ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಮುಂದುವರೆದಿದೆ. ಚಾರ್ಮಾಡಿ ಘಾಟ್ ನಲ್ಲಿರುವ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಬಳಿ ಮರವೊಂದು ಬಿದ್ದು ಕಾರೊಂದರಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದೆ.
ಧರ್ಮಸ್ಥಳದಿಂದ ಬರುತ್ತಿದ್ದ ಪ್ರವಾಸಿಗರ ಕಾರು ಅಣ್ಣಪ್ಪ ಸ್ವಾಮಿ ದೇವಸ್ಥಾನವನ್ನು ದಾಟುತ್ತಿದ್ದಂತೆ ಮರವೊಂದು ರಸ್ತೆಗೆ ಉರುಳಿದೆ. ಅಕಸ್ಮಾತ್ ಕಾರಿನ ಮೇಲೆ ಮರ ಬಿದ್ದಿದ್ದರೆ ದೊಡ್ಡ ಅನಾಹುತವಾಗುತ್ತಿತ್ತೆನ್ನಲಾಗಿದೆ.
ಪೊಲೀಸರು ಕೊಟ್ಟಿಗೆಹಾರದ ಯುವಕರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿ ಸುಗಮಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮೂಡಿಗೆರೆ ತಾಲ್ಲೂಕಿನಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಳೆ, ಗಾಳಿ ಬಿರುಸಾಗಿ ಸುರಿಯುತ್ತಿದೆ. ಘಾಟ್ ಪ್ರದೇಶದಲ್ಲಿ ಮಂಜು ಮುಸುಕಿದ ಹಾದಿಯಲ್ಲಿ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿದೆ.
