Oplus_0
Spread the love

ಎನ್.ಪಿ.ಮಂಜುನಾಥ ಪ್ರಸನ್ನ. ವಕೀಲರು.ಕಡೂರು.

18:ವರ್ಷಗಳ ನಂತರ ಆರ್‌ಸಿಬಿ ತಂಡ ವಿಜೇತವಾಯಿತು. ಎಲ್ಲದಕ್ಕಿಂತ ಮೊದಲು ವಿರಾಟ್ ಕೊಹ್ಲಿ ಭಾವಪರಶರಾಗಿ ಕ್ರಿಢಾಂಗಣದಲ್ಲೆ ಕಣ್ಣೀರಿಟ್ಟರು. ಇಡೀ ಕರ್ನಾಟಕ ಮತ್ತು ಭಾರತದಾದ್ಯಂತ ಇರುವ ಆರ್ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಆರ್ಸಿಬಿ ತಂಡದ 11 ಆಟಗಾರರು ಬೆಂಗಳೂರಿಗೆ ಆಗಮಿಸಿದಾಗ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದರು. ಭಾವೋದ್ರೇಕದಲ್ಲಿ ನೂಕುನುಗ್ಗಲು ಉಂಟಾಯಿತು.11 ಜನ ಬಾರದ ಲೋಕ ಸೇರಿದರು.

ಯಥಾಪ್ರಕಾರ ಆರೋಪ ಪ್ರತ್ಯಾರೋಪಗಳ ಸುರಿಮಳೆ ಆರಂಭವಾಯಿತು. ಈ ದುರಂತಕ್ಕೆ ಕಾರಣವೇನು? ಸರ್ಕಾರದ ವೈಫಲ್ಯವೇ… ಪೊಲೀಸ್ ಇಲಾಖೆಯ ವೈಫಲ್ಯವೇ…?

ಒಂದಿಷ್ಟು ವಿಮರ್ಶಾತ್ಮಕವಾಗಿ ಯೋಚನೆ ಮಾಡಿದಾಗ ಈ ಘಟನೆಯಲ್ಲಿ ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಸು ಯಾರಿಗೂ ಇಲ್ಲದೆ ಇರುವುದು ಎದ್ದು ಕಾಣುತ್ತಿದೆ. ಅನಿರೀಕ್ಷಿತ ದುರಂತ ನಡೆದು ಹೋಗಿದೆ. ಈ ಸಂದರ್ಭದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಜಟಾಪಟಿ ಎರಡು ಕಡೆಯ ನೈತಿಕತೆಯನ್ನು ಪ್ರಶ್ನಿಸುವಂತಿದೆ.

ದುರಂತ ಸಂಭವಿಸಿದ ಕೂಡಲೇ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸಿದವು. ಸರ್ಕಾರ ಯಾವುದೇ ಇರಲಿ ಇಂತಹ ಘಟನೆ ನಿರೀಕ್ಷಣೆ ಮಾಡಿರುವುದಿಲ್ಲ. ದುರ್ಘಟನೆ ಸಂಭವಿಸಿದ ನಂತರ ಸರ್ಕಾರದ ವಿವೇಚನೆಗೆ ಯಾವುದು ಸರಿ ಎನಿಸುತ್ತದೆ ಅದನ್ನು ಮಾಡಬೇಕು. ಮಾಡುತ್ತದೆ.

ಇನ್ನು ಸರ್ಕಾರದ ನಡೆಯ ಬಗ್ಗೆ ಅವಲೋಕಿಸಿದರೆ ಆರ್ಸಿಬಿ ತಂಡವನ್ನು ವಿಜೇತರಾದ ಮಾರನೇ ದಿನವೇ ಕರಸುವ ಅವಶ್ಯಕತೆ ಏನಿತ್ತು ಎಂಬುದು ಮೊದಲ ಪ್ರಶ್ನೆ. ಗೆದ್ದ ಕೂಡಲೇ ಆರ್ಸಿಬಿ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಾಚರಣೆ ಮಾಡಿದ್ದನ್ನು ಎಲ್ಲ ಕಡೆಯೂ ನೋಡಿದ್ದೇವೆ. ಬೆಂಗಳೂರಿನಲ್ಲೇ ಲಕ್ಷಾಂತರ ಜನರು ರಾತ್ರಿ ಇಡೀ ಕುಣಿದು ಕುಪ್ಪಳಿಸಿದ್ದರು. ಅಂತಹದರಲ್ಲಿ ಆರ್ಸಿಬಿ ಆಟಗಾರರು ಬೆಂಗಳೂರಿಗೆ ಬರುತ್ತಿದ್ದಾರೆ ಎಂದರೆ ಲಕ್ಷಾಂತರ ಜನ ಜಮಾಯಿಸುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಸರ್ಕಾರ ಆರ್ಸಿಬಿ ಆಟಗಾರರಿಗೆ ವಿಧಾನಸೌಧದ ಎದುರು ಗೌರವ ಸೂಚಿಸುವ ಕಾರ್ಯಕ್ರಮದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ಕಾರ್ಯಕ್ರಮ ಆಯೋಜನೆ ಯಾಗಿತ್ತು. ಒಂದೇ ದಿನ ಎರಡು ಕಡೆ ಕಾರ್ಯಕ್ರಮ ಆಯೋಜಿಸುವುದು ಸಮಂಜಸವಲ್ಲ ಎಂದು ಸರ್ಕಾರಕ್ಕೆ ಅರಿವಾಗಬೇಕಿತ್ತು. ಆರ್.ಸಿ.ಬಿ‌ ಆಟಗಾರರನ್ನು ಎಚ್.ಎ.ಎಲ್. ಏರ್ಪೋರ್ಟ್ ನಿಂದ ವಿಧಾನ ಸೌದದ ತನಕ ರಸ್ತೆ ಮೂಲಕ ಕರೆತರುವಾಗಲೇ ಅಲ್ಲಿ ಸೇರಿದ್ದ ಜನಸ್ತೋಮವನ್ನು ಕಂಡಾಗಲೂ ಉಳಿದೆಡೆ ಸಾಧ್ಯವಾದಷ್ಟು ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಅವಕಾಶವಿತ್ತು. ಆದರೆ ಅದನ್ನು ಮಾಡುವಲ್ಲಿ ಸರ್ಕಾರ ಎಡವಿತೆಂದೇ ಅರ್ಥೈಸಬಹುದು. ವಿಧಾನ ಸೌಧದ ಮುಂದೆ ಕಾರ್ಯಕ್ರಮ ನಡೆದ ನಂತರ ಚಿನ್ನಸ್ವಾಮಿಬಸ್ಟೇಡಿಯಂ ಕಾರ್ಯಕ್ರಮಕ್ಕೆ ಅದೇ ಜನರು ತೆರಳುತ್ತಾರೆಂದು ಗೊತ್ತಿದ್ದೂ ಸೂಕ್ತ ಬಂದೋಬಸ್ತ್ ಏರ್ಪಡಿಸುವಲ್ಲಿ ಸಂಬಂಧಿಸಿದವರು ವಿಫಲರಾದರು. ಪರಿಣಾಮ
11 ಜನರ ಪ್ರಾಣ ಹರಣವಾಯಿತು. ಏನೇ ಆದರೂ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತವಾದ ಕ್ರಮಗಳನ್ನು ಕೈಗೊಂಡಿದ್ದರೆ ಈ ದುರಂತವನ್ನು ತಡೆಯಬಹುದಿತ್ತು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ದುರಂತದಲ್ಲಿ ಸಾವನ್ನಪ್ಪಿದವರಿಗೆ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ನೀಡುವ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಘಟನೆ ಕುರಿತು ತನಿಖೆ ನಡೆಸಲು ಆದೇಶವಾಗಿದೆ. ಪರಿಹಾರದ ಮತ್ತ ಕಡಿಮೆಯಾಗಿದೆ ತಲಾ ಒಂದು ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ವಿಪಕ್ಷಗಳು ಆಗ್ರಹಿಸುವೆ. ಇದರ ನಡುವೆ ಆರ್‌ಸಿಬಿ ತಂಡ ಮೃತಪಟ್ಟವರಿಗೆ ತಲೆ 10 ಲಕ್ಷ ರೂಪಾಯಿ ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

ಈ ಕಾರ್ಯಕ್ರಮ ಆಯೋಜನೆಗೊಳ್ಳುವ ಮುನ್ನ ಸರ್ಕಾರ ಪೊಲೀಸ್ ಇಲಾಖೆಗೆ ಆದೇಶ ನೀಡಿತ್ತೇ? ಆದೇಶ ನೀಡುವವರು ಮೌಖಿಕವಾಗಿ ನೀಡಿದರೆ ಅದನ್ನು ತಿರಸ್ಕರಿಸುವ ಪರಿಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿಗಳು ಇರುತ್ತಾರೆಯೇ?
ಕೆಲ ಆದೇಶಗಳು ಮೌಖಿಕವಾಗಿರಲುಬಹುದೂ! ದುರಂತ ಸಂಭವಿಸಿದ ನಂತರ ಆ ಮೌಖಿಕ ಆದೇಶಗಳನ್ನು ಬಹಿರಂಗಪಡಿಸದಂತಹ ಸ್ಥಿತಿಯಲ್ಲಿ ಅಧಿಕಾರಿಗಳು ಇರಬಹುದು! ಆದರೆ ಗುಪ್ತಚರ ಇಲಾಖೆಯಲ್ಲಿರುವವರು ವಾಸ್ತವ ಸಂಗತಿಯನ್ನು ಸರ್ಕಾರದ ಗಮನಕ್ಕೆ ವಸ್ತುನಿಷ್ಠವಾಗಿ ನೀಡುವಂತಹ ದಕ್ಷ ವ್ಯವಸ್ಥೆ ಅನುಷ್ಠಾನ ಗೊಂಡು ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆಯ ಸಮನ್ವಯದಲ್ಲಿ ಇಂತಹ ಘಟನೆ ಸಂಭವಿಸದಂತೆ ಎಚ್ಚರ ವಹಿಸಬಹುದೆಂಬ ಅಭಿಪ್ರಾಯ ಪ್ರಾಜ್ಞರದ್ದಾಗಿದೆ‌.

ದುರಂತ ಕಳೆದು ಎರಡು ದಿನಗಳ ನಂತರ ರಾಜ್ಯ ಸರ್ಕಾರ ಬೆಂಗಳೂರು ನಗರ ಕಮಿಷನರ್ ದಯಾನಂದ್ ಹಾಗೂ ಒಂದಿಷ್ಟು ಜನ ಅಧಿಕಾರಿಗಳನ್ನು ಅಮಾನತ್ತು ಮಾಡಿದೆ. ಒಂದು ರೀತಿ ಈ ಕ್ರಮ ತಪ್ಪನ್ನು ಮುಚ್ಚಿಕೊಳ್ಳುವ ಯತ್ನ ಎಂದೆ ತೋರುತ್ತದೆ. ದುರಂತ ಸಂಭವಿಸಿದ ಸಮಯದಲ್ಲಿ ಅಲ್ಲಿದ್ದ ಪೊಲೀಸರು ಸಂಕಷ್ಟಕ್ಕೊಳ ಗಾದವರನ್ನು ಎತ್ತಿಕೊಂಡು ಓಡುತ್ತಿದ್ದ ದೃಶ್ಯ ಪೊಲೀಸರ ಕಾರ್ಯ ಹೆಮ್ಮೆ ಪಡುವಂತೆ ಇತ್ತು. ಅಗತ್ಯವಿತ್ತು ಇಲ್ಲವೋ ಆರ್ಸಿಬಿ ತಂಡವನ್ನು ರಾಜ್ಯ ಸರ್ಕಾರದಿಂದ ಗೌರವಿಸುವ ಕಾರ್ಯಕ್ರಮವನ್ನು ಇಟ್ಟುಕೊಂಡು ಅದೇ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಅವರ ಕಾರ್ಯಕ್ರಮವನ್ನು ಆಯೋಜಿಸುವಂತೆ ಅವಕಾಶ ನೀಡಿದ್ದು ಸರ್ಕಾರದ ತಪ್ಪು ನಡೆ ಎಂದೇ ಹೇಳಬೇಕಾಗುತ್ತದೆ. ಆನಂತರ ಆಗಿರುವ ದುರಂತಕ್ಕೆ ನೈತಿಕ ಹೊಣೆ ಹೊರದೆ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಪಡಿಸಿರುವುದು ಬಾಳೆಹಣ್ಣು ತಿಂದು ಸಿಪ್ಪೆಯನ್ನು ಮೇಕೆಯ ಮುಂದೆ ಎಸೆದಂತಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಮತ್ತು ಇಡೀ ದೇಶದಲ್ಲಿ ಅತ್ಯಂತ ದಕ್ಷ ಇಲಾಖೆ ಎಂದು ಹೆಸರು ಪಡೆದಿರುವ ಕರ್ನಾಟಕ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ನಡೆಯು ಇದಾಗಿದೆ ಎಂಬುದು ವಾಸ್ತವಿಕ ಸಂಗತಿಯಾಗಿದೆ.
ಇನ್ನು ಕೆ.ಎಸ್.ಸಿ.ಎ.ನಡೆ ಖಂಡಿತಾ ಸರಿಯಲ್ಲ. ಕೇವಲ 35 ಸಾವಿರ ಆಸನವಿರುವ ಕ್ರೀಡಾಂಗಣದಲ್ಲಿ ಕೇವಲ ಅಷ್ಟೆ ಜನಕ್ಕೆ ಪಾಸ್ ನೀಡುವ ವ್ಯವಸ್ಥೆ ಮಾಡಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಅದನ್ನು ಬಿಟ್ಟು ಮೊದಲು ಬಂದವರಿಗೆ ಆಧ್ಯತೆ ಎಂದದ್ದು ದೊಡ್ಟ ತಪ್ಪು. ಅದೂ ಅಲ್ಲದೆ ಲಕ್ಷಾಂತರ ಜನ ಬರುತ್ತಾರೆಂಬ ಜ್ಞಾನವಿರಲಿಲ್ಲವೆ? ಒಮ್ಮೆಲೆ ಜನ ಸಾಗರ ಎದುರಾದಾಗ ಕೇವಲ ಮೂರು ಗೇಟ್ ಮಾತ್ರ ತೆಗೆದದ್ದು ಮತ್ತೊಂದು ದೊಡ್ಡ ತಪ್ಪು. ದುರಂತದಲ್ಲಿ ಕೆ.ಎಸ್.ಸಿ.ಎ.ಸಹ ಪಾಲುದಾರವೆಂಬುದರಲ್ಲಿ ಅನುಮಾನವಿಲ್ಲ. ಇಷ್ಟಕ್ಕೂ ಕಾರ್ಯಕ್ರಮ ನಡೆಸಲು ಕೆ‌ಎಸ್.ಸಿ.ಎ. ಅನುಮತಿ ಪಡೆದಿತ್ತೆ ಎಂಬುದು ಸ್ಪಷ್ಟವಿಲ್ಲ.

ಈ ಸಂದರ್ಭದಲ್ಲಿ ಆರ್ಸಿಬಿ ತಂಡದ ಅಭಿಮಾನಿಗಳ ಬಗ್ಗೆ ಒಂದು ಮಾತನ್ನು ಹೇಳಲೇಬೇಕಾಗುತ್ತದೆ. ನಮ್ಮ ಭಾರತ ತಂಡ ವಿಶ್ವ ಕಪ್ ವಿಜೇತವಾಗಿದೆ. ಆಗ ಇಂತಹ ಸಂಭ್ರಮಾಚರಣೆ ನಡೆದಿರಲಿಲ್ಲ. ಒಂದು ರೀತಿಯ ದೇಶಿ ಕ್ರಿಕೆಟ್ ಆದ ಐಪಿಎಲ್ ಟೂರ್ನಿ, ಕೇವಲ ಫ್ರಾಂಚೈಸಿಗಳು ಲಾಭ ಮಾಡಿಕೊಳ್ಳುವ ಪಂದ್ಯಾವಳಿ ಇದು ಎಂಬ ಕನಿಷ್ಠ ಜ್ಞಾನ ಅಭಿಮಾನಿಗಳಲ್ಲಿ ಇರಬೇಕಿತ್ತು. ಅಭಿಮಾನ ಕೇವಲ ಅಭಿಮಾನವಾಗಿಯೇ ಇರದೇ ಹುಚ್ಚು ಅಭಿಮಾನ ತೋರಿದ ಪರಿಣಾಮ ಈ ದುರಂತ ಸಂಭವಿಸಿದೆ. ಆ ಅಭಿಮಾನ ಒಂದು ಮಿತಿಯಲ್ಲಿ ಇದ್ದಿದ್ದರೆ 11 ಕುಟುಂಬಗಳ ಕಣ್ಣೀರಿಗೆ ಆರ್ಸಿಬಿ ಗೆಲುವು ಕಾರಣವಾಗುತ್ತಿರಲಿಲ್ಲ ಎಂಬುದಂತೂ ಸತ್ಯ. ಅಭಿಮಾನಿಗಳು ಅದರಲ್ಲೂ ಯುವ ಸಂಕುಲ ಎತ್ತ ಕಡೆ ಸಾಗುತ್ತಿದೆ ಎಂಬ ಅವಲೋಕನವನ್ನು ಮಾಡಿಕೊಳ್ಳಬೇಕಿದೆ. ಈ ದುರಂತದಿಂದ ಪಾಠ ಕಲಿಯಲೇ ಬೇಕಿದೆ.
ಆದರೆ ಅಂದ ಅಭಿಮಾನಿಗಳು ಮತ್ತು ಸರ್ಕಾರ ಈ ಪಾಠ ಕಲಿಯಲು 11 ಜನರ ಪ್ರಾಣ ತ್ಯಾಗದ ಅವಶ್ಯಕತೆ ಇತ್ತೆ? ಎಂಬುದೇ ಉತ್ತರವಿಲ್ಲದ ಪ್ರಶ್ನೆಯಾಗಿದೆ.
ಸಾವಿಗೆ ಈಚೆಗೂ ಬೆಲೆ ಇಲ್ಲದ ಈ ಜಗತ್ತಿನಲ್ಲಿ, ಬದುಕು ಬಹಳ ಅಸ್ಥಿರವಾಗಿದೆ. ಪ್ರತಿ ಕ್ಷಣದ ಜಾಗರೂಕತೆ ಮಾತ್ರ ಭವಿಷ್ಯ ಕಟ್ಟಬಹುದು.
-ಎನ್.ಪಿ. ಮಂಜುನಾಥ ಪ್ರಸನ್ನ
ವಕೀಲರು, ಕಡೂರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!