ಕಡೂರು: ರಾಷ್ಟ್ರೀಯ ಪಕ್ಷಗಳ ನಡುವೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ಜೆಡಿಎಸ್ ಸದಾ ಜನರೊಂದಿಗೇ ಇರುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸದಾ ಚಿಂತನೆ ನಡೆಸುವ ಪ್ರಬಲ ಪ್ರಾದೇಶಿಕ ಪಕ್ಷವಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಜನರೊಂದಿಗೆ ಜೆಡಿಎಸ್ ಕಾರ್ಯಕ್ರಮಕ್ಕಾಗಿ ಕಡೂರಿಗೆ ಏಪ್ರಿಲ್ 19 ರಂದು ಕಡೂರಿಗೆ ಯುವಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ದತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಪೂರ್ವ ಸಿದ್ದತೆ ಕುರಿತು ಮಾತನಾಡಿದ ವೈ.ಎಸ್‌ವಿ ದತ್ರ…
ಹಿಂದೆ ದೇವರಾಜ ಅರಸು, ಕೆಂಗಲ್, ಯಡಿಯೂರಪ್ಪ,ಬಂಗಾರಪ್ಪ,ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಮುಂತಾದವರು ಪ್ರಾದೇಶಿಕ ಪಕ್ಷ ಕಟ್ಟಿದರೂ ಯಶಸ್ವಿಯಾಗಲಿಲ್ಲ. ಹಾಗೆ ಯಶಸ್ವಿಯಾದ ಏಕೈಕ ಪಕ್ಷ ಜೆಡಿಎಸ್ ಇದೀಗ 25 ವರ್ಷಗಳು ಕಳೆದಿವೆ.ಇಂದಿಗೂ ಸಹ ಜೆಡಿಎಸ್ ಪಕ್ಷ ಜನಮನದಲ್ಲಿ ಉಳಿದಿದೆ. ಜೆಡಿಎಸ್ ಪ್ರಬಲವಾಗಿರುವ 63 ಕ್ಷೇತ್ರಗಳಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಕಡೂರಿನಲ್ಲಿ ಭಾನುವಾರ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಯುವ ಮುಖಂಡ ಚೇತನ್ ಕೆಂಪರಾಜು ಮತ್ತು ಇತರ ಯುವ ಕಾರ್ಯಕರ್ತರು ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ ಎಂದರು.
ಎಪಿಎಂಸಿ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 15 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆಯಿದೆ. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಎಪಿಎಂಸಿ ವೇದಿಕೆವರೆಗೆ ರೋಡ್ ಶೋ ಏರ್ಪಡಿಸಲಾಗಿದ್ದು, ನಿಖಿಲ್ ಕುಮಾರ ಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ ರೋಡ್ ಶೋ ಒಂದು ಗಂಟೆಯದಾಗಿದ್ದು, ಆ ನಂತರ ಸಭಾ ಕಾರ್ಯಕ್ರಮ 2-30 ಒಳಗೆ ಮುಗಿಯಲಿದೆ.ಜೆಡಿಎಸ್ ನ ಹಲವಾರು ಶಾಸಕರು, ಮುಖಂಡರೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು ಸದಾ ಕಾಲವೂ ಜೆಡಿಎಸ್ ನ ಭಧ್ರ ನೆಲೆ ಎಂಬುದು ಪದೇ ಪದೇ ಸಾಬೀತಾಗುತ್ತಲಿದೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ಸಹ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚಿನ ಮತ ದೊರೆತದ್ದು ಕಡೂರಿನಲ್ಲಿ. ಇದೀಗ ಜಿಲ್ಲಾ ಪರಿಷತ್,ತಾಲ್ಲೂಕು ಪಂಚಾಯಿತಿ,ಗ್ರಾಮಪಂಚಾಯಿತಿ ಚುನಾವಣೆಗಳು ನಡೆಯುವ ನಿರೀಕ್ಷೆಯಿದೆಯಾದರೂ ಹಲವಾರು ತಾಂತ್ರಿಕ ತೊಂದರೆಗಳಿವೆ. ಪ್ರಸ್ತುತ ಸರ್ಕಾರಕ್ಕೂ ಸಹ ಚುನಾವಣೆ ನಡೆಸುವ ವಿಚಾರದಲ್ಲಿ ಹಲವಾರು ಗೊಂದಲಗಳಿವೆ. ಅದೇನೇ ಇದ್ದರೂ ಈ ಎಲ್ಲ ಚುನಾವಣೆಗಳಿಗೆ ಪೂರ್ವಸಿದ್ದತೆ, ಜೆಡಿಎಸ್ ಪಕ್ಷಕ್ಕೆ ಸದಸ್ಯತ್ವ ಅಭಿಯಾನ ಜೊತೆಗೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ವೇದಿಕೆಯಾಗಿ ಈ ಕಾರ್ಯಕ್ರಮ ಮುನ್ನುಡಿ ಬರೆಯಲಿದೆ ಎಂದರು.
ಮುಖಂಡರಾದ ಪ್ರೇಂ ಕುಮಾರ್, ಬಿದರೆ ಜಗದೀಶ್, ಬಿ.ಟಿ.ಗಂಗಾಧರ ನಾಯ್ಕ, ಕೋಡಿಹಳ್ಳಿ ಮಹೇಶ್ವರಪ್ಪ,ಬಿ.ಪಿ.ನಾಗರಾಜು, ಪ್ರಶಾಂತ್, ಎರೇಹಳ್ಳಿ ರಘು ಮತ್ತಿತರರು ಇದ್ದರು.
