ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭಗೀರಥ ಜಯಂತಿಗೆ ಆಹ್ವಾನಿಸಿದ ಚಿಕ್ಕಮಗಳೂರು ಜಿಲ್ಲಾ ಉಪ್ಪಾರ ಸಮಾಜದ ಮುಖಂಡರು.
ಕಡೂರು: ಜೂನ್ 22 ರ ಭಾನುವಾರ ತಾಲ್ಲೂಕಿನ 9 ನೇ ಮೈಲಿಕಲ್ಲಿನಲ್ಲಿ ಭಗೀರಥ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಎಂದು ಉಪ್ಪಾರ ಸಮಾಜದ ಮುಖಂಡ ಜಿ.ಡಿ.ಶಂಕರಪ್ಪ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಈ ಹಿಂದೆ ರಂದು ಭಗೀರಥ ಜಯಂತಿ ಏರ್ಪಾಟಾಗಿತ್ತಾದರೂ ಕಡೇ ಘಳಿಗೆಯಲ್ಲಿ ಮಳೆಯ ಕಾರಣ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಜಿಲ್ಲಾ ಮತ್ತು ತಾಲ್ಲೂಕು ಉಪ್ಪಾರ ಸಂಘ ಹಾಗೂ ಸಮಾಜ ಮುಖಂಡರು ಸಭೆ ನಡೆಸಿ ಜೂನ್ 22 ರ ಭಾನುವಾರ ಜಯಂತಿ ಆಚರಣೆಗೆ ನಿರ್ಧರಿಸಲಾಗಿದೆ ಎಂದರು.
ಭಗೀರಥ ಜಯಂತಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ. ಸಮಾಜ ಮುಖಂಡರೊಡನೆ ಬೆಂಗಳೂರಿನ ಜೆ.ಪಿ.ನಗರದ ಅವರ ನಿವಾಸಕ್ಕೆ ತೆರಳಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. 22 ರಂದು ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್, ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಗೀರಥ ಪೀಠದ ಪಯರುಷೋತ್ತಮಾನಂದಪುರಿ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಕಾರ್ಯಕ್ರಮಕ್ಕೆ ಇತರೆ ಸಮಾಜ ಬಂಧುಗಳೂ ಸಹ ಪೂರ್ಣ ಸಹಕಾರ ನೀಡಿದ್ದಾರೆ. ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ಸಿಗೊಳಿಸಬೇಕೆಂದು ಅವರು ಕೋರಿದರು.
