ ಮಕ್ಕಳಿಗಾಗಿ ಮೌಲಾನಾ ಆಜಾದ್ ಮಾದರಿ ಶಾಲೆಯು ಮಂಜೂರಾಗಿದೆ ಎಂದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ಮಂಜುನಾಥ್ ಮಾತನಾಡಿ, ಉರ್ದು ಶಾಲೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳ ಕೊರತೆ ಕಾಡುತ್ತಿದೆ. ಇದುವರೆಗೂ ಹೆಚ್ಚುವರಿ ಶಿಕ್ಷಕರ ನೇಮಕವಾಗಿಲ್ಲ. ಉರ್ದು ಭಾಷಾ ಶಿಕ್ಷಕರನ್ನು ಸಂಯೋಜಿಸುವ ಮೂಲಕ ಸಮಾನವಾದ ಶಿಕ್ಷಣದ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಫೀಕ್, ಗ್ರಾಪಂ ಮಾಜಿ ಅಧ್ಯಕ್ಷ ಹನೀಫ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಅಗ್ನಿ, ನಾಗರತ್ನಮ್ಮ, ಸೈಯದ್ ಸಲೀಂ, ಮುನಾವರ್ ಭಾಷಾ, ಸುಹೇಲ್, ಅಜ್ಗರ್‌ಅಲೀ, ಪ್ರೇಮ್‌ಕುಮಾರ್, ಆರೀಫ್, ಅಮ್ಜದ್, ರಮೇಶ್‌ನಾಯ್ಕ, ಧನಪಾಲನಾಯ್ಕ್, ಕರಿಬಡ್ಡೆ ರಾಜು ಇದ್ದರು.
