Spread the love

ತಾಲೂಕಿನ ತುರುವನಹಳ್ಳಿ ಗ್ರಾಮದ ಮನೆಯಂದರ ಬಳಿ ಬಂದ ಚಿರತೆ

ಕಡೂರುಃ ತಾಲ್ಲೂಕಿನಲ್ಲಿ ಚಿರತೆಗಳ ಸಂತತಿ ಹೆಚ್ಚುತ್ತಿದೆ. ಬಯಲು ಸೀಮೆಯ ಕುರುಚಲು ಕಾಡುಗಳಲ್ಲಿ, ಬೆಟ್ಟಗಳಲ್ಲಿ ಇರುತ್ತಿದ್ದ ಚಿರತೆಗಳು ಇತ್ತೀಚೆಗೆ ಗ್ರಾಮಗಳೊಳಕ್ಕೆ ಬರುತ್ತಿರುವುದು ಆತಂಕಕ್ಕೆಡೆ ಮಾಡಿದೆ.

ತಾಲ್ಲೂಕಿನ ಕೆರೆಸಂತೆ ಚಿರತೆಗಳಿಗೆ ಬಹುದೊಡ್ಡ ಆಶ್ರಯತಾಣವಾಗಿತ್ತು. ಇಲ್ಕಿನ ಬೆಟ್ಟ ಗುಡ್ಡಗಳು,ಪಾಳುಬಿದ್ದ ದೇವಸ್ಥಾನಗಳಲ್ಲಿ ಚಿರತೆಗಳು ವಾಸವಿದ್ದವು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಕಳೆದೆರಡು ವರ್ಷಗಳ ಹಿಂದೆ ಕೆರೆಸಂತೆ ದೇವಸ್ಥಾನಗಳು ಜೀರ್ಣೋದ್ಧಾರಗೊಂಡ ನಂತರ ಅಲ್ಲಿ ನೆಲೆಯಾಗಿದ್ದ ಚಿರತೆಗಳು ಬೇರೆಡೆಗೆ ಸಹಜವಾಗಿಯೇ ಹೊರಟು ಹೋದವು. ಇಲ್ಕಿಗೆ ಸಮೀಪವಿರುವ ಹೇಮಗಿರಿ ಬೆಟ್ಟದ ತಪ್ಪಲಲ್ಲಿ ಚಿರತೆಗಳು ಇಂದಿಗೂ ಇವೆ.
ಇತ್ತ ತಾಲ್ಲೂಕಿನ ಶಿವಗಂಗಾಗಿರಿ ಬೆಟ್ಟ, ಬಾಸೂರು ಕಾವಲು, ತಂಗಲಿ ಫಾರೆಸ್ಟ್ ನರ್ಸರಿ, ಮಲ್ಲೇಶ್ವರ,ತುರುವನಹಳ್ಳಿ ಗುಡ್ಡ,ಕೂಗೇ ಮಲ್ಲಪ್ಪನ ಗುಡ್ಡ ಮುಂತಾದೆಡೆ ಚಿರತೆಗಳು ನೆಲೆಯಾಗಿವೆ. ಕೆಲ ದಿನಗಳ ಹಿಂದೆ ಮಲ್ಲೇಶ್ವರ ಬಳಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಚಿರತೆಗೆ ವಾಹನ ಢಿಕ್ಕಿಯಾಗಿ ನಂತರ ಅದಕ್ಕೆ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಗಿತ್ತು. ಸಿಂಗಟಗೆರೆ ಬಳಿ ಚಿರತೆ ಮರಿಯೊಂದು ವಾಹನಕ್ಕೆ ಸಿಲುಕಿ ಮೃತಪಟ್ಟಿತ್ತು.
ಎರಡು ದಿನಗಳ ಹಿಂದೆ ತುರುವನಹಳ್ಳಿಯ ಮನೆಯೊಂದರ ಆವರಣದೊಳಕ್ಕೇ ಚಿರತೆಯೊಂದು ಬಂದಿರುವುದು ಆತಂಕಕ್ಕೆಡೆ ಮಾಡಿದೆ. ಚಿರತೆ ಬಹುಶಃ ನಾಯಿ ಹಿಡಿಯಲು ಬಂದಿರಬಹುದಾದರೂ ಮನುಷ್ಯರೇನಾದರೂ ಇದ್ದಿದ್ದರೆ ಅನಾಹುತವಾಗುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ.ಕೆಲ ದಿನಗಳ ಹಿಂದೆ ಮಲ್ಲೇಶ್ವರ ಬಳಿಯ ತೋಟದ ಮನೆಯೊಂದರ ಬಳಿ ಹತ್ತಾರು ಕುರಿಗಳು ಚಿರತೆ ಧಾಳಿಗೆ ಸಿಲುಕಿ ಸಾವನ್ನಪ್ಪಿದ್ದವು.
ಶಿವಗಂಗಾಗಿರಿ ಬೆಟ್ಟದಲ್ಲಿ ದೇವಸ್ಥಾನ ಕಲ್ಯಾಣ ಮಂಟಪಗಳಿವೆ. ಸದಾ ಕಾಲ ಜನಸಂದಣಿ ಯಿರುತ್ತದೆ. ಈ ಬೆಟ್ಟಕ್ಕೆ ತೀರ ಹತ್ತಿರದಲ್ಲಿರುವ ಮತ್ತೊಂದು ಬೆಟ್ಟದಲ್ಲಿ ಮೂರ್ನಾಲ್ಕು ಚಿರತೆಗಳು ಸದಾ ಕಾಣಸಿಗುತ್ತವೆ.
ಮಲ್ಲಿದೇವಿಹಳ್ಳಿ ಬಳಿಯ ಸಣ್ಣ ಬೆಟ್ಟವೊಂದರಲ್ಲಿ ಚಿರತೆಗಳು ಆಗಾಗ ದರ್ಶನ ನೀಡುತ್ತವೆ. ಬಾಸೂರು ಕಾವಲು ಅಪರೂಪದ ಕೃಷ್ಣಮೃಗಗಳ ವಾಸಸ್ಥಾನವಾಗಿದ್ದು, ಅಲ್ಲಿಯೂ ಚಿರತೆಗಳು ಹೆಚ್ಚಿವೆ. ಚಿರತೆಗಳು ರಸ್ತೆ ದಾಟುತ್ತಿರುವುದನ್ನು ಬಹಳಷ್ಟು ವಾಹನ ಸವಾರರು ನೋಡಿದ್ದಾರೆ.
ಅರಣ್ಯ ಇಲಾಖೆ ಚಿರತೆಗಳು ಗ್ರಾಮ ಸರಹದ್ದಿನೊಳಗೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರದ್ದಾಗಿದೆ.
——–
ಚಿರತೆಗಳು ಗ್ರಾಮದೊಳಗೆ ಬರುವುದು ಅಪರೂಪ. ತಮ್ಮ ವಾಸಸ್ಥಾನದಿಂದ ನೀರು ಕುಡಿಯಲು, ಅಥವಾ ಬೇಟೆಯಾಡಲು ಯಾವುದೇ ಪ್ರಾಣಿ ಸಿಗದಿದ್ದಾಗ ಸಹಜವಾಗಿ ಗ್ರಾಮಗಳ ಅಂಚಿಗೆ ಬರುತ್ತವೆ. ಹಾಗಾಗಿ ರೈತರು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಷೆಡ್ ಮುಂತಾದವುಗಳನ್ನು ತೆರೆದ ಸ್ಥಿತಿಯಲ್ಲಿಡದೆ ಮುಚ್ಚುವ ವ್ಯವಸ್ಥೆ ಮಾಡಬೇಕು. ರಾತ್ರಿ ಹೊತ್ತು ಹೊಲಗದ್ದೆಗಳಿಗೆ ತೆರಳುವವರು ಗುಂಪಾಗಿ ಹೋಗಬೇಕು. ಚಿರತೆ ಕಂಡುಬಂದರೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಇಲಾಖಾಧಿಕಾರಿಗಳು ಕೋರಿದ್ದಾರೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!