
ಕಡೂರು: ತಾಲ್ಲೂಕಿನ ಪ್ರಸಿದ್ಧ ಶಿವಗಂಗಾಗಿರಿ ಕ್ಷೇತ್ರದ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿರುವ ಘಟನೆ ನಡೆದಿದೆ.
ಮೃತ್ಯುಂಜಯ ದೇವಸ್ಥಾನದ ಬಾಗಿಲನ್ನು ಒಡೆದಿರುವ ಕಳ್ಳರು ಶಿವಗಂಗಾಗಿರಿ ಅಭಿವೃದ್ಧಿ ಸಮಿತಿ ಕಾರ್ಯಾಲಯಕ್ಕೂ ನುಗ್ಗಿ ಅಲ್ಲಿನ ಸಿಸಿ ಟಿವಿ ಕ್ಯಾಮೆರಾ ಸಿಸ್ಟಂ ಹಾಳು ಗೆಡವಿದ್ದಾರೆ. ಬೀರುವಿನಲ್ಲಿಟ್ಟಿದ್ದ ಸುಮಾರು 50 ಸಾವಿರ ರೂಪಾಯಿಗಳಷ್ಟು ಹಣ ದೋಚಿದ್ದಾರೆ. ಭಕ್ತರು ನೀಡಿದ್ದ 230 ಗ್ರಾಂ ಬೆಳ್ಳಿ ಯನ್ನು ಸಹ ಕೊಂಡೊಯ್ದಿದ್ದಾರೆ. ದೇವಸ್ಥಾನದ ಹುಂಡಿ ಒಡೆಯಲು ಯತ್ನಿಸಿದರೂ ಸಫಲರಾಗಿಲ್ಲ.
ಚೌಡಮ್ಮ ದೇವಿ ವಿಗ್ರಹದ ಕೊರಳಲ್ಲಿದ್ದ 4 ಗ್ರಾಂ ಚಿನ್ನದ ಮಾಂಗಲ್ಯ ಮತ್ತು 1.5 ಗ್ರಾಂ ತೂಕದ ಮೂಗು ನತ್ತನ್ನೂ ಕಳ್ಳರು ಕದ್ದಿದ್ದಾರೆ.
ಕಳ್ಳರು ಒಳಬರುವುದಕ್ಕೂ ಮುನ್ನ ದೇವಸ್ತಾನದಲ್ಲಿ ಅಳವಡಿಸಿರುವ ಸೈರನ್ ವೈರ್ ಕತ್ತರಿಸಿದ್ದಾರೆ. ಕಾರ್ಯಾಲಯದಲ್ಲಿದ್ದ ಸಿಸಿ ಟಿ ವಿ ಕ್ಯಾಮೆರಾ ಡಿವಿಆರ್ ಅನ್ನು ಹೊತ್ತೊಯ್ದಿದ್ದಾರೆ.
ಶಿವಗಂಗಾಗಿರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಲ್ಲೇದೇವರಹಳ್ಳಿ ದೇವರಾಜಪ್ಪ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.


