
ಕಡೂರು: ತಾಲ್ಲೂಕಿನ ಮಲ್ಲೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ಸೋಮವಾರ ನಡೆಯಬೇಕಿತ್ತಾದರೂ ಯಾರೂ ನಾಮಪತ್ರ ಸಲ್ಲಿಸದೆ ಆ ಸ್ಥಾನ ಖಾಲಿ ಉಳಿದಿದೆ.
ಅಧ್ಯಕ್ಷೆಯಾಗಿದ್ದ ಯಶೋಧ ಧರ್ಮರಾಜ್ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗಧಿಯಾಗಿತ್ತು.ಮಲ್ಲೇಶ್ವರ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದೆ.
ಚುನಾವಣಾಧಿಕಾರಿಯಾಗಿದ್ದ ನರೇಗಾ ನಿರ್ದೇಶಕ ಎ.ಇ. ಕಲ್ಲಪ್ಪ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಹಾಜರಿದ್ದರೂ ನಿಗಧಿತ ಸಮಯದೊಳಗೆ ಯಾರೂ ನಾಮಪತ್ರ ಸಲ್ಲಿಸದೇ ಇದ್ದ ಕಾರಣ ಅಧ್ಯಕ್ಷ ಸ್ಥಾನ ಖಾಲಿಯಾಗಿಯೇ ಉಳಿದಿದೆ ಎಂದು ನಡಾವಳಿಯಲ್ಲಿ ಉಲ್ಲೇಖಿಸಲಾಯಿತು.
——
ಸಧ್ಯ ಮಲ್ಲೇಶ್ವರ ಗ್ರಾಮಪಂಚಾಯಿತಿಯ ಉಪಾಧ್ಯಕ್ಷರಾಗಿ ತುರುವನಹಳ್ಳಿ ಪ್ರಕಾಶ್ ಇದ್ದು, ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಸೇರಿದ್ದು ಪುರುಷರು ಅಧ್ಯಕ್ಷರಾಗುವ ಅವಕಾಶವಿಲ್ಲ. ಹಾಗಾಗಿ ಅಧ್ಯಕ್ಷರ ಸ್ಥಾನ ಖಾಲಿಯಾಗಿಯೇ ಉಳಿದರೆ ಉಪಾಧ್ಯಕ್ಷರು ಅಧಿಕಾರ ನಡೆಸುವ ಅವಕಾಶವಿದೆ. ಈ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲವೆಂಬ ಮಾತು ಕೇಳಿಬರುತ್ತಿದೆ.
